ತಾಲೂಕು ಮಟ್ಟದ ಕದಳಿ ಮಹಿಳಾ ಸಮಾವೇಶ ಅಕ್ಕನಿಗೆ ಸಂದ ಗೌರವ : ಡಾ.ರತ್ನಾ

Taluk Level Kadali Mahila Samavesh Akka Honored: Dr.Ratna

ಕದಳಿ ಮಹಿಳಾ ಸಮಾವೇಶ ಸಮಾರೋಪ ಸಮಾರಂಭ 

ಹಾರೂಗೇರಿ : ರಾಯಬಾಗ ತಾಲೂಕು ಮಟ್ಟದ ಕದಳಿ ಮಹಿಳಾ ಸಮಾವೇಶವು ಅಕ್ಕನಿಗೆ ಸಂದ ನಿಜವಾದ ಗೌರವವಾಗಿದೆ. ಮುಂಬರುವ ದಿನಗಳಲ್ಲಿ ವಚನ ಪಾಠ ಶಾಲೆಯನ್ನು ಪ್ರಾರಂಭಿಸುವ ಮೂಲಕ ವಚನ ಸಾಹಿತ್ಯವನ್ನು ನಾಡಿನಾದ್ಯಂತ ಮನೆಮನೆಗೆ ತಲುಪಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ಸರ್ವಾಧ್ಯಕ್ಷೆ ಡಾ.ರತ್ನಾ ಬಾಳಪ್ಪನವರ ಹೇಳಿದರು. 

ಪಟ್ಣಣದ ಬಸವಬ್ಯಾಕೂಡ ರಸ್ತೆಯ ನಿಶ್ಚಿಂತ ನೆಲೆಯಲ್ಲಿ ನಡೆದ ರಾಯಬಾಗ ತಾಲೂಕು ಮಟ್ಟದ ಪ್ರಥಮ ಕದಳಿ ಮಹಿಳಾ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ನುಡಿಗಳನ್ನಾಡುತ್ತ ಎಲ್ಲವನ್ನೂ ಮೀರಿದ ಮಾನವೀಯ ಗುಣಗಳು ಮತ್ತು ಸ್ತ್ರೀ ಕುಲದ ಬಗೆಗಿರುವ ಕಾಳಜಿ ಅಕ್ಕನ ವಚನಗಳನ್ನು ಹೊತರು ಪಡಿಸಿ ಇನ್ನಾವ ಸಾಹಿತ್ಯದಲ್ಲೂ ಸಿಗಲಾರವು. ಮಹಿಳೆ ತನ್ನ ಬದುಕಿನಲ್ಲಿ ಬರುವ ಕಷ್ಟಗಳನ್ನು ಹೇಗೆ ಮೆಟ್ಟಿನಿಲ್ಲಬೇಕೆಂಬ ಮಾರ್ಗದರ್ಶನ ಅಕ್ಕನ ವಚನಗಳಲ್ಲಿ ಅಭಿವ್ಯಕ್ತಗೊಂಡಿವೆ ಎಂದು ಹೇಳಿದರು. 

ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿದ್ದ ಹಂದಿಗುಂದ-ಆಡಿ ಶ್ರೀ ಸಿದ್ಧೇಶ್ವರ ವಿರಕ್ತಮಠದ ಪೂಜ್ಯಶ್ರೀ ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡುತ್ತ ಮಹಿಳೆಯರ ಅನುಭವಗಳನ್ನು ಮಹಿಳೆ ಮಾತ್ರ ವ್ಯಕ್ತಪಡಿಸಲು ಸಾಧ್ಯ. ಮಹಿಳೆಯರಲ್ಲಿ ಸ್ವಂತಿಕೆಯಿದೆ. ಸ್ವಾನುಭವವೇ ಮಹಿಳಾ ಸಾಹಿತ್ಯದ ಅಂತಿಮ ಸತ್ಯವಾಗುತ್ತದೆ. ಆಧುನಿಕ ಬದುಕಿನಲ್ಲಿ ಮಹಿಳೆಯರು ಶಿವಶರಣೆಯರ ತತ್ವಗಳನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು. 

ಈವೇಳೆ ಅಂತರಾಷ್ಟ್ರೀಯ ಮಟ್ಟದ ಖ್ಯಾತ ಚಿತ್ರ ಕಲಾವಿದೆ ರಾಯಬಾಗದ ಅಶಾರಾಣಿ ನಡೋಣಿ ಮತ್ತು ಲೆಕ್ಕ ಪರಿಶೋಧಕ ಶಿವಾನಂದ ಬಾಗೇವಾಡಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಶಿವಸುದ್ದಿಯ ಶೋಭಾ ಲಕ್ಷ್ಮಣ ಪಾಟೀಲ ಅವರಿಗೆ ಕದಳಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಮಧ್ಯಾಹ್ನ ತಾಲೂಕಾಧ್ಯಕ್ಷೆ ಅನುಸೂಯಾ ಮುಳವಾಡ ಅಧ್ಯಕ್ಷತೆಯಲ್ಲಿ ನಡೆದ ವಚನಗಳಲ್ಲಿ ಮಹಿಳೆ ಕುರಿತ ಚಿಂತನಗೋಷ್ಠಿಯಲ್ಲಿ ಅಥಣಿಯ ಡಾ.ಪ್ರಿಯಂವದಾ ಹುಲಗಬಾಳಿ ಉಪನ್ಯಾಸ ನೀಡಿದರು. ನಂತರ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಲಾಯಿತು. 

ಮಹಿಳಾ ಕದಳಿ ವೇದಿಕೆ ಜಿಲ್ಲಾ ಘಟಕ ಗೌರವಾಧ್ಯಕ್ಷೆ ರಾಜೇಶ್ವರಿ ಕವಟಗಿಮಠ, ಜಿಲ್ಲಾಧ್ಯಕ್ಷೆ ಪ್ರೇಮಕ್ಕ ಅಂಗಡಿ, ಪ್ರಧಾನ ಕಾರ್ಯದರ್ಶಿ ಗೌರಮ್ಮ ಕರ್ಕಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಅಶೋಕ ಮಳಗಲಿ, ಪ್ರಾಧ್ಯಾಪಕಿ ತ್ರೀಶಲಾ ನಾಗನೂರ, ಶರಣಶ್ರೀ ಐ.ಆರ್‌.ಮಠಪತಿ, ಎಸ್‌.ಎಲ್‌.ಬಾಡಗಿ, ಅನೀತಾ ತಾರಿಹಾಳಕರ, ಭಾರತಿ ಹೀರೇಮಠ, ಜಯಶ್ರೀ ರಾಚಪ್ಪನವರ, ಆಶಾರಾಣಿ ಹೊಣವಾಡೆ, ಸಿದ್ದಮ್ಮ ಯಲಶೆಟ್ಟಿ, ರಶ್ಮಿ ಮುಳವಾಡ, ದ್ರಾಕ್ಷಾಯಣಿ ಹುಬ್ಬಳ್ಳಿ, ರಂಜನಾ ಬುಲಬುಲೆ, ಸುವರ್ಣಾ ಬಡಿಗೇರ, ಸಂಗೀತಾ ಕುಂಬಾರ, ಮಹಾದೇವಿ ಪಾಟೀಲ, ಲಕ್ಷ್ಮೀ ಹುದ್ದಾರ, ಜಯಶ್ರೀ ಚುನಮುರೆ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳ ಮಹಿಳಾ ಘಟಕಗಳ ಅಧ್ಯಕ್ಷರು ಉಪಸ್ಥಿತರಿದ್ದರು. 

ಕಾರ್ಯಕ್ರಮವನ್ನು ತಾಲೂಕಾಧ್ಯಕ್ಷೆ ಅನುಸೂಯಾ ಮುಳವಾಡ ಸ್ವಾಗತಿಸಿದರು. ವಾಣಿ ಚೌಗಲಾ, ರೇಖಾ ಗುಪ್ತೆ, ಜ್ಯೋತಿ ಸುಳ್ಳದ, ಸುಜಾತಾ ಉಮರೆ, ಗೀತಾ ಮಾಳಶೆಟ್ಟಿ ನಿರೂಪಿಸಿದರು.