ಕಡ್ಡಾಯ ಮತ್ತು ಉಚಿತ ಶಿಕ್ಷಣ ಹಕ್ಕು ಕಾಯ್ದೆ-2009 ರಡಿ ಮಕ್ಕಳು ಈ ಹಕ್ಕಿನಿಂದ ವಂಚಿತರಾಗದಂತೆ ಕ್ರಮವಹಿಸಿ

ಕಡ್ಡಾಯ ಮತ್ತು ಉಚಿತ ಶಿಕ್ಷಣ ಹಕ್ಕು ಕಾಯ್ದೆ-2009 ರಡಿ ಮಕ್ಕಳು ಈ ಹಕ್ಕಿನಿಂದ ವಂಚಿತರಾಗದಂತೆ ಕ್ರಮವಹಿಸಿ Take steps to ensure that children are not deprived of this right under the Right to Free and Compul

                       ಧಾರವಾಡ 20: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯರಾದ ಶೇಖರಗೌಡ ರಾಮತ್ನಾಳ ಅವರು ನವೆಂಬರ್ 17, 2025 ರಂದು ಧಾರವಾಡದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿಗಳೊಂದಿಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣ ಹಕ್ಕು ಕಾಯ್ದೆ-2009ರ ಮೇಲ್ವಿಚಾರಣೆ ಮತ್ತು ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು. 

ಕಡ್ಡಾಯ ಮತ್ತು ಉಚಿತ ಶಿಕ್ಷಣ ಹಕ್ಕು ಕಾಯ್ದೆ-2009 ಸೆಕ್ಷನ್‌-11 ರನ್ವಯ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮೇಲ್ವಿಚಾರಣೆ ಮತ್ತು ಪ್ರಗತಿ ಪರೀಶೀಲನೆಯ ಅಧಿಕಾರವನ್ನು ಹೊಂದಿದೆ. ಭಾರತ ಸಂವಿಧಾನದ ಪರಿಚ್ಛೇಧ 21(ಎ) ರಡಿಯಲ್ಲಿ ದೇಶದ ಸಮಸ್ತ ಮಕ್ಕಳಿಗೂ ಶಿಕ್ಷಣವನ್ನು ಉಚಿತವಾಗಿ ನೀಡಿದೆ. ಮಕ್ಕಳು ಈ ಹಕ್ಕಿನಿಂದ ವಂಚಿತರಾಗದಂತೆ ಕ್ರಮವಹಿಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

                 ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ಕರೆತನ್ನಿ. ಅವಶ್ಯವಿದ್ದಲ್ಲಿ ಗ್ರಾಮ ಪಂಚಾಯತ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಶಿಕ್ಷಣ ಕಾರ್ಯಪಡೆಯ ಸಹಾಯವನ್ನು ಪಡೆಯಿರಿ ಮತ್ತು ಸಮಿತಿಯನ್ನು ಸಕ್ರಿಯಗೊಳಸಿ ಎಂದರು. ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಮಕ್ಕಳ ರಕ್ಷಣಾ ನೀತಿಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದರು. ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಗೆ ಹಾಜರಾಗದೇ ಇರುವ ಮಕ್ಕಳ ಅನುಸರಣೆ ಮಾಡಿ ಮಕ್ಕಳು ಮುಖ್ಯ ವಾಹಿನಿಗೆ ಬರುವಂತೆ ಕ್ರಮವಹಿಸಲು ತಿಳಿಸಿದರು. 

                ಮಕ್ಕಳು ಶಾಲೆಗೆ ಬರುವಂತೆ ವಾತಾವರಣ ನಿರ್ಮಾಣವು ನಮ್ಮೆಲ್ಲರ ಜವಾಬ್ದಾರಿಗಳಲ್ಲೊಂದು ಶಾಲೆಯಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಿ ಸವೋಚ್ಛ ನ್ಯಾಯಾಲಯದ ಆದೇಶದನ್ವಯ ಶಾಲೆಯಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆಗಳನ್ನು ಕಲ್ಪಿಸುವುದು ಅತ್ಯವಶ್ಯಕವಾಗಿದೆ. ಇನ್ನೂ ಯಾವುದೇ ಶಾಲೆಗಳಲ್ಲಿ ಇಂತಹ ಮೂಲಭೂತ ಸೌಲಭ್ಯ ಇಲ್ಲದಿದ್ದಲ್ಲಿ ಕೂಡಲೇ ಸೌಲಭ್ಯವನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು.

             ಶಾಲೆಯ ಆವರಣದಲ್ಲಿ ತಂಬಾಕು ಮತ್ತು ತಂಬಾಕು ಉತ್ಪನ್ನವನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ, ಕೋಪ್ಟಾ ಕಾಯ್ದೆಯನ್ವಯ ಶಾಲೆಯ ವ್ಯಾಪ್ತಿಯ 200 ಮೀಟರನೊಳಗೆ ಯಾರಾದರೂ ತಂಬಾಕು ಮತ್ತು ತಂಬಾಕು ಉತ್ಪನ್ನವನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಲ್ಲಿ ಸ್ಥಳೀಯ ಸರ್ಕಾರ ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಯೊಂದಿಗೆ ಅಂತಂಹ ಮಾರಾಟ ಕೇಂದ್ರಗಳನ್ನು ತೆಗೆದುಹಾಕಿಸಲು ಕ್ರಮಕೈಗೊಳ್ಳಿ ಎಂದರು. 

              ಅನುಮತಿ ಪಡೆಯದೇಯೇ ವಸತಿ ಶಾಲೆ ನಡೆಸುತ್ತಿರುವುದು, ಅಕ್ರಮವಾಗಿ ವಸತಿ ಶಾಲೆಗಳ ಪರೀಕ್ಷೆಗೆ ತರಬೇತಿ (ಕೋಚಿಂಗ್) ಕೇಂದ್ರ ನಡೆಸುತ್ತಿರುವುದು ಕಂಡುಬರುತ್ತಿದೆ. ಆದ್ದರಿಂದ ಇಂತಹ ಸಂಸ್ಥೆಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಂಡು ವರದಿ ರಾಜ್ಯ ಮಕ್ಕಳ ರಕ್ಷಣಾ ಆಯೋಗಕ್ಕೆ ಸಲ್ಲಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.  

               ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್‌.ಎಸ್‌. ಕೆಳದಿಮಠ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಜಾವೂರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಾಯತ್ರಿ ಸಜ್ಜನ, ಅಶೋಕ ಸಿಂದಗಿ, ಮಹಾದೇವಿ ಮಾಡಲಗೇರಿ, ಆರ್‌.ಆರ್‌. ಸದಲಗಿ, ಹಾಗೂ ಅಕ್ಷರ ದಾಸೋಹ ಅಧಿಕಾರಿ ರೂಪಾ ಪುರಂಕರ ಹಾಗೂ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.