ಜವಾಬ್ದಾರಿ ಅರಿತು ಸಕ್ರಿಯವಾಗಿ ಮತದಾನದಲ್ಲಿ ಭಾಗವಹಿಸಿ: ವಜೂಭಾಯಿ ವಾಲಾ

ಬೆಂಗಳೂರು, ಜ.25, ದೇಶದ ನಾಗರಿಕರು  ತಮ್ಮ ಜವಾಬ್ದಾರಿ ಅರಿತು ಚುನಾವಣಾ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರೆ ಬಲಿಷ್ಠ ರಾಷ್ಟ್ರ ನಿರ್ಮಿಸಲು ಸಾಧ್ಯ ಎಂದು ರಾಜ್ಯಪಾಲ ವಜೂಬಾಯಿ ರುಡಾಬಾಯಿವಾಲಾ ಹೇಳಿದ್ದಾರೆ. ನಮಗೆ ಸ್ವಾತಂತ್ರ್ಯ ದೊರಕಿಸಿಕೊಡಲು ಅನೇಕ ಮಹಾನುಭಾವರು ಕಷ್ಟ ಪಟ್ಟಿದ್ದಾರೆ. ಅವರೆಲ್ಲರ ಕನಸು ಸಾಕಾರಗೊಳ್ಳಲು, ಸದೃಢ ಭಾರತ ನಿರ್ಮಾಣಕ್ಕೆ ನಾವೆಲ್ಲಾ ನಿಸ್ವಾರ್ಥದಿಂದ ಶ್ರಮಿಸಬೇಕು. ದೇಶಕಟ್ಟುವ ನಿಟ್ಟಿನಲ್ಲಿ ಎಲ್ಲರೂ  ಜವಾಬ್ದಾರಿಯಿಂದ ಕೆಲಸ ಮಾಡೋಣ, ಮತದಾನದ ಮಹತ್ವ ಅರಿತು, ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸೋಣ ಎಂದಿದ್ದಾರೆ.

ನಗರದ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಕೇಂದ್ರ ಚುನಾವಣಾ ಆಯೋಗ ಆಯೋಜಿಸಿದ್ದ 10ನೇ ರಾಷ್ಟ್ರೀಯ ಮತದಾರರ ಜಾಗೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೇಶದ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಾಜ್ಯಪಾಲ ವಜೂಬಾಯಿ ರುಡಾಬಾಯಿವಾಲಾ ಭಾಗವಹಿಸಿದ್ದರು. 

ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಮತದಾರರ ಜವಾಬ್ದಾರಿ ಬಗ್ಗೆ ಮಾಹಿತಿ ನೀಡಿದರು. ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದ ಹಲವು ಮಹನೀಯರು ಹಾಗೂ ಸಂಘಟನೆಗಳಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಬಳಿಕ ಯುವ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ನಾವೆಲ್ಲಾ ನಿರ್ಭಯವಾಗಿ ಮತಚಲಾವಣೆ ಮಾಡುತ್ತೇವೆ ಎಂಬ ಪ್ರತಿಜ್ಞೆ ಯನ್ನು ಮತದಾರರಿಗೆ ಭೋದಿಸಲಾಯಿತು. ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್, ಅಧಿಕಾರಿಗಳು ಉಸ್ಥಿತರಿದ್ದರು.