ತಾಲೂಕ ಪಂಚಾಯತ ಕಚೇರಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಹಾಯವಾಣಿ ಆರಂಭಿಸಿ: ಜಿಲ್ಲಾಧಿಕಾರಿ ದಿವ್ಯ ಪ್ರಭು
ಧಾರವಾಡ ಮಾರ್ಚ್ 03: ಹಿಂದಿನ ವರ್ಷಗಳ ಮಾಹಿತಿ ಹಾಗೂ ಅನುಭವದ ಆಧಾರದಲ್ಲಿ ಜಿಲ್ಲಾಡಳಿತದಿಂದ 2025-2026 ನೇ ಸಾಲಿನ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದಾದ 78 ಗ್ರಾಮಗಳನ್ನು ಗುರುತಿಸಲಾಗಿದ್ದು, ತಹಶೀಲ್ದಾರ ಮತ್ತು ತಾಲೂಕು ಪಂಚಾಯತ ಅಧಿಕಾರಿಗಳು ಅತ್ಯಂತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಎಲ್ಲ ತಾಲೂಕು ಪಂಚಾಯತ ಕಚೇರಿಗಳಲ್ಲಿ, ನಗರ ಸ್ಥಳೀಯ ಸಂಸ್ಥೆಗಳ ಕಚೇರಿಯಲ್ಲಿ ಕುಡಿಯುವ ನೀರು, ಜಾನುವಾರು ಮೇವು ಸರಬರಾಜು ಕುರಿತ ದೂರುಗಳನ್ನು ಸ್ವೀಕರಿಸಿ, ತುರ್ತು ಕ್ರಮವಹಿಸಲು ಸಾಧ್ಯವಾಗುವಂತೆ ಸಹಾಯವಾಣಿ ಆರಂಭಿಸಬೇಕೆಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಇಂದು ಬೆಳಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ 2025 ನೇ ಸಾಲಿನ ಬೇಸಿಗೆ ಅವಧಿಯಲ್ಲಿ ಉಂಟಾಗುವ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿನ ಸಮಸ್ಯೆಗಳ ಕುರಿತು ಪೂರ್ವಸಿದ್ಧತೆಗಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೇಸಿಗೆ ಅವಧಿಯ ಮಾರ್ಚ, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಧಾರವಾಡ ತಾಲೂಕಿನ 13, 10 ಮತ್ತು 7 ಗ್ರಾಮಗಳು ಸೇರಿ 30 ಗ್ರಾಮಗಳಲ್ಲಿ, ಅಳ್ಳಾವರ ತಾಲೂಕಿನ 1, 1 ಮತ್ತು 2 ಗ್ರಾಮಗಳು ಸೇರಿ 4 ಗ್ರಾಮಗಳಲ್ಲಿ, ಹುಬ್ಬಳ್ಳಿ ತಾಲೂಕಿನ 8, 5 ಮತ್ತು 6 ಗ್ರಾಮಗಳು ಸೇರಿ ಒಟ್ಟು 19 ಗ್ರಾಮಗಳಲ್ಲಿ, ಕಲಘಟಗಿ ತಾಲೂಕಿನ 3, 7 ಮತ್ತು 6 ಗ್ರಾಮಗಳು ಸೇರಿ ಒಟ್ಟು 16 ಗ್ರಾಮಗಳು, ಕುಂದಗೋಳ ತಾಲೂಕಿನ 4, 3 ಮತ್ತು 2 ಗ್ರಾಮಗಳು ಸೇರಿ 9 ಗ್ರಾಮಗಳು. ಹೀಗೆ ಮೂರು ತಿಂಗಳ ಅವಧಿಯಲ್ಲಿ ಯಾವ ಗ್ರಾಮಗಳಲ್ಲಿ ಯಾವ ತಿಂಗಳು ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದೆಂದು ಅಂದಾಜಿಸಿ ಸಮೀಕ್ಷೆ ಮಾಡಿ, ಒಟ್ಟು 78 ಗ್ರಾಮಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮಾರ್ಚ ತಿಂಗಳಲ್ಲಿ 29, ಎಪ್ರಿಲ್ ತಿಂಗಳಲ್ಲಿ 26 ಮತ್ತು ಮೇ ತಿಂಗಳಲ್ಲಿ 23 ಗ್ರಾಮಗಳನ್ನು ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಿ, ಕುಡಿಯುವ ನೀರು ಸರಬರಾಜುಗಾಗಿ ಖಾಸಗಿ ಕೊಳವೆಬಾವಿ ನೀರು ಸರಬರಾಜು ಸೇರಿದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಸ್ತುತ ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿಲ್ಲ.
ಪ್ರಸ್ತುತ ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಕೆಲವು ವಾರ್ಡಗಳಿಗೆ ಒಂದು ಖಾಸಗಿ ಕೊಳವೆಬಾವಿಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಸಮಸ್ಯಾತ್ಮಕವೆಂದು ಗುರುತಿಸಿರುವ 78 ಗ್ರಾಮಗಳಲ್ಲಿ ಅಗತ್ಯಬಿದ್ದಾಗ ತಕ್ಷಣ ಕುಡಿಯುವ ನೀರು ಸರಬರಾಜು ಮಾಡಲು ಈಗಾಗಲೇ ಒಟ್ಟು 162 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ, ಕೊಳಬಾವಿ ಮಾಲೀಕರೊಂದಿಗೆ ಒಪ್ಪಂದ ಸಹ ಮಾಡಿಕೊಳ್ಳಲಾಗಿದೆ. ಅಧಿಕಾರಿಗಳು ಕುಡಿಯುವ ನೀರಿನ ಬಗ್ಗೆ ನಿಗಾವಹಿಸಿ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ವಹಿಸಬೇಕೆಂದು ಅವರು ಸೂಚಿಸಿದರು.
ಜಿಲ್ಲೆಯ ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ಮತ್ತು ಕುಂದಗೋಳ ತಾಲೂಕಿನಲ್ಲಿ ಮಲಪ್ರಭಾ ಕಾಲುವೆಯ ಮುಖಾಂತರ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಲಾಗಿದೆ. ನವಲಗುಂದ ತಾಲೂಕಿನ 37 ಕೆರೆಗಳು, ಅಣ್ಣಿಗೇರಿ ತಾಲೂಕಿನ 13 ಕೆರೆಗಳು, ಹುಬ್ಬಳ್ಳಿ ತಾಲೂಕಿನ 7 ಕೆರೆಗಳು ಮತ್ತು ಕುಂದಗೋಳ ತಾಲೂಕಿನ 3 ಕೆರೆಗಳು ಸೇರಿ ಒಟ್ಟು 60 ಕುಡಿಯುವ ನೀರಿನ ಕೆರೆಗಳನ್ನು ಕಾಲುವೆ ನೀರಿನಿಂದ ತುಂಬಿಸಲಾಗಿದೆ. ಇವುಗಳಲ್ಲಿ ಎಪ್ರಿಲ್ ತಿಂಗಳಲ್ಲಿ 10 ಮತ್ತು ಮೇ ತಿಂಗಳಲ್ಲಿ 50 ಕೆರೆಗಳು ಬಳಕೆ ಆಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.
ಮಹಾನಗರ ಪಾಲಿಕೆ ಹಾಗೂ ಜಿಲ್ಲೆಯ ಎಲ್ಲ ಪಟ್ಟಣ ಪಂಚಾಯತ, ಪುರಸಭೆಗಳಲ್ಲಿ ನೀರಿನ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲು ಮತ್ತು ಸಾರ್ವಜನಿಕರ ದೂರಗಳಿಗೆ ತಕ್ಷಣ ಸ್ಪಂದಿಸಲು ಅಧಿಕಾರಿಗಳಿಗೆ ಅವರು ತಿಳಿಸಿದರು.
ಮೇವಿನ ಲಭ್ಯತೆ: ಜಿಲ್ಲೆಯಲ್ಲಿ ಈಗಾಗಲೇ ಅಗತ್ಯಕ್ಕಿಂತ ಹೆಚ್ಚು ಮೇವಿನ ಲಭ್ಯತೆ ಇದೆ. ಇದನ್ನು ಸರಿಯಾದ ಕ್ರಮದಲ್ಲಿ ರಕ್ಷಿಸಿ, ಬೇಡಿಕೆಗಳಿಗೆ ಅನುಗುಣವಾಗಿ ಸರಬರಾಜು ಮಾಡುವ ವ್ಯವಸ್ಥೆ ಆಗಬೇಕು.
ಜಿಲ್ಲೆಯಲ್ಲಿ 2,33,461 ದನ ಮತ್ತು ಎಮ್ಮೆಗಳು ಹಾಗೂ 1,53,938 ಕುರಿ ಮತ್ತು ಮೇಕೆಗಳು ಇವೆ. ಮತ್ತು ಜಿಲ್ಲೆಯಲ್ಲಿ 3,84,872 ಟನ್ ಮೇವು ಲಭ್ಯವಿದೆ. ರೈತರ, ಕೃಷಿ ಕಾರ್ಮಿಕರ ಬೇಡಿಕೆಗೆ ಅನುಗುಣವಾಗಿ ಅವರ ದನಕರುಗಳಿಗೆ ಮೇವು ಸರಬರಾಜು ಮಾಡಬೇಕು. ಜಿಲ್ಲೆಯಲ್ಲಿ ಮುಂದಿನ 37 ವಾರಗಳಿಗೆ ಆಗುವಷ್ಟು ಮೇವು ದಾಸ್ತಾನಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕುಡಿಯುವ ನೀರು ಸ್ವಚ್ಛವಾಗಿ, ನೈರ್ಮಲ್ಯದಿಂದ ಇರುವಂತೆ ನಗರ ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಖಾತರಿ ಪಡಿಸಿಕೊಳ್ಳಬೇಕು. ಬೇಸಿಗೆ ಕಾಲವಾಗಿರುವದರಿಂದ ಸಾರ್ವಜನಿಕರಲ್ಲಿ ನೀರಿನ ಕಾರಣದಿಂದ ಅನಾರೋಗ್ಯ ಉಂಡಾಗದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಹಕ್ಕಿ ಜ್ವರದ ಸಮಸ್ಯೆ ಕಂಡುಬಂದಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ಇಲ್ಲಿಯವರೆಗೆ ವರದಿ ಆಗಿಲ್ಲ. ಆದ್ದರಿಂದ ಅಗತ್ಯ ಮುನ್ನೆಚ್ಚರಿಕೆ ಕೈಗೊಂಡು ಕೋಳಿ ಸಾಕಾಣಿಕೆದಾರರಿಗೆ ಸೂಕ್ತ ಮಾಹಿತಿ ನೀಡಿ, ಮುಂಜಾಗೃತೆ ವಹಿಸುವಂತೆ ಅವರಿಗೆ ಪಶುಪಾಲನೆ ಇಲಾಖೆ ಅಧಿಕಾರಿಗಳು ಸೂಚನೆ ನೀಡಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮುಂದಿನ ದಿನಗಳಲ್ಲಿ ತಾಪಮಾನ ಹೆಚ್ಚಳವಾಗುವ ಕುರಿತು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಸಾರ್ವಜನಿಕರಲ್ಲಿ ಈ ಕುರಿತು ಸುರಕ್ಷತಾ ಕ್ರಮವಹಿಸುವಂತೆ ಸೂಕ್ತ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಎಲ್ಲ ತಾಲೂಕು ಪಂಚಾಯತ ಇಓ ಅವರು ತಹಶೀಲ್ದಾರ ಮತ್ತು ಪಿಡಿಓಗಳ ಸಭೆ ಜರುಗಿಸಿ, ಕುಡಿಯುವ ನೀರು ಸಮಸ್ಯೆ ಆಗದಂತೆ ಸೂಕ್ತ ಕ್ರಮಕೈಗೊಳ್ಳಬೇಕು. ಗ್ರಾಮಗಳಲ್ಲಿ ಸರಬರಾಜು ಆಗುವ ಕುಡಿಯುವ ನೀರು ಶುದ್ಧವಾಗಿ, ಸ್ವಚ್ಛವಾಗಿ ಇರುವಂತೆ ಕ್ರಮ ವಹಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಎಲ್ಲ ತಹಶೀಲ್ದಾರರು, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ಪಶುಪಾಲನೆ ಹಾಗೂ ಪಶು ವೈಧ್ಯಕೀಯ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.