ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ: ಡಾ. ನಾಗರಾಜ್

ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ: ಡಾ. ನಾಗರಾಜ್  Take care of your eye health: Dr. Nagaraj


ಹಾವೇರಿ, ಸೆ.3 (ಕರ್ನಾಟಕ ವಾರ್ತೆ): ಪ್ರತಿಯೊಬ್ಬರೂ ತಮ್ಮ ಕಣ್ಣುಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕಾಲಕಾಲಕ್ಕೆ ವೈದ್ಯರ ಬಳಿ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ದೃಷ್ಟಿದೋಷಗಳನ್ನು ಆರಂಭದಲ್ಲಿಯೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್ ಕರೆ ನೀಡಿದರು.  ಬ್ಯಾಡಗಿ ಪಟ್ಟಣದ ವರ್ತಕರ ಕಲಾ ಹಾಗೂ ವಾಣಿಜ್ಯ ಪದವಿ ಕಾಲೇಜಿನಲ್ಲಿ ಸೆ.3ರಂದು ನಡೆದ ಜಿಲ್ಲಾ ಮಟ್ಟದ 41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

ಮರಣದ ನಂತರವೂ ಮತ್ತೊಂದು ಜೀವಕ್ಕೆ ಬೆಳಕಾಗುವ ಮೂಲಕ ನೇತ್ರದಾನ ಮಹತ್ವದ ಸೇವೆಯಾಗಿದೆ. ಸಾರ್ವಜನಿಕರು ನೇತ್ರದಾನದ ಕುರಿತು ಅರಿವು ಹೊಂದಿ, ಇತರರಿಗೂ ಇದರ ಮಹತ್ವವನ್ನು ತಿಳಿಸಬೇಕು ಎಂದು ಅವರು ಹೇಳಿದರು.  ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಚೆನ್ನಬಸಯ್ಯ ವಿರಕ್ತಮಠ ಅವರು ನೇತ್ರದಾನದ ಮಹತ್ವ ಹಾಗೂ ನೇತ್ರದಾನ ಪಾಕ್ಷಿಕ ದಿನಾಚರಣೆಯ ಕುರಿತು ಮಾಹಿತಿ ನೀಡಿದರು.  

ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಎನ್‌.ಎಸ್‌. ಅಧ್ಯಕ್ಷತೆ ವಹಿಸಿದ್ದರು. ನೇತ್ರಾಧಿಕಾರಿ ಶರಣರಾಜ್ ಚೌಧರಿ, ಬ್ಯಾಡಗಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಕಣ್ಣಿನ ತಜ್ಞ ಡಾ. ರಾಘವೇಂದ್ರಸ್ವಾಮಿ, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ರಾಮಪ್ಪ ಸದ್ರ​‍್ಪನವರ್, ತಾಲೂಕು ಆರೋಗ್ಯಾಧಿಕಾರಿ ಪ್ರಶಾಂತ್ ಎಂ. ನವಲೆ, ಡಾ. ಕಾಂತೇಶ್ ಭಜಂತ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.