ಬೆಂಗಳೂರು, ಜೂ 3,ಬೆಂಗಳೂರಿನಲ್ಲಿ ತೀವ್ರ ಸಂಚಾರಿ ಒತ್ತಡದ ಜತೆಗೆ ಆಡಳಿತ ವಿಕೇಂದ್ರೀಕರಣದ ಉದ್ದೇಶದಿಂದ ರಾಜ್ಯ ಮಟ್ಟದ ಹಲವಾರು ಸರ್ಕಾರಿ ಕಚೇರಿಗಳನ್ನು ಒಂದು ತಿಂಗಳಲ್ಲಿ ಗುರುತಿಸಿ ಬೆಳಗಾವಿಯ ಸುವರ್ಣಸೌಧಕ್ಕೆ ಸ್ಥಳಾಂತರಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದಾರೆ.ನಗರದಲ್ಲಿಂದು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕಚೇರಿಗಳ ಸ್ಥಳಾಂತರ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿ ತ್ವರಿತವಾಗಿ ಕಾರ್ಯಗತವಾಗಬೇಕು ಎಂದು ಹೇಳಿದ್ದಾರೆ. ಮುಂದಿನ ಸಭೆಯೊಳಗೆ ಹಲವಾರು ಕಚೇರಿಗಳು ಅಲ್ಲಿ ಕೆಲಸ ನಿರ್ವಹಿಸಬೇಕು. ಈ ಪ್ರಕ್ರಿಯೆಯನ್ನು ಖುದ್ದಾಗಿ ಪರಿಶೀಲಿಸುವುದಾಗಿಯೂ ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಅಧಿಕಾರಿಗಳು ಮಾಹಿತಿ ನೀಡಿ, ಪ್ರವಾಹದಿಂದ ಹಾಳಾದ ರಸ್ತೆ, ಸೇತುವೆಗಳ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಬೇಕು. ಪ್ರವಾಹ ಕಾಮಗಾರಿಗಳನ್ನು 500 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿದ್ದು, ಹಾಳಾಗಿರುವ 1800 ರಸ್ತೆ ಕಾಮಗಾರಿಗಳ ಪೈಕಿ 1700 ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. ಸೇತುವೆ ನಿರ್ಮಾಣ, ದುರಸ್ಥಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದರು.ಬಳಿಕ ಯಡಿಯೂರಪ್ಪ, ಕಾಮಗಾರಿ ವಿಳಂಬವಾಗಬಾರದು. ಇಂಜಿನಿಯರ್ ಗಳ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿರುವುದರಿಂದ ಕಾಮಗಾರಿಗಳಿಗೆ ತೊಂದರೆಯಾಗದಂತೆ ನಿರುದ್ಯೋಗಿ ಇಂಜಿನಿಯರ್ ಗಳನ್ನು ತರಬೇತಿ ಇಂಜಿನಿಯರ್ ಗಳು ಎಂದು ನೇಮಕ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಅವರು ಸೂಚಿಸಿದರು. ಶಿವಮೊಗ್ಗ ನಗರದ ಸೋಗಾನೆ ಗ್ರಾಮದಲ್ಲಿ ವಿಮಾನ ನಿಲ್ದಾಣದ ನಿರ್ಮಾಣ ಕಾಮಗಾರಿಯನ್ನು ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಳಿಸಬೇಕು.
ಕಾಮಗಾರಿ ಅತ್ಯುತ್ತಮ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದರು,. ವಿಜಯಪುರ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಈಗಾಗಲೇ ಭೂಮಿ ಗುರುತಿಸಿದ್ದು, ಈ ಯೋಜನೆ ಕಾರ್ಯಗತಗೊಳಿಸಲು ಆದ್ಯತೆ ನೀಡಿದೆ. ರಾಜ್ಯದ 1650 ಕಿ.ಮೀ ಉದ್ದದ ಗ್ರಾಮೀಣ ರಸ್ತೆ ಯನ್ನು ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಹಾಗೂ 10,110 ಕಿ.ಮೀ ಜಿಲ್ಲಾ ಮುಖ್ಯ ರಸ್ತೆಯನ್ನು ರಾಜ್ಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ತಕ್ಷಣವೇ ಕ್ರಮವಹಿಸಿ ಎಂದುನಿರ್ದೇಶನ ನೀಡಿದರು.ರಾಜ್ಯದಲ್ಲಿ ಒಟ್ಟು 4813 ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳನ್ನು 30675 ಕೋಟಿ ರೂ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಅಂತರ್ಜಲ ವೃದ್ಧಿ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಸೇತುವೆಗಳ ತಳಭಾಗದಲ್ಲಿ ಒಂದು ಮೀಟರ್ ತಡೆಗೋಡೆ ನಿರ್ಮಿಸಿ ನೀರಿನ ಸಂಗ್ರಹಣೆ ಮಾಡುವಂತೆಯೂ ಮುಖ್ಯಮಂತ್ರಿ ಅವರು ಸಲಹೆ ನೀಡಿದರು.
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ಕೆರೆ, ಹಳ್ಳ ಹಾಗೂ ನದಿಪಾತ್ರದ ಮಣ್ಣನ್ನು ರಸ್ತೆ ಕಾಮಾಗಾರಿಗಳಿಗೆ ಉಪಯೋಗಿಸಬೇಕು. ವಿವಿಧ ಇಂಜಿನಿಯರಿಂಗ್ ಇಲಾಖೆಗಳ ದರಪಟ್ಟಿಯನ್ನು ಪರಿಶೀಲಿಸಿ ರಾಜ್ಯಾದ್ಯಾಂತ ಏಕರೂಪದ ದರಪಟ್ಟಿಯನ್ನು ಪ್ರಕಟಿಸಲು ಇಲಾಖೆಯ ನಿವೃತ್ತ ಅಧಿಕಾರಿಗಳ ತಾಂತ್ರಿಕ ಸಮಿತಿ ಅಧ್ಯಯನ ನಡೆಸುತ್ತಿದ್ದು, ಶೀಘ್ರದಲ್ಲಿಯೇ ವರದಿ ಸಲ್ಲಿಸಲಿದ್ದಾರೆ. ಏಕರೂಪ ದರಪಟ್ಟಿ ಹೊರಬಂದಲ್ಲಿ ಇಲಾಖೆಗೆ ನೂರಾರು ಕೋಟಿ ರೂ. ಉಳಿತಾಯವಾಗಲಿದೆ ಎಂದರು.ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಲೋಕೋಪಯೋಗಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.