ಅಶಾಂತಿ ಮೂಡಿಸುವ ಹೇಳಿಕೆ ನೀಡುವವರ ವಿರುದ್ಧ ಕ್ರಮಕೈಗೊಳ್ಳಿ: ಡಿ.ಕೆ.ಶಿವಕುಮಾರ್ ಒತ್ತಾಯ

ಬೆಂಗಳೂರು, ಏ. 10, ಕೊರೋನಾ ಸೋಂಕಿನ ಸಂದರ್ಭವನ್ನು ದುರುಪಯೋಗಪಡಿಸಿ ಕೊಂಡು ಅಶಾಂತಿ ಮೂಡಿಸಲು ಕೆಲವರು ಹೇಳಿಕೆ ನೀಡುತ್ತಿದ್ದು, ಅಂತಹವರ ವಿರುದ್ಧ ಸುಮೊಟೋ ಅಡಿ ಪ್ರಕರಣ ದಾಖಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.ಕೆಪಿಸಿಸಿ  ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಶಾಸಕರು ಪ್ರಚೋದನಕಾರಿ  ಹೇಳಿಕೆ ನೀಡಿದರೂ ಪೊಲೀಸರು ಇಲ್ಲಿಯವರೆಗೆ ಯಾವುದೇ ದೂರು ದಾಖಲಿಸಲಿಲ್ಲ. ಪಕ್ಷದ  ಕಾರ್ಯಕರ್ತರ ಮೂಲಕ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.
ಅಕ್ಷಯಪಾತ್ರ  ಯೋಜನೆಗೆ ಆಹಾರ ವಿತರಣೆಯ ಜವಾಬ್ದಾರಿ ಕೊಟ್ಟಿದ್ದಾರೆ. ಆದರೆ ಆಹಾರ ಕಿಟ್ ಗೆ ಬಿಜೆಪಿ  ಶಾಸಕರು ಫೋಟೋ ಹಾಕಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಪಕ್ಷದ  ಕಾರ್ಯಕರ್ತರೇ ದೃಶ್ಯ ಸಮೇತ ಸಾಕ್ಷಿ ಕೊಟ್ಟಿದ್ದಾರೆ. ಸರ್ಕಾರಿ ಚಿಹ್ನೆಯಲ್ಲೇ ಅವರ ಫೋಟೋ  ಹಾಕಿಕೊಂಡಿದ್ದಾರೆ. ಪ್ರಧಾನಿಯವರ ಫೋಟೋ ಹಾಕಿಕೊಂಡಿದ್ದಾರೆ. ಸರ್ಕಾರದ ಚಿಹ್ನೆಯಡಿ  ಜನಪ್ರತಿಗಳ ಫೋಟೋ ಹಾಕುವುದಕ್ಕೆ ಬರುವುದಿಲ್ಲ. ಈ ಬಗ್ಗೆ ವಿರೋಧ ಪಕ್ಷವಾಗಿ ಕಾಂಗ್ರೆಸ್  ಜನರ ಗಮನಕ್ಕೆ ತರುವ ಕೆಲಸ ಮಾಡುತ್ತಿದೆ. ಬಿಜೆಪಿಯವರು ಬೇಕಾದರೆ ಸ್ವಂತ ದುಡ್ಡಿನಲ್ಲಿ  ಬೇಕಾದರೆ ಕಿಟ್ ಕೊಡಲಿ. ಅದಕ್ಕೆ ಎಷ್ಟು ಫೋಟೋ ಬೇಕಾದರೂ ಹಾಕಿಕೊಳ್ಳಲಿ. ಅದು ಬಿಟ್ಟು  ಸರ್ಕಾರದ ಹಣದ ಕಿಟ್ ಗೆ ಪ್ರಚಾರ ತೆಗೆದುಕೊಳ್ಳುತ್ತಿರುವುದು ಏಕೆ ಎಂದು ಶಿವಕುಮಾರ್ ಪ್ರಶ್ನಿಸಿದರು.ಲಾಕ್  ಡೌನ್ ಮುಂದುವರಿಕೆ ವಿಚಾರವಾಗಿ  ಕಾಂಗ್ರೆಸ್ ಟಾಸ್ಕ್ ಪೋರ್ಸ್ ಸದಸ್ಯರ ಜೊತೆ  ಮಾತನಾಡಿದ್ದೇನೆ. ನಮ್ಮ ಹಿರಿಯ ನಾಯಕರ ಜೊತೆ ಮಾತನಾಡಬೇಕು. ಈ ಬಗ್ಗೆ ಕಾರ್ಯಕಾರಿಣಿಯಲ್ಲಿ   ಚರ್ಚೆ ಮಾಡಿ  ಅಭಿಪ್ರಾಯ ಸಂಗ್ರಹಿಸಿಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ  ಸಚಿವರ ನೇಮಕ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರು ಯಾರನ್ನು ಬೇಕಾದರೂ  ಮಾಡಿಕೊಳ್ಳಲಿ. ಅದು ಅವರ ವೈಯುಕ್ತಿಕ ವಿಚಾರ, ನಮಗೆ ಬೇಕಿಲ್ಲ. ಪ್ರತಿಪಕ್ಷವಾಗಿ ಸಲಹೆ ಕೊಡಬಹುದಷ್ಟೇ ಎಂದರು. ವೆಂಟಿಲೇಟರ್, ಮಾಸ್ಕ್, ಮೆಡಿಕಲ್ ಕಿಟ್ ಕೊರತೆ ಇದೆ. ಮೆಡಿಕಲ್ ಕಿಟ್ ಬೇರೆ, ಕೆಲವು ಕಡೆ ಆಹಾರವೇ ತಲುಪಿಲ್ಲ. ಮಾಸ್ಕ್, ವೆಂಟಿಲೇಟರ್, ಮೆಡಿಕಲ್  ಕಿಟ್ ಬಗ್ಗೆ ಗೊಂದಲ ಮುಂದುವರಿದಿದೆ. ದಾದಿಯರಿಗೆ ರಕ್ಷಣೆ ನೀಡುವುದು ಹೇಗೆ?  ಪೊಲೀಸರನ್ನು ರಕ್ಷಣೆ ಹೇಗೆ ಮಾಡ್ತಿದ್ದಾರೆಯೋ ಗೊತ್ತಿಲ್ಲ. ತಪ್ಪುಗಳನ್ನು  ಹೇಳಿ ಈಗ  ರಾಜಕಾರಣ ಮಾಡುವುದಿಲ್ಲ. ಮೂರು ಜನ ಮಂತ್ರಿ ತೆಗೆದು ಒಬ್ಬರನ್ನು ಮಾಡಿದ್ದಾರೆ. ಸರ್ವ  ಪಕ್ಷ ಸಭೆ ಕರೆಯಿರಿ ಎಂದಿದ್ದೆ, ಕರೆದಿದ್ದಾರೆ ಎಂದರು.ನಿಜಾಮುದ್ದೀನ್ ಜಮಾತ್ ವಿಚಾರವಾಗಿ ಮಾತನಾಡಿದ ಅವರು,  ಒಂದು ಪ್ರಕರಣ ಬಿಟ್ಟರೆ ಎಲ್ಲ ಕಡೆ ನೆಗೆಟೀವ್ ಬಂದಿದೆ. ಎರಡು ಮೂರು ಕಡೆ ಮಾತ್ರ  ಪಾಸಿಟೀವ್ ಬಂದಿದೆ. ಇದನ್ನು ಬಹಳ ವಿಚಿತ್ರ ರೀತಿಯಲ್ಲಿ ಬಿಂಬಿಸಿದರು. ಎಲ್ಲವನ್ನೂ ನಂತರ  ಮಾತನಾಡುತ್ತೇನೆ ಎಂದು ಸೂಚ್ಯವಾಗಿ ಹೇಳಿದರು.