ಬೆಂಗಳೂರು, ಮಾ.6 , ಕರ್ನಾಟಕ ಸರಕಾರ ಮಂಡಿಸಿದ ಬಜೆಟ್‌ನಲ್ಲಿ ಯಾವುದೇ ರೀತಿಯ ರಚನಾತ್ಮಕ ಹೊಸತನವಿಲ್ಲ. ಕೇವಲ ಬಣ್ಣದ ಮಾತುಗಳೇ ತುಂಬಿವೆ. ನಿರುದ್ಯೋಗದಿಂದ ತತ್ತರಿಸಿರುವ ರಾಜ್ಯದ ಯುವಜನತೆಗೆ ಉದ್ಯೋಗದ ಯೋಜನೆಗಳು ಬರವನ್ನು ಈ ಬಜೆಟ್ ವ್ಯಕ್ತಪಡಿಸಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಪ್ರತಿಕ್ರಿಯಿಸಿದ್ದಾರೆ.ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮತ್ಸ್ಯ ಕ್ಷಾಮದಿಂದ ಪರದಾಡುತ್ತಿರುವ ಕರಾವಳಿಯ ಮತ್ಸ್ಯೋದ್ಯಮಕ್ಕೆ ಯಾವುದೇ ಪರಿಹಾರ ಈ ಬಜೆಟ್‌ನಲ್ಲಿಲ್ಲ. ಪೆಟ್ರೋಲ್, ಡೀಸೆಲ್ ಬೆಲೆ ಕೂಡಾ ಏರಿಕೆಯಾಗಿದ್ದು, ಇದರಿಂದ ನೇರವಾಗಿ ಜನ ಸಾಮಾನ್ಯರ ಜೀವನದ ಮೇಲೆ ದುಷ್ಪರಿಣಾಮ ಬೀಳಲಿದೆ ಎಂದು ಹೇಳಿದ್ದಾರೆ.
ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿರುವ ತೆರಿಗೆ ಅನುದಾನ ಈ ಬಾರಿ ಸಾವಿರಾರು ಕೋಟಿ ರೂಪಾಯಿಗಳಷ್ಟು ಕಡಿಮೆಯಾಗಿದೆ. ಕೇಂದ್ರ ಸರ್ಕಾರದ ಈ ಮಲತಾಯಿ ಧೋರಣೆಯನ್ನು ಪ್ರಶ್ನಿಸದ ರಾಜ್ಯ ಸರ್ಕಾರ ತನ್ನ ಅಸಹಾಯಕತೆಯ ದುಸ್ಥಿತಿ ಜನರ ಮುಂದೆ ವ್ಯಕ್ತವಾಗದಿರಲಿ ಎಂಬ ಏಕೈಕ ಉದ್ದೇಶದೊಂದಿಗೆ ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಮಾಡಿದ್ದು ಕೇಂದ್ರದ ಪಾಪದ ಹೊರೆಯನ್ನು ಜನತೆಯ ಮೇಲೆ ಹೇರಿದೆ. ಎಂದಿನಂತೆ ಅಲ್ಪಸಂಖ್ಯಾತ ಸಮುದಾಯವನ್ನು ಕಡೆಗಣಿಸಿದ್ದು ಕೇವಲ ತೋರಿಕೆಯ ನಟನೆ ಮಾಡಿದೆ. ಒಟ್ಟಾರೆ ಇದು ನಿರಾಶದಾಯಕ ಬಜೆಟ್ ಆಗಿದೆ ಹಾಗೂ ರಾಜ್ಯದ ಅಭ್ಯುದಯಕ್ಕೆ ಏನೇನೂ ಪೂರಕವಲ್ಲದ ಬಜೆಟ್ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.