ಬೆಂಗಳೂರು,ಮಾ.6, ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಜೆಟ್ನಲ್ಲಿ ಹಣ ಮೀಸಲು ಇಡದ ವಿಷಯ ಇಂದು ವಿಧಾನಸಭೆಯಲ್ಲಿ ಪ್ರಸ್ತಾಪವಾಯಿತು.ಇಂದು ಬೆಳಗ್ಗೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಂವಿಧಾನ ಕುರಿತು ಮಾತನಾಡಲು ಬಿಜೆಪಿಯ ಅರಗ ಜ್ಞಾನೇಂದ್ರ ಅವರಿಗೆ ಭಾಷಣ ಮಾಡಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಕಾಶ ಕಲ್ಪಿಸಿದರು.ಆಗ ಮಧ್ಯಪ್ರವೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಕಾಮಗಾರಿಗೆ ಹಾಗೂ 30 ಹಳ್ಳಿಗಳ ಪುನರ್ವಸತಿ ಹಾಗೂ ಪುನರ್ ನಿರ್ಮಾಣಕ್ಕೆ 10 ಸಾವಿರ ಕೋಟಿ ರೂ.ಅನುದಾನ ನಿಗದಿಪಡಿಸಲು ನಿರ್ಧರಿಸಲಾಗಿದೆ.
ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ. ನಿನ್ನೆ ಹಣಕಾಸು ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ಈ ನಿರ್ಧಾರ ಮಾಡಿದ್ದೇವೆ. ಇಂದು ದೆಹಲಿಗೆ ಹೋಗುತ್ತಿದ್ದೇನೆ. ಕೇಂದ್ರ ಸರ್ಕಾರದ ಪ್ರಮುಖರ ಜೊತೆ ಮಾತುಕತೆ ನಡೆಸಿ,ಹೇಗಾದರೂ ಸರಿಯೇ ಹೆಚ್ಚುವರಿ ಅನುದಾನ ತರುವ ಪ್ರಯತ್ನ ಮಾಡುತ್ತೇವೆ,. ಇದನ್ನು ನಿನ್ನೆ ಬಜೆಟ್ನಲ್ಲಿ ಪ್ರಕಟಿಸಿರಲಿಲ್ಲ ಎಂದು ಹೇಳಿದರು.ಆಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ, 10 ಸಾವಿರ ಕೋಟಿ ರೂ. ನೀಡುತ್ತೇನೆ ಎಂದು ಹೇಳಿರುವುದು ಖುಷಿಯ ವಿಚಾರ. ಆದರೆ ಯೋಜನೆಗೆ ದುಡ್ಡು ಎಲ್ಲಿಂದ ತರುತ್ತೀರಿ, ಸರ್ಕಾರದ ಬಳಿ ಹಣವೇ ಇಲ್ಲ, ಇಂತಹ ಸಂದರ್ಭದಲ್ಲಿ ಹೇಗೆ ಹಣ ಒದಗಿಸುತ್ತಾರೆ. ನಿನ್ನೆ ಬಜೆಟ್ ಮಂಡಿಸುವಾಗಲೆ ಇದನ್ನು ಸೇರ್ಪಡೆ ಮಾಡಬಹುದಿತ್ತು.
ಹೋಗಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ಕೊಡುವಾಗ ಹೇಳಬಹುದಿತ್ತು. ಆದರೂ ಈಗಲೇ ಹೇಳಿರುವುದು ಸಂತೋಷ. ಆದರೆ ಇದು ಕೇವಲ ಭರವಸೆಯಾಗಬಾರದು ಎಂದು ಹೇಳಿದರು.ಇದಕ್ಕೆ ಉತ್ತರಿಸಿದ ಯಡಿಯೂರಪ್ಪ, ಇದರಲ್ಲಿ ಯಾವುದೇ ಅನುಮಾನ ಬೇಡ, ಖಂಡಿತವಾಗಿ ಯೋಜನೆ ಕೈಗೆತ್ತಿಕೊಳ್ಳುತ್ತೇವೆ. ಶೀಘ್ರದಲ್ಲಿಯೇ ಯೋಜನೆಗೆ ತಯಾರಿ ನಡೆಸುತ್ತೇವೆ ಎಂದು ಹೇಳಿದರು.ಬಳಿಕ ಉಪ ಮುಖ್ಯಮಂತ್ರಿ ಗೋವಿಂದ ಕಾರಜೊಳ ಮಾತನಾಡಿ, ಸಿದ್ದರಾಮಯ್ಯ ಅವರು ನಮ್ಮ ಭಾಗದ ಶಾಸಕರು. ಹೀಗಾಗಿ ಅವರು ಮುಖ್ಯಮಂತ್ರಿಯವರನ್ನು ಅಭಿನಂದಿಸುತ್ತಾರೆ ಎಂದುಕೊಂಡಿದ್ದೆ. ಆದರೆ ಇಲ್ಲೂ ಟೀಕೆ ಮಾಡಿದ್ದಾರೆ. ನ್ಯಾ. ಬೃಜೇಶ್ ಕುಮಾರ್ ನೇತೃತ್ವದ ಪೀಠ, 173 ಟಿಎಂಸಿ ನೀರನ್ನು ಹಂಚಿಕೆ ಮಾಡಿ 7 ವರ್ಷಗಳು ಕಳೆದಿದ್ದರೂ ಇದುವರೆಗೆ ಹಿಂದಿನ ಯಾವುದೇ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಹೇಳಿದರು.