ಪ್ರಮಾಣ ವಚನ ಸಮಾರಂಭ: ಅಸಮಾಧಾನಿತರ ಮನವೊಲಿಕೆಗೆ ಶತಪ್ರಯತ್ನ; ಯಾರ ಕೈಗೂ ಸಿಗದ ಕತ್ತಿ

ಬೆಂಗಳೂರು, ಫೆ.6, ನೂತನ ಹತ್ತು ಮಂದಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಬೆಳಗ್ಗೆ ಮುಖ್ಯಮಂತ್ರಿ ನಿವಾಸಕ್ಕೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಒಟ್ಟಾಗಿ ಆಗಮಿಸಿ ಮಾತುಕತೆ ನಡೆಸಿದರು. ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಬಿಜೆಪಿ ಶಾಸಕ ಉಮೇಶ್ ಕತ್ತಿ ಅಸಮಾಧಾನ ತಣಿಸುವ ಜವಾಬ್ದಾರಿಯನ್ನು ರಾತ್ರಿ ಈ ಇಬ್ಬರು ಹಿರಿಯ ಸಚಿವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ವಹಿಸಿದ್ದರು. ರಾತ್ರಿಯಿಂದ ಈವರೆಗೂ ಉಮೇಶ್ ಕತ್ತಿ ಯಾರ ಸಂಪರ್ಕಕ್ಕೂ ಸಿಗಲಿಲ್ಲ ಎನ್ನಲಾಗಿದೆ. ರಹಸ್ಯ ಸ್ಥಳದಲ್ಲಿ ಉಮೇಶ್ ಕತ್ತಿ  ಠಿಕಾಣಿ ಹೂಡಿದ್ದು, ತಮ್ಮ ಆಪ್ತರ ಬಳಿ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ. ಇಂದೂ ಕತ್ತಿ ಮನವೂಲಿಕೆಗಾಗಿ ಅವರನ್ನು ಸಂಪರ್ಕಿಸಲು ಪ್ರಯತ್ನ ಮುಂದುವರಿದಿದೆ.

ರಾಜಭವದಲ್ಲಿ ನಡೆಯುವ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಕತ್ತಿ ಸೇರಿದಂತೆ ಇತರ ಅಸಮಾಧಾನಿತ ಬಿಜೆಪಿ ಹಿರಿಯ ಶಾಸಕರು ಗೈರಾಗಲಿದ್ದಾರೆ ಎನ್ನಲಾಗಿದೆ. ಅಸಮಾಧಾನಿತ ಶಾಸಕರನ್ನು ರಾಜಭವನಕ್ಕೆ ಕರೆತರುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಹಿರಿಯ ಸಚಿವರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಶಕ್ತಿ ವೃದ್ಧಿಸಿಕೊಂಡ ವಿಜಯೇಂದ್ರ: ಭವಿಷ್ಯದ ನಾಯಕನಾಗುವ ಸೂಚನೆ;ಈ ಮಧ್ಯೆ ದಿನದಿಂದ  ದಿನಕ್ಕೆ ಮುಖ್ಯಮಂತ್ರಿ ಪುತ್ರ ವಿಜಯೇಂದ್ರಯವರ ಶಕ್ತಿ ವೃದ್ಧಿಯಾಗುತ್ತಿದೆ.  ಮುಖ್ಯಮಂತ್ರಿ ನಿನ್ನೆ ಕಲಬುರಗಿ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ವಿಜಯೇಂದ್ರ ಸ್ವತ ತಾವೇ ಮುಂದೆ ನಿಂತುಕೊಂಡು ಎಂಟಿಬಿ ನಾಗರಾಜ್ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಅವರು ಭವಿಷ್ಯದ ನಾಯಕ ಅಥವಾ ಯಡಿಯೂರಪ್ಪ ಅವರ ಉತ್ತರಾಧಿಕಾರಿ ಎನ್ನಲಾಗುತ್ತಿದೆ.

ಕಳೆದ ವಾರ ಮುಖ್ಯಮಂತ್ರಿ ಜೊತೆ ದೆಹಲಿಗೆ ತೆರಳಿ ವರಿಷ್ಠರ ಜೊತೆಗೂ ಮಾತನಾಡಿ ಬಂದಿದ್ದರು. ಇಂದು ಶಾಸಕ ಡಿ.ಸುಧಾಕರ್ ಅವರು ವಿಜಯೇಂದ್ರ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಸಿಹಿ ತಿಂಡಿ ನೀಡಿ ಕೃತಜ್ಞತೆ ಸಲ್ಲಿಸಿದರು.ರಾಜಭವನದಲ್ಲಿ ನೂಕುನುಗ್ಗಲು; 10 ಮಂದಿ ನೂತನ ಸಚಿವರು ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಕಣ್ತುಂಬಿಕೊಳ್ಳಲು ಅವರ ಕುಟುಂಬಸ್ಥರು, ಅಭಿಮಾನಿಗಳು ಆಗಮಿಸಿದ್ದು, ಇದರಿಂದ ರಾಜಭವನದಲ್ಲಿ ನೂಕು ನುಗ್ಗಲು ಉಂಟಾಗಿತ್ತು. ಇದರಿಂದ  ಆನಂದ್ ಸಿಂಗ್ ಕುಟುಂಬಸ್ಥರು ತೊಂದರೆ ಅನುಭವಿಸುವಂತಾಯಿತು. ನೂಕಾಟ- ತಳ್ಳಾಟದಲ್ಲಿ ವೀಲ್ ಚೇರ್‌ನಲ್ಲಿ ಬಂದಿದ್ದ ಆನಂದ್ ಸಿಂಗ್ ಸಂಬಂಧಿಯೊಬ್ಬರು ಕೆಳಗೆ ಬಿದ್ದ ಘಟನೆಯೂ ನಡೆಯಿತು. ಅಷ್ಟರದಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಅವರಿಗೆ ಸಹಾಯ ಮಾಡಿ, ಆಸನದಲ್ಲಿ ಕುಳ್ಳಿರಿಸಿದರು. ಗೋಪಾಲಯ್ಯಗೆ ಸಾರಥಿಯಾದ ಪುತ್ರ ಮಂಜುನಾಥ್; ನೂತನವಾಗಿ ಸಚಿವರಾಗಲಿರುವ ಗೋಪಾಲಯ್ಯ ಅವರಿಗೆ ಅವರ ಮಗನೇ ಸಾರಥಿಯಾಗಿದ್ದರು. ತಮ್ಮ  ತಂದೆಯನ್ನು ಪ್ರಮಾಣ ವಚನ ಸ್ವೀಕರಿಸಲು ರಾಜಭವನಕ್ಕೆ ಹಿರಿಯ ಪುತ್ರ ಮಂಜುನಾಥ್ ತಮ್ಮ  ಕಾರಿನಲ್ಲಿ ತಾವೇ ಚಾಲನೆ ಮಾಡಿ ಕರೆದುಕೊಂಡು ಬಂದರು. ತಾಯಿ ಹೇಮಲತಾ ಕೂಡ ಜೊತೆಗಿದ್ದರು.