ಸ್ವರ ಯೋಗಿನಿ : ಡಾ. ಪ್ರಭಾ ಅತ್ರೆ

ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಡಾ. ಪ್ರಭಾ ಅತ್ರೆ ಅವರು ಹಿಂದೂಸ್ತಾನಿ ಸಂಗೀತದಲ್ಲಿ ತಮ್ಮ ವಿಶಿಷ್ಟ ಧ್ವನಿ ಮತ್ತು ಗಾಯನ ಶೈಲಿಯಿಂದ ಅಸಂಖ್ಯಾತ ಸಂಗೀತ ಪ್ರೇಮಿಗಳ ಹೃದಯ ಸಿಂಹಾಸನದಲ್ಲಿ ಸ್ಥಾನ ಪಡೆದಿದ್ದಾರೆ. ಹಿಂದೂಸ್ತಾನಿ ಸಂಗೀತದ ಕಿರಾನಾ ಫರಾನಾ ಶೈಲಿಯ ಹಾಡುಗಾರರಲ್ಲಿ ಅವರದು ಬಹುದೊಡ್ಡ ಹೆಸರು. 93 ವರ್ಷಕ್ಕೆ ಕಾಲಿಡುತ್ತಿರುವ ಪ್ರಭಾ ಅತ್ರೆ ಅವರು ಪ್ರಸ್ತುತ ಹಿರಿಯ ಗಾಯಕರಲ್ಲಿ ಒಬ್ಬರು.  

ಪ್ರಭಾ ಅತ್ರೆ ಅವರು ಮಹಾರಾಷ್ಟ್ರದ ಪುಣೆಯಲ್ಲಿ 1932ರ ಸೆಪ್ಟೆಂಬರ್ 13ರಂದು ಜನಿಸಿದರು. ತಂದೆ ದತ್ತಾತ್ರೇಯ ಅತ್ರೆ, ತಾಯಿ ಇಂದಿರಾಬಾಯಿ. ತಂದೆಯವರು ಪುಣೆಯ ಅಸ್ತಾ ಪೇಠನಲ್ಲಿರುವ ಹೈಸ್ಕೂಲ್ ಆಫ್ ಎಜುಕೇಶನ್ ಸೊಸೈಟಿಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. ಹಾಗೆಯೇ ತಾಯಿ ಇಂದಿರಾಬಾಯಿ ಅವರು ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಅವರ ಕುಟುಂಬದಲ್ಲಿ ಸಂಗೀತವನ್ನು ಕಲಿತವರು ಯಾರೂ ಇರಲಿಲ್ಲ. ಆದರೆ ತಾಯಿಯವರ ಅನಾರೋಗ್ಯದ ಕಾರಣ, ವಿಶ್ರಾಂತಿಗಾಗಿ ಹಾರ್ಮೋನಿಯಂ ಸಂಗೀತ ಸಲಕರಣೆಯನ್ನು ಮನೆಗೆ ತಂದರು. ಹೀಗಾಗಿ ಹಾರ್ಮೋನಿಯಂ ಒಡನಾಟದೊಂದಿಗೆ ಪ್ರಭಾರವರು ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡರು. ತಂದೆಯ ಸ್ನೇಹಿತರಾದ ವಿಜಯ ಕರಂಡಿಕರ್ ಅವರಿಂದ ಸಂಗೀತದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರು.  

ಸಂಗೀತದಲ್ಲಿ ಅಧ್ಯಯನ ಮಾಡುವಾಗ ಪ್ರಭಾರವರು ಪುಣೆಯ ಫರ್ಗುಸನ್ ಕಾಲೇಜಿನಿಂದ ವಿಜ್ಞಾನದಲ್ಲಿ ಪದವಿ ಪಡೆದರು. ನಂತರ ಪುಣೆ ವಿಶ್ವವಿದ್ಯಾಲಯದ ಕಾನೂನು ಕಾಲೇಜಿನಲ್ಲಿ ಎಲ್‌ಎಲ್‌ಬಿ ಪೂರ್ಣಗೊಳಿಸಿದರು. ಸುರೇಶ್‌ಬಾಬು ಮಾನೆ ಮತ್ತು ಹೀರಾಬಾಯಿ ಬಡೋಡೆಕರ್ ಅವರಿಂದ ಕಿರಾನಾ ಫರಾನಾದಿಂದ ಶಾಸ್ತ್ರೀಯ ಸಂಗೀತವನ್ನು ಕಲಿತರು. ನಂತರ ಪ್ರಭಾರವರು ಉಸ್ತಾದ ಅಮೀರ್‌ಖಾನ್ ಮತ್ತು ಉಸ್ತಾದ ಬಡೇ ಗುಲಾಂ ಅಲಿಖಾನ್ ಮುಂತಾದವರ ಮಾತುಗಳನ್ನು ಆಲಿಸುವ ಮೂಲಕ ಸ್ವತಃ ತರಬೇತಿ ಪಡೆದರು. ಅವರು ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯದಿಂದ ಸಂಗೀತದಲ್ಲಿ ಅಲಂಕಾರ ಪದವಿಯನ್ನು, ಲಂಡನ್‌ದ ಟ್ರಿನಿಟಿ ಲಾಬನ್ ಸಂಗೀತ ಮತ್ತು ನೃತ್ಯ ಕೇಂದ್ರದಿಂದ ಸಂಗೀತದಲ್ಲಿ ಅಧ್ಯಯನ ಪೂರ್ಣಗೊಳಿಸಿದರು. ಅಲ್ಲದೇ ಸಂಗೀತದಲ್ಲಿ ಪಿಎಚ್‌ಡಿ ಪದವಿಯನ್ನು ಗಳಿಸಿದರು.  

ಅವರು 1960ರಲ್ಲಿ ಆಲ್ ಇಂಡಿಯಾ ರೇಡಿಯೋದಲ್ಲಿ ನಿರ್ಮಾಪಕರಾಗಿ ಕೆಲಸಕ್ಕೆ ಸೇರಿಕೊಂಡರು. ಅಲ್ಲಿ ಅವರು ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ನಂತರ 1979ರಲ್ಲಿ ಮುಂಬೈನ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದ ಹಿಂದೂಸ್ತಾನಿ ಸಂಗೀತದಲ್ಲಿ ಸ್ತಾತಕೋತ್ತರ ಅಧ್ಯಯನದಲ್ಲಿ ಪ್ರಾಧ್ಯಾಪಕರಾಗಿ ಸೇವೆಗೆ ಸೇರಿದರು. ಅಲ್ಲಿ 1992ರವರೆಗೆ ಸೇವೆ ಸಲ್ಲಿಸಿ, ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದರು. ಅವರು ಕಥಕ್ ನೃತ್ಯ ಶೈಲಿಯಲ್ಲಿ ತರಬೇತಿಯನ್ನು ಸಹ ಪಡೆದಿರುವರು. ಪ್ರಭಾ ಅತ್ರೆ ಯವರು ಖಯಾಲ್, ತರಾನಾ, ರುಮ್ರಿ, ದಾದ್ರಾ, ಭಜನ್, ಗೀತ್, ಗಜಲ್ ಮುಂತಾದ ವಿವಿಧ ಸಂಗೀತ ಪ್ರಕಾರಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಂಪ್ರಾದಾಯಿಕ ರಾಗಗಳನ್ನು ಕರಗತ ಮಾಡಿಕೊಳ್ಳುವುದರ ಜೊತೆಗೆ ಅವರು ಅಪೂರ್ವ ಕಲ್ಯಾಣ, ದರ್ಬಾರಿ ಕೌನ್ಸ್‌ ಮತ್ತು ರವಿ ಭೈರವ್‌ನಂತಹ ಹಲವಾರು ಹೊಚ್ಚ ಹೊಸ ರಾಗಗಳನ್ನು ಸಹ ರಚಿಸಿದ್ದಾರೆ. ರಾಗ ಬಿಹಾಗ್ ಮತ್ತು ಕಲಾವತಿ ರಾಗಗಳ ಅವರ ಧ್ವನಿಮುದ್ರಣಗಳು ಎಷ್ಟು ಜನಪ್ರಿಯವಾದವು ಎಂದರೆ ಪ್ರಭಾ ಅತ್ರೆಯವರು ನೇರ ಸಂಗೀತ ಕಛೇರಿಗಳಿಗೆ ಅನೇಕ ಆಹ್ವಾನಗಳನ್ನು ಪಡೆದರು. 

ಡಾ.ಪ್ರಭಾ ಅತ್ರೆಯವರು ಸಂಗೀತದಲ್ಲಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅಲ್ಲದೇ ಸಂಗೀತಕ್ಕೆ ಸಂಬಂಧಿಸಿದ ಹಲವಾರು ನಿಯತಕಾಲಿಕಗಳಿಗೆ ಲೇಖನಗಳನ್ನು ನೀಡಿದ್ದಾರೆ. ಅವರ ಸ್ವರಂಗಿಣಿ ಮತ್ತು ಸ್ವರಂಜನಿ ಎಂಬ ಎರಡೂ ಪುಸ್ತಕಗಳಲ್ಲಿ ಅಂದಾಜು 450 ಸಂಗೀತ ಪ್ರಕಾರಗಳಿವೆ. ಅವರ ಸಂಗೀತದ ಚಿಂತನೆಗಳು ಮತ್ತು ಅನುಭವಗಳ ಲೇಖನಗಳನ್ನು ಒಳಗೊಂಡಿರುವ ಪುಸ್ತಕ ‘ಸ್ವರ್ಮಯಿ’ ಮಹಾರಾಷ್ಟ್ರಸರಕಾರದ ಪ್ರಶಸ್ತಿಯನ್ನು ಪಡೆದಿದೆ. ಅವರು ‘ಎನ್‌ಲೈಟಿಂಗ್ ದಿ ಲಿಸ್‌ನರ್‌’ ಮತ್ತು ‘ಅಲಾಂಗ್‌ದಪಾಥ್ ಆಫ್ ಮ್ಯೂಸಿಕ್‌’ ಇಂಗ್ಲೀಷ್ ಕೃತಿಗಳ ಮೂಲಕ ವಿಶ್ವದಾದ್ಯಂತ ಸಂಗೀತ ರಸಿಕರ ಹೃದಯವನ್ನು ಗೆದ್ದಿದ್ದಾರೆ. ಪ್ರಭಾ ಅತ್ರೆಯವರು ಹಿಂದೂಸ್ತಾನಿ ಸಂಗೀತವನ್ನು ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಪ್ರದರ್ಶನಗಳು, ಪ್ರಾಯೋಗಿಕ ಅವಧಿಗಳು, ಕಾರ್ಯಾಗಾರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳ ಮೂಲಕ ಪ್ರಚಾರ ಮಾಡಿದ್ದಾರೆ. ಅಲ್ಲದೇ ಪ್ರಭಾ ಅತ್ರೆಯವರು ಎಸ್‌ಎನ್‌ಡಿಟಿ ವಿಶ್ವವಿದ್ಯಾಲಯದ ಸಂಗೀತದಲ್ಲಿ ಸ್ನಾತಕೋತ್ತರ ಅಧ್ಯಯನದ ಪಠ್ಯಕ್ರಮವನ್ನು ರೂಪಿಸಿದ್ದಾರೆ. ಪ್ರಭಾ ಅತ್ರೆಯವರ ಮಾರ್ಗದರ್ಶನದಲ್ಲಿ ಅನೇಕ ವಿದ್ಯಾರ್ಥಿಗಳು ಡಾಕ್ಟರೇಟ್ ಪಡೆದಿದ್ದಾರೆ.  

ಡಾ. ಪ್ರಭಾ ಅತ್ರೆಯವರ ಹಿಂದೂಸ್ತಾನಿ ಸಂಗೀತದಲ್ಲಿನ ಅಪೂರ್ವ ಸಾಧನೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಸಂಘ-ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರಗಳನ್ನು ನೀಡಿ ಗೌರವಿಸಿವೆ. 1976ರಲ್ಲಿ ಆಚಾರ್ಯ ಅತ್ರೆ ಪ್ರಶಸ್ತಿ, ಜಗದ್ಗುರು ಶಂಕರಾಚಾರ್ಯರ ಗಾನ ಪ್ರಭಾ ಬಿರುದು, 1990ರಲ್ಲಿ ಪದ್ಮಶ್ರೀ, 1991ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಷ್ಟ್ರೀಯ ಕಾಳಿದಾಸ ಸಮ್ಮಾನ, 2011ರಲ್ಲಿ ಟ್ಯಾಗೋರ ಅಕಾಡೆಮಿ ರತ್ನ ಪ್ರಶಸ್ತಿ, ದೀನಾನಾಥ ಮಂಗೇಶ್ಕರ್ ಪ್ರಶಸ್ತಿ, ಹಫೀಜ್ ಅಲಿಖಾನ್ ಪ್ರಶಸ್ತಿ, ಗೋವಿಂದ-ಲಕ್ಷ್ಮೀ ಪ್ರಶಸ್ತಿ, ಆಚಾರ್ಯ ಪಂಡಿತ ರಾಮ ನಾರಾಯಣ ಪ್ರಶಸ್ತಿ, ಉಸ್ತಾದ್ ಫೈಯಾಜ್ ಅಹ್ಮದ್‌ಖಾನ್ ಸ್ಮಾರಕ ಪ್ರಶಸ್ತಿ, ಕಲಾಶ್ರೀ, 2002ರಲ್ಲಿ ಪದ್ಮಭೂಷಣ, ಸಂಗೀತ ಸಾಧನರತ್ನ ಪ್ರಶಸ್ತಿ, ಪುಣೆ ವಿಶ್ವವಿದ್ಯಾಲಯದಿಂದ ಜೀವಮಾನ ಸಾಧನೆ ಪ್ರಶಸ್ತಿ, ಶಿವಸೇನಾ ಮುಂಬೈ ಅವರಿಂದ ಮಾಹಿಮ್ ರತ್ನ ಪ್ರಶಸ್ತಿ, ಕರ್ನಾಟಕ ಸರ್ಕಾರದಿಂದ ಮಲ್ಲಿಕಾರ್ಜುನ ಮನ್ಸೂರ ಸಮ್ಮಾನ, 2022ರಲ್ಲಿ ಪದ್ಮ ವಿಭೂಷಣ, ಪಂಡಿತ ಹರಿಪ್ರಸಾಧ ಚಾರಾಸಿಯಾ ಜೀವಮಾನ ಸಾಧನೆ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿ-ಪುರಸ್ಕಾರಗಳು ಅವರನ್ನರಿಸಿಕೊಂಡು ಬಂದಿವೆ. ವಿಶೇಷವೆಂದರೆ ಅವರ 90ನೆಯ ಹುಟ್ಟುಹಬ್ಬದ ಅಂಗವಾಗಿ 90 ಕೊಳಲು ವಾದಕರು ಸ್ವರಮೇಳವನ್ನು ಪ್ರದರ್ಶಿಸಿದರು. ಪುಣೆಯ ತಾತ್ಯಾಸಾಹೇಬ ಟ್ರಸ್ಟ್‌ ಮತ್ತು ಗಾನವರ್ಧನ ಸಂಸ್ಥೆ ಜಂಟಿಯಾಗಿ ‘ಸ್ವರಯೋಗಿನಿ ಡಾ.ಪ್ರಭಾ ಅತ್ರೆ ರಾಷ್ಟ್ರೀಯ ಶಾಸ್ತ್ರೀಯ ಸಂಗೀತ ಪುರಸ್ಕಾರ’ ಪ್ರಶಸ್ತಿಯನ್ನು ಸಂಗೀತದ ಸಾಧಕರಿಗೆ 2011ರಿಂದ ನೀಡುತ್ತ ಮುನ್ನಡೆದಿರುವದು ಶ್ಲಾಘನೀಯ. 

ಭಾರತ ರತ್ನ ಪಂ.ಭೀಮಸೇನ ಜೋಶಿಯವರ ಅತ್ಯಂತ ಮಹತ್ವದ ಸಂಗೀತ ಪ್ರಯೋಗವನ್ನು ಪಡಾ.ಪ್ರಭಾ ಅತ್ರೆಯವರು ಶೃದ್ಧೆಯಿಂದ ಮುಂದುವರೆಸಿದ, ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಸ್ಥಾನವನ್ನು ಸೃಷ್ಠಿಸಿದರು. ಅವರು ಕಳೆದ ಆರು ದಶಕಗಳಿಂದ ಭಾರತೀಯ ಹಿಂದೂಸ್ತಾನಿ ಸಂಗೀತವನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸಿದ್ದಾರೆ.   

- ಸುರೇಶ ಗುದಗನವರ 

  ಧಾರವಾಡ  

         9449294694 


- * * * -