ಸ್ವರ ಸಾಮ್ರಾಜ್ಞೆ ಡಾ. ಗಂಗೂಬಾಯಿ ಹಾನಗಲ್ಲ

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಲೋಕದ ದಿಗ್ಗಜೆ, ಕಿರಾಣಾ ಘರಾಣಾದ ಮೇರು ಕಲಾವಿದೆ ಡಾ.ಗಂಗೂಬಾಯಿ ಹಾನಗಲ್ಲ ಅವರು ಪುರುಷ ನಿರ್ಮಿತ ಸಂಗೀತದ ಕೋಟೆಯನ್ನು ಪ್ರವೇಶಿಸಿದ ಕರ್ನಾಟಕದ ಮೊದಲ ಗಾಯಕಿ. ಎಂಟೂವರೆ ದಶಕಗಳವರೆಗೆ ಸಂಗೀತ ಸೇವೆಗೈದ ಗಂಗೂಬಾಯಿ ಕರ್ನಾಟಕದ ಕೀರ್ತಿ ಬೆಳಗಿದ ಸ್ವರ ಸಾಮ್ರಾಜ್ಞೆ. ಭಾರತೀಯ ಸಂಗೀತ ಕ್ಷೇತ್ರದಲ್ಲಿ ಮರೆಯಲಾರದ ಹೆಸರು ಗಂಗೂಬಾಯಿ ಹಾನಗಲ್ಲ.  

ಗಂಗೂಬಾಯಿಯವರು 1913, ಮಾರ್ಚ್‌5 ರಂದು ಧಾರವಾಡದ ಶುಕ್ರವಾರಪೇಟೆಯ ಒಂದು ಪುಟ್ಟ ಮನೆಯಲ್ಲಿ ಜನಿಸಿದರು. ತಂದೆ ಚಿಕ್ಕೂರಾವ ನಾಡಿಗೇರ, ತಾಯಿ ಅಂಬಾಬಾಯಿ. ಸುಸಂಸ್ಕೃತ ಮನೆತನದಲ್ಲಿ ಬೆಳೆದ ಗಂಗೂಬಾಯಿಯವರಿಗೆ ಬಾಲ್ಯದಲ್ಲಿಯೇ ಸಂಗೀತದ ಆಸಕ್ತಿಯಿತ್ತು. ತಾಯಿ ಅಂಬಾಬಾಯಿ ಕರ್ನಾಟಕೀ ಸಂಗೀತದ ಶ್ರೇಷ್ಠ ಕಲಾವಿದೆ. ಗಂಗೂಬಾಯಿ ಮನೆಯ ಸಮೀಪವಿರುವ ಆಲೂರು ವೆಂಟಕರಾಯರ ರಾಷ್ಟ್ರೀಯ ಶಾಲೆಯಲ್ಲಿ 5ನೇ ತರಗತಿವರೆಗೆ ಓದಿದರು. ಮಗಳಿಗೆ ಹಿಂದೂಸ್ತಾನಿ ಸಂಗೀತ ಕೊಡಿಸುವ ಸಲುವಾಗಿ, ಪಾಲಕರು ಧಾರವಾಡ ಬಿಟ್ಟು ಹುಬ್ಬಳ್ಳಿಗೆ ಬಂದು ನೆಲೆಸಿದರು. ಗಂಗೂಬಾಯಿಯವರ ಶಾಸ್ತ್ರೋಕ್ತ ಸಂಗೀತ ಶಿಕ್ಷಣವು ದುರ್ಗದ ಬೈಲದ ಕಿನ್ನರಿ ವಿದ್ವಾನ್ ಹುಲಗೂರ ಕೃಷ್ಣಾಚಾರ್ಯರಲ್ಲಿ ಆರಂಭವಾಯಿತು. ಗುರುಗಳು ಒಂದೇ ವರ್ಷದಲ್ಲಿ ಅರವತ್ತು ಚೀಜುಗಳನ್ನು ಕಲಿಸಿದರು. ನಂತರ ಅವರು ಸೋದರಮಾವ ರಾಮಣ್ಣ ಹಾಗೂ ದತ್ತೋಪಂತ ದೇಸಾಯಿಯವರ ಸಹಕಾರದೊಂದಿಗೆ ಸವಾಯಿ ಗಂಧರ್ವರಲ್ಲಿ ಸಂಗೀತ ಶಿಕ್ಷಣವನ್ನು ಮುಂದುವರೆಸಿದರು. ಗಂಗೂಬಾಯಿ ಹುಬ್ಬಳ್ಳಿಯಿಂದ ಪ್ರತಿದಿನ ಕುಂದಗೋಳಕ್ಕೆ ಹೋಗಿ ಸಂಗೀತವನ್ನು ಕಲಿಯಬೇಕಾಗಿತ್ತು. ಅವರು ಶ್ರದ್ಧೆಯಿಂದ ಸಂಗೀತವನ್ನು ಕಲಿಯತೊಡಗಿದರು. ಸವಾಯಿ ಗಂಧರ್ವರು ಗಂಗೂಬಾಯಿಯವರನ್ನು ಶಿಷ್ಯೆಯಾಗಿ ಸ್ವೀಕರಿಸಿ, ಪ್ರೀತಿಯಿಂದ ತಮ್ಮ ವಿದ್ಯೆಯನ್ನೆಲ್ಲ ಧಾರೆಯೆರೆದರು. ಅಂಬಾಬಾಯಿ ತ್ಯಾಗ, ನಿಷ್ಠೆಯಿಂದ ತಮ್ಮಲ್ಲಿದ್ದ ಸಂಗೀತದ ಬಗೆಗಿನ ಭಕ್ತಿ-ಪ್ರೇಮದ ಭಾವದ ಸಾರವನ್ನೇ ಮಗಳಿಗೆ ಧಾರೆಯೆರೆದರು.  

1929ರಲ್ಲಿ ಗಂಗೂಬಾಯಿ ಹುಬ್ಬಳ್ಳಿಯ ವಕೀಲರಾದ ಗುರುರಾವ ಕೌಲಗಿಯವರನ್ನು ವಿವಾಹವಾದರು. ಕೌಲಗಿಯವರು ಸಂಗೀತ ರಸಿಕರು ಮತ್ತು ಸುಸಂಸ್ಕೃತ ವ್ಯಕ್ತಿಗಳಾಗಿದ್ದರು. ಮದುವೆಯ ನಂತರವೂ ಗಂಗೂಬಾಯಿ ತಾಯಿಯ ಮನೆಯಲ್ಲಿದ್ದುಕೊಂಡು ಸಂಗೀತಾಭ್ಯಾಸವನ್ನು ಮುಂದುವರೆಸಿದರು. ಮದವೆಯಾದ ಒಂದು ವರ್ಷದಲ್ಲಿ ಗಂಗೂಬಾಯಿ ಮಗಳು ಕೃಷ್ಣಾಳಿಗೆ ಜನುಮ ನೀಡಿದರು. ಹಾಗೆಯೇ ಗಂಗೂಬಾಯಿ 1932ರಲ್ಲಿ ಎರಡನೇಯ ಮಗುವಿನ ತಾಯಿಯಾಗಲಿದ್ದರು. ಆದರೆ ತಾಯಿ ಅಂಬಾಬಾಯಿ ಹೊಟ್ಟೆನೋವಿನಿಂದ ಆಪರೇಷನ್ ನಂತರ ಆಸ್ಪತ್ರೆಯಲ್ಲಿರುವಾಗಲೇ ಅತೀವ ರಕ್ತಸ್ರಾವವಾಗಿ ಕೊನೆಯುಸಿರೆಳೆದರು. ಹೀಗಾಗಿ ಸಂಸಾರದ ಜವಬ್ದಾರಿಯೆಲ್ಲ ಗಂಗೂಬಾಯಿಯವರ ಹೆಗಲ ಮೇಲೆಯೇ ಬಂದಿತು. ಅವರು  ಹಡಗಿನಂತಹ ಸಂಸಾರದ ಸಂಪೂರ್ಣ ಹೊಣೆಯನ್ನು ಹೊತ್ತು, ತಮ್ಮ ಪುಟ್ಟ ಮಕ್ಕಳನ್ನು ಸಂಭಾಳಿಸಿಕೊಂಡು ಸಂಗೀತ ಸಾಧನೆಯನ್ನು ಮುಂದುವರೆಸಿದರು. ಅವರಿಗೆ ಮೂವರು ಮಕ್ಕಳು. ಕೃಷ್ಣಾ, ಬಾಬುರಾವ ಮತ್ತು ನಾರಾಯಣರಾವ. ಗಂಗೂಬಾಯಿಯವರು ಎಚ್‌.ಎಂ.ವಿ ಕಂಪನಿಯವರ ಆಮಂತ್ರಣದ ಮೇರೆಗೆ ಮುಂಬೈಗೆ ಹೋಗಿ, ‘ದಾರ-ದಾರ ಬೋಲೆ’ ಹಾಡಿನ ಜೊತೆಗೆ ಒಟ್ಟು ಹನ್ನೆರಡು ಹಾಡುಗಳ ಧ್ವನಿ ಮುದ್ರಿತ ಮಾಡಿಕೊಟ್ಟರು. ಅಲ್ಲಿ ಆಕಸ್ಮಿಕವಾಗಿ ಜೋಶಿಯವರೊಡನೆ ‘ಚಕಾಕೆ ಕೋರ ಚಂದ್ರಾಚಿ’ ಮರಾಠಿ ಯುಗಲಗೀತೆಗೆ ಧ್ವನಿಗೂಡಿಸಿದರು. ಅದು ಮಹಾರಾಷ್ಟ್ರದಲ್ಲಿ ಅತ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿತು.  

1936ರಲ್ಲಿ ಮುಂಬೈ ಆಕಾಶವಾಣಿಯಿಂದ ಅವರ ಹಾಡು ಪ್ರಸಾರವಾಯಿತು. ಅವರ ಮೊದಲ ರೇಡಿಯೋ ಕಾರ್ಯಕ್ರಮ ನೂರಕ್ಕೆ ನೂರರಷ್ಟು ಯಶಸ್ವಿಯಾಯಿತು. ನಂತರ ಗಂಗೂಬಾಯಿಯವರಿಗೆ ತಪ್ಪದೇ ತಿಂಗಳಿಗೆರಡು ರೇಡಿಯೋ ಕಾರ್ಯಕ್ರಮಗಳು ಬರತೊಡಗಿದವು. ಅವರು ಮೊದಲ ಕಾರ್ಯಕ್ರಮಕ್ಕೆ 50ರೂ ಸಂಭಾವನೆ ದೊರೆಯಿತು. ತಿಂಗಳಿಗೆರಡು ಸಲ ಮುಂಬೈಗೆ ಪಯಣಿಸಬೇಕಾಯಿತು. ಅವರ ಜೊತೆ ಪತಿ, ಸೋದರ ಮಾವಂದಿರು ಮತ್ತು ಇಡೀ ಕುಟುಂಬ ಯಾವಾಗಲೂ ಜತೆಗಿರುತ್ತಿದ್ದರು. 1937ರಲ್ಲಿ ಸವಾಯಿ ಗಂಧರ್ವರು ನಾಟಕ ಕಂಪನಿಯಿಂದ ನಿವೃತ್ತಿ ಹೊಂದಿ, ಕುಂದಗೋಳಕ್ಕೆ ಬಂದು ನೆಲೆಸಿದರು. ಗಂಗೂಬಾಯಿಯವರ ಸಂಗೀತಾಭ್ಯಾಸ ಮತ್ತೆ ಭರದಿಂದ ಸಾಗಿತು. ಯಮನ್, ತೋಡಿ, ಪೂರಿಯಾ, ಧನಶ್ರೀ, ಮುಲ್ತಾನಿ, ಬಿಭಾಸ್ ಹೀಗೆ ಅನೇಕ ರಾಗಗಳನ್ನು ಕರಗತ ಮಾಡಿಕೊಂಡರು. ಗುರುಗಳ ಕಾರ್ಯಕ್ರಮಗಳಿಗೆ ಅವರು ತಪ್ಪದೇ ಹಾಜರಾಗುತ್ತಿದ್ದರು.  

1938ರಲ್ಲಿ ಗಂಗೂಬಾಯಿ ಪ್ರಥಮ ಬಾರಿಗೆ ಕೋಲ್ಕತ್ತಾ ಅಖಿಲಭಾರತ ಸಂಗೀತ ಸಮ್ಮೇಳನದಲ್ಲಿ ಹಾಡಿ ಸಂಗೀತ ಪ್ರೇಮಿಗಳನ್ನು ದಿಗ್ಭ್ರಮೆಗೊಳಿಸಿದರು. ಕಾರ್ಯಕ್ರಮದ ನಂತರ ಗಂಗೂಬಾಯಿಯವರನ್ನು ಕೆ.ಎಲ್‌.ಸೈಗಲ್, ಪಹಾಡೀ ಸನ್ಯಾಲರಂತಹ ಗಣ್ಯರು ಮನದುಂಬಿ ಹರಸಿದರು. ನಂತರ ದೇಶದ ಮೂಲೆ ಮೂಲೆಗಳಿಂದ ಅವರಿಗೆ ಆವ್ಹಾನಗಳು ಬರತೊಡಗಿದವು. ಕೋಲ್ಕತ್ತಾ, ಜಲಂಧರ ಮತ್ತು ಗಯಾಗಳಂತಹ ಮಹತ್ವದ ಸಂಗೀತ ಮಹೋತ್ಸವಗಳಿಗೆ ಪ್ರತಿವರ್ಷ ಗಂಗೂಬಾಯಿಯವರನ್ನು ಆವ್ಹಾನಿಸತೊಡಗಿದರು. ದೇಶದಾದ್ಯಂತ ಆಕಾಶವಾಣಿಯ ಎಲ್ಲ ಕೇಂದ್ರಗಳಿಂದ ಅವರ ಗಾಯನ ನಿಯಮಿತವಾಗಿ ಪ್ರಸಾರವಾಗತೊಡಗಿತು. ಡಾ.ಗಂಗೂಬಾಯಿಯವರು ಅಮೇರಿಕಾ, ಫ್ರಾನ್ಸ್‌, ಜರ್ಮನಿ, ಕೆನಡಾ, ಇಂಗ್ಲೆಂಡ್ ಇತ್ಯಾದಿ ವಿದೇಶಗಳಲ್ಲಿಯೂ ತಮ್ಮ ಗಾನಸುಧೆಯನ್ನು ಹರಿಸಿದರು. ಕೆಲವೇ ದಿನಗಳಲ್ಲಿ ಕೀರ್ತಿ ಶಿಖರವನ್ನೇರಿದ ಗಂಗೂಬಾಯಿಯವರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಸಾಮ್ರಾಜ್ಞೆಯಾಗಿ ಮೆರೆದರು. 1952ರಲ್ಲಿ ಜೈಪುರದಲ್ಲಿ ನಡೆದ ಸಂಗೀತ ಸಮ್ಮೇಳನದಲ್ಲಿ ಮಾಜಿ ಪ್ರಧಾನಿ ಪಂಡಿತ ಜವಹರಲಾಲ ನೆಹರು ಅವರು ಗಂಗೂಬಾಯಿಯವರ ಗಾಯನವನ್ನು ತುಂಬಾ ಪ್ರಶಂಸಿದರು.  

ಗಂಗೂಬಾಯಿಯವರು ತಮ್ಮ ಸಂಗೀತವನ್ನು ಶಿಷ್ಯರಿಗೆ ಧಾರೆ ಎರೆದು ಬೆಳೆಸಿದ್ದಾರೆ. ಅವರ ಮಗಳಾದ ಕೃಷ್ಣಾ ಹಾನಗಲ್ಲ, ಪಂ.ನಾಗನಾಥ ಒಡೆಯರ, ಡಾ.ಸುಲಭಾ ನೀರಲಗಿ, ಗಾಯತ್ರಿ ಜೋಶಿ, ಅಶೋಕ ನಾಡಿಗೇರ, ಸೀತಾ ಹಿರೇಬೆಟ್ ಮುಂತಾದವರು ಅವರ ಶಿಷ್ಯರಾಗಿದ್ದಾರೆ. ಅಲ್ಲದೇ ಗಂಗೂಬಾಯಿಯವರ ದೀರ್ಘ ಜೀವನದಲ್ಲಿ ರಾಮಣ್ಣ ಹಾಗೂ ಪಂ.ಶೇಷಗಿರಿ ಹಾನಗಲ್ಲ ತಬಲಾ ಸಾಥ್ ನೀಡಿದರೆ, ಪಂ.ವಸಂತ ಕನಕಾಪುರ ಮತ್ತು ಅಪ್ಪಾ ಜಳಗಾಂವಕರ ಹಾರ್ಮೋನಿಯಮ್ ಸಾಥ್ ನೀಡಿರುವರು. ಹಾಗೆಯೇ ಪುರುಷೋತ್ತಮ ವಾಲವಾಲಕರ, ನಾರಾಯಣರಾವ್ ಇಂದೋರಕರ್, ಲಾಲಜಿ ಗೋಖಲೆ ಮುಂತಾದ ಕಲಾವಿದರು ಅವರಿಗೆ ಅನೇಕ ಕಾರ್ಯಕ್ರಮಗಳಲ್ಲಿ ಸಾಥ್ ನೀಡಿರುವರು.ಗಂಗೂಬಾಯಿಯವರು 89 ವಯಸ್ಸಿನ ನಂತರವು ಮುಂಬೈ ಥಾನಾದಲ್ಲಿ ನಡೆದ ಸ್ವರ ಸಮ್ಮೇಳನ, ಬಳಗಾವಿ ಅಕಾಡೆಮಿ ಆಫ್ ಪರ್‌ಫಾರ್ಮಿಂಗ್ ಆರ್ಟ್ಸ್‌, ಬೆಂಗಳೂರು ರವೀಂದ್ರ ಕಲಾ ಕ್ಞೇತ್ರ, ಕುಂದಗೋಳದ ನಾಡಿಗೇರ ವಾಡಾ, ಬೆಂಗಳೂರಿನ ಅರಮನೆ ಮೈದಾನದಲ್ಲಿ, ಈ ಟಿವಿ ವರ್ಷದ ಕನ್ನಡಿಗ ಪ್ರಶಸ್ತಿ ಸಮಾರಂಭ, ಬೆಳಗಾವಿ ಕೆಎಲ್‌ಇ ಸಂಸ್ಥೆಯ ಸಂಗೀತ ವಿಭಾಗದ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಸಂಗೀತ ಸೇವೆಯನ್ನು ನೀಡಿರುವುದು ಅದ್ಭುತವಾದುದು.  

ಡಾ.ಗಂಗೂಬಾಯಿಯವರು ಅಸಂಖ್ಯ ಪ್ರಶಸ್ತಿಗಳಿಂದ ಹಾಗೂ ಪದವಿಗಳಿಂದ ಗೌರವಿಸಲ್ಪಟ್ಟರು. ಪದ್ಮಭೂಷಣ, ಇಂಡಿಯನ್ ಮ್ಯೂಸಿಕ್ ಪ್ರಶಸ್ತಿ, ಆದಿತ್ಯ ವಿಕ್ರಮ ಬಿರ್ಲಾ ಕಲಾಶಿಖರ ಪುರಸ್ಕಾರ, ಗಾಯನ ಸಮಾಜ ಸೆಂಚುರಿ ಪ್ರಶಸ್ತಿ, ಶಂಕರ ದೇವ ಪ್ರಶಸ್ತಿ, ಟಿ.ಚೌಡಯ್ಯ ಮೆಮೊರಿಯಲ್ ಪ್ರಶಸ್ತ್ತಿ, ದೀನಾನಾಥ ಮಂಗೇಶ್ವರ ಪ್ರಶಸ್ತಿ, ರೋಹೆ ಗಜಿಲ್ ಬೇಗಂ ಅಖ್ತರ ಪ್ರಶಸ್ತಿ, ತಾನಸೇನ ಪ್ರಶಸ್ತಿ, ಜೀವಲ್ ಶಾ ಪ್ರಶಸ್ತ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕನ್ನಡ ಪುರಂದರ ಪ್ರಶಸ್ತ್ತಿ, ಐಟಿಸಿ ಸಂಗೀತ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸರ್ಕಾರದ ಫೆಲೋಶಿಪ್, ಗಾನಯೋಗಿ ಪಂಚಾಕ್ಷರಿ ಪ್ರಶಸ್ತಿ, ಸವಾಯಿ ಗಂಧರ್ವ ರಾಷ್ಟ್ರೀಯ ಪುರಸ್ಕಾರ, ನೆದರ್‌ಲ್ಯಾಂಡ್ ಕನ್ಸೂಲೆಟ್‌ಜನರಲ್ ಜೀವಿತ ಸಾಧನೆ ಪ್ರಶಸ್ತಿ, ಸಂಗೀತ ಶಿರೋಮಣಿ, ಭಾರತೀಯ ಕಂಠ, ಸಂಗೀತ ಸಾಮ್ರಾಜ್ಞೆ, ಸ್ವರ ಸಾಮ್ರಾಜ್ಞೆ, ಹೀಗೆ ಹಲವಾರು ಪ್ರಶಸ್ತ್ತಿ-ಪುರಸ್ಕಾರಗಳು ಅವರನ್ನರಸಿಕೊಂಡು ಬಂದಿವೆ. ಗಂಗೂಬಾಯಿಯವರಿಗೆ ಕರ್ನಾಟಕ ವಿಶ್ವವಿದ್ಯಾಲಯ, ಕಲ್ಬುರ್ಗಿ ವಿಶ್ವವಿದ್ಯಾಲಯ, ಹಂಪಿ ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯ, ಮುಂಬೈ ಸಂಗೀತ ಮಹಾಮಹೋಪಾಧ್ಯಾಯ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಗಳು ಡಾಕ್ಟರೇಟ್ ನೀಡಿ ಗೌರವಿಸಿವೆ. ಅಲ್ಲದೇ ಡಾ.ಗಂಗೂಬಾಯಿಯವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿ, ಕರ್ನಾಟಕ ವಿಧಾನಸಭೆ ಪರಿಷತ್ತಿನ ಸದಸ್ಯರಾಗಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಗಂಗೂಬಾಯಿಯವರ ಕುರಿತು ಬನಾರಸ ಹಿಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬರು ಪ್ರೌಢ ಪ್ರಬಂಧ ಸಲ್ಲಿಸಿ, ಪಿ.ಎಚ್‌.ಡಿ ಪದವಿ ಪಡೆದಿರುವರು. ಅವರ 75ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಹೊರಬಂದ ಅಭಿನಂದನಾ ಗ್ರಂಥ ಮತ್ತು ಧ್ವನಿಮುದ್ರಿಕೆಗಳು ಗಂಗೂಬಾಯಿಯವರ ಜೀವನದ ಮೇಲೆ ಹೊಸ ಬೆಳಕನ್ನು ಬೀರುತ್ತವೆ. ಅಭಿನಂದನಾ ಗ್ರಂಥವನ್ನು ಸಾಹಿತಿ ಎಸ್‌.ಎಲ್‌.ಭೈರ​‍್ಪ ಹಾಗೂ ಸಂಗೀತಜ್ಞ ಸದಾನಂದ ಕನವಳ್ಳಿಯವರು ಸಂಪಾದಿಸಿದ್ದಾರೆ.  

ಡಾ.ಗಂಗೂಬಾಯಿ ಅವರದು ಅತ್ಯಂತ ಸರಳ, ಸಾದಾ ಜೀವನ. ಅವರು ಯಾವಾಗಲೂ ಸಾದಾ, ಹಗುರಾದ ನೂಲಿನ ಸೀರೆಯನ್ನುಡುತ್ತಿದ್ದರು. ಅವರ ಆಹಾರವು ಅತ್ಯಂತ ಸಾದಾ-ಸಾತ್ವಿಕ ಆಹಾರ. ಅವರು ಮಕ್ಕಳಿಗೆ ತಾಯಿಯಾಗಿ, ಸೋದರ ಮಾವಂದಿರ ಕುಟುಂಬಗಳಿಗೆ ಆಧಾರವಾಗಿ, ಮೊಮ್ಮಕ್ಕಳು, ಮರಿಮಕ್ಕಳಿಗೆ ಪ್ರೀತಿಯ ಅಜ್ಜಿಯಾಗಿ ತಮ್ಮ ಕರ್ತವ್ಯಗಳನ್ನು ನಿಭಾಯಿಸಿದರು. ಗಂಗೂಬಾಯಿಯವರ ಕಂಚಿನ ಕಂಠಕ್ಕೆ ತಲೆದೂಗದವರೇ ಇಲ್ಲ. ಎಂಟೂವರೆ ದಶಕಗಳ ಸಂಗೀತ ಸೇವೆಗೈದ ಗಂಗೂಬಾಯಿ ಕರ್ನಾಟಕದ ಕೀರ್ತಿ ಬೆಳಗಿದ ಸ್ವರ ಸಾಮ್ರಾಜ್ಞೆ. ಜುಲೈ 21, 2009ರಂದು ಡಾ. ಗಂಗೂಬಾಯಿಯವರು ತಮ್ಮ 97ನೇ ವಯಸ್ಸಿನಲ್ಲಿ ಸಂಗೀತ ಸರಸ್ವತಿಯ ಪಾದ ಸೇರಿದರು. 97 ವರ್ಷಗಳ ತುಂಬು ಜೀವನವನ್ನು ನಡೆಸಿದ ಗಂಗೂಬಾಯಿ ಹಾನಗಲ್ಲರವರು ಮರಣೋತ್ತರ ತಮ್ಮ ಕಣ್ಣುಗಳನ್ನು ದಾನಮಾಡಿದ್ದು, ಅವರ ಮಾನವೀಯ ಗುಣದ ಪ್ರತೀಕವಾಗಿದೆ. ಸಂಗೀತ ಕ್ಷೇತ್ರದಲ್ಲಿ ಚಿರಸ್ಮರಣೀಯ ಸಾಧನೆ, ಅಳಿಸಲಾಗದ ಹೆಜ್ಜೆಗುರುತು.  

- ಸುರೇಶ ಗುದಗನವರ 

ಲೇಖಕರು 

ಧಾರವಾಡ 

9449294694