ಮಂಗಳೂರು, ಜ 20, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಸಮೀಪ ಸೋಮವಾರ ಅನುಮಾನಾಸ್ಪದ ಬ್ಯಾಗ್‍ವೊಂದನ್ನು ಅಧಿಕಾರಿಗಳು ಪತ್ತೆಯಾದ ಹಿನ್ನೆಲೆಯಲ್ಲಿ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿಐಪಿ ಟಿಕೆಟ್ ಕೌಂಟರ್ ಸಮೀಪ ಬ್ಯಾಗ್ ಪತ್ತೆಯಾಗಿದ್ದು, ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆಗಾಗಿ ತಕ್ಷಣವೇ ಬ್ಯಾಗ್ ಅನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಯಿತು. ಆದರೂ, ವಿಮಾನ ನಿಲ್ದಾಣದಲ್ಲಿ ಇತರ ಚುಟವಟಿಕೆಗಳಿಗೆ ತೊಂದರೆಯಾಗಿಲ್ಲ. ಅಲ್ಲದೆ, ವಿಮಾನಗಳು ನಿಗದಿಯಂತೆ ಹಾರಾಟ ನಡೆಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅನುಮಾನಾಸ್ಪದ ಬ್ಯಾಗ್ ಪತ್ತೆಯಾದಂತೆ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಮತ್ತು ಇತರ ಭದ್ರತಾ ಪಡೆಗಳನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ. ಪ್ರವೇಶ ದ್ವಾರದಲ್ಲಿ ವಿಮಾನ ನಿಲ್ದಾಣಕ್ಕೆ ಒಳಬರುವ ವಾಹನಗಳನ್ನು ತಡೆಯಲಾಗಿದ್ದು, ವಿಮಾನ ಪ್ರಯಾಣಿಕರು ತೆರಳಲು ಮತ್ತು ಆಗಮಿಸಲು ವಾಹನಗಳನ್ನು ಬೇರೆ ಮಾರ್ಗಕ್ಕೆ ಬದಲಾಯಿಸಲಾಗಿದೆ. ತಜ್ಞರು ಬ್ಯಾಗ್ ಅನ್ನು ಪರಿಶೀಲಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.