ನಾಟಕ : ಜೀವನದ ಪ್ರತಿಬಿಂಬ-ಮೋಹನ ರೆಡ್ಡಿ

ಹೂವಿನ ಹಡಗಲಿ 17: ನಾಟಕ ಜೀವನದ ಪ್ರತಿಬಿಂಬ ವಾಗಿದ್ದು ನಿತ್ಯದ ಬದುಕಿನಲ್ಲಿ ನಡೆಯುವ ಘಟನೆಗಳನ್ನ ಸಾಹಿತಿಗಳು ಬರಹ ರೂಪದಲ್ಲಿ ದಾಖಲಿಸಿ ಸಮಾಜದ ಓರೆ ಕೋರೆಗಳನ್ನ ತಿದ್ದುವ ಕೆಲಸ ಮಾಡುತ್ತಿದ್ದಾರೆ. ನಾಟಕದಿಂದ ಪ್ರಭಾವಿತರಾಗಿ ಅನೇಕರು ಪರಿವರ್ತನೆ ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟರು. ಅವರು ಪಟ್ಟಣದ ರಂಗಭಾರತಿ ಕಲಾಮಂದಿರದಲ್ಲಿ ರಂಗಭಾರತಿ,ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಆಯೋಜಿಸಿದ್ದ ನಿಂಗು ಸೊಲಗಿ ಯವರ  ’ನನ್ನಿನ್ನ ನಗಿ ನೋಡಿ’ ಪ್ರೇಮಪತ್ರಗಳ ಕೃತಿ ಆಧಾರಿತ ನಾಟಕ ’ದಾಂಪತ್ಯಗೀತ’ವನ್ನು ಉದ್ಘಾಟಿಸಿ ಮಾತನಾಡಿದರು. 

 ಈ ಭಾಗದಲ್ಲಿ ಸಾಹಿತ್ಯ,ಸಂಗೀತ ನಾಟಕ ಸಂಸ್ಕೃತಿ ಬೆಳೆಸಲು ಎಂ.ಪಿ.ಪ್ರಕಾಶ್ ಪರಿಶ್ರಮಿಸಿದ್ದಾರೆ. ಅವರ ಮಾರ್ಗದಲ್ಲಿ  ಸಾಹಿತ್ಯ, ರಂಗಭೂಮಿ ಪರಂಪರೆ ಮುಂದುವರಿಸುವ   ಕಾರ್ಯ ಮಾಡಬೇಕಾಗಿದೆ ಎಂದರು. ಈ ಪ್ರಯತ್ನದ ಭಾಗವಾಗಿ ರಂಗಭಾರತಿ ಕನ್ನಡ ಸಾಹಿತ್ಯ ಪರಿಷತ್ತು ಇಂತಹದೊಂದು ನಾಟಕ ಪ್ರದರ್ಶನ ಮಾಡುತ್ತಿರುವುದು ಅಭಿನಂದನೀಯ ಎಂದರು.ಕೃತಿಯ ಲೇಖಕ ಡಾ.ನಿಂಗು ಸೊಲಗಿ ಮಾತನಾಡಿ ವಿವಾಹ ಪೂರ್ವದಲ್ಲಿ ಮತ್ತು ನಂತರ ತಮ್ಮ ಧರ್ಮಪತ್ನಿಗೆ ಬರೆದ ಪತ್ರಗಳನ್ನೇ ಕೃತಿಯನ್ನಾಗಿಸಿದ ಹಿನ್ನೆಲೆಯನ್ನು ವಿವರಿಸಿದರು.  

ನಿವೃತ್ತ ಪ್ರಾಚಾರ್ಯ ಶಾಂತಮೂರ್ತಿ ಕುಲಕರ್ಣಿ ಮಾತನಾಡಿ ಹಡಗಲಿಯ ರಂಗ ಪರಂಪರೆಯ ಮಾಹಿತಿ ನೀಡಿದರು. ವೈದ್ಯಾಧಿಕಾರಿ ಡಾ.ಬಿ. ಶಿವಕುಮಾರ ಮಾತನಾಡಿ ಪ್ರಾಚೀನ ಕಾಲದಿಂದಲೂ ಮುಖ್ಯವಾಗಿರುವ ರಂಗಭೂಮಿಯ ಮಹತ್ವವನ್ನು ತಿಳಿಸಿದರು. ನಿವೃತ್ತ ಉಪಪ್ರಾಚಾರ್ಯ ಕೆ.ಎನ್‌.ಚಂದ್ರಗೌಡ, ವಿಜಯ್ ಹಿರೇಮಠ, ಸುಮಾ ವಿಜಯ್ ಉಪಸ್ಥಿತರಿದ್ದರು.ಕಸಾಪ ತಾಲೂಕು ಘಟಕದ ಅಧ್ಯಕ್ಷ ಟಿ.ವೀರೇಂದ್ರ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಬಾಗಲಕೋಟೆಯ ಸಂಗಮ ಕಲಾತಂಡದ ಕಲಾವಿದ ದಂಪತಿಗಳಾದ ಶ್ರೀಕಾಂತ್ ನವಲಗರಿ,ಅಕ್ಕಮ್ಮ ನವಲಗರಿಯ ಪ್ರಬುದ್ಧ ಅಭಿನಯ ಪ್ರೇಕ್ಷಕರ ಮನಸೂರೆಗೊಂಡಿತು. ಕೃತಿಯನ್ನು ರಂಗ ರೂಪಕ್ಕೆ ಪರಿವರ್ತಿಸಿ ನಿರ್ದೇಶಿಸಿದ ಮಹಾಂತೇಶ ರಾಮದುರ್ಗ ಪ್ರಯತ್ನ ಜನ ಮೆಚ್ಚುಗೆ ಪಡೆಯಿತು. ರಾಘವ ಕಮ್ಮಾರರ ಸಂಗೀತ ಸಂಯೋಜನೆ, ರಾಹುಲ್, ಸಂತೋಷರ ಬೆಳಕಿನ ನಿರ್ವಹಣೆ ನಾಟಕಕ್ಕೆ ಪೂರಕವಾಗಿತ್ತು. ಪ್ರಾರಂಭದಲ್ಲಿ ಸಂಗೀತ ಕಲಾವಿದರಾದ ಬಿ. ಯುವರಾಜಗೌಡ ಪ್ರಾರ್ಥಿಸಿದರು.ಕಸಾಪ ಮಾಜಿ ಅಧ್ಯಕ್ಷ ಎಚ್‌.ಜಿ. ಪಾಟೀಲ್ ಸ್ವಾಗತಿಸಿದರು.ಡಾ.ಕೆ. ಸತೀಶ್ ಪ್ರಸ್ತಾವಿಕವಾಗಿ ಮಾತನಾಡಿದರು. ಗೌರವ ಕಾರ್ಯದರ್ಶಿ ಎ.ಎಂ ಚನ್ನವೀರಸ್ವಾಮಿ ವಂದಿಸಿದರು.ಶಿಕ್ಷಕ ಗಡ್ಡಿ ಶಿವಕುಮಾರ ಕಾರ್ಯಕ್ರಮ ನಿರ್ವಹಿಸಿದರು.