ಗಡುವಿಗೆ ಮುನ್ನವೇ ಡೆತ್ ವಾರೆಂಟ್ ಜಾರಿ ಅಧೀನ ನ್ಯಾಯಾಲಯಗಳ ಪ್ರವೃತ್ತಿಗೆ ಸುಪ್ರೀಂ ಕೋರ್ಟ್ ಗರಂ

suprem court

ನವದೆಹಲಿ, ಫೆ ೨೦ -  ಮರಣ ದಂಡನೆ ಶಿಕ್ಷೆ ಗೊಳಗಾಗಿರುವ  ಅಪರಾಧಿಗಳು    ಸುಪ್ರೀಂ ಕೋರ್ಟ್ ನಲ್ಲಿ   ಮೇಲ್ಮನವಿ ಸಲ್ಲಿಸಲು   ಇರುವ  ಗಡುವಿಗೆ     ಮುನ್ನವೇ      ವಿಚಾರಣಾ ನ್ಯಾಯಾಲಯಗಳು ಡೆತ್ ವಾರಂಟ್ ಜಾರಿ ಗೊಳಿಸಲು  ಆದೇಶ  ನೀಡುತ್ತಿರುವ   ಪ್ರವೃತ್ತಿಯನ್ನು   ಸುಪ್ರೀಂ ಕೋರ್ಟ್ ಗುರುವಾರ ಪ್ರಶ್ನಿಸಿದೆ.   

ಅತ್ಯಾಚಾರ ಪ್ರಕರಣದಲ್ಲಿ   ಗಲ್ಲು ಶಿಕ್ಷೆಗೆ ಗುರಿಯಾಗಿರುವ   ತಪ್ಪಿತಸ್ಥನೊಬ್ಬ   ಸಲ್ಲಿಸಿದ   ಆರ್ಜಿ   ವಿಚಾರಣೆಯ  ವೇಳೆ   ಸುಪ್ರೀಂ ಕೋರ್ಟ್   ಈ  ಅಭಿಪ್ರಾಯವ್ಯಕ್ತಪಡಿಸಿದೆ.

ಎರಡು ವರ್ಷಗಳ ಹಿಂದೆ ಸೂರತ್  ನಗರದಲ್ಲಿ     ಮೂರು ವರ್ಷದ   ಪುಟ್ಟ  ಮಗುವಿನ ಮೇಲೆ  ನಡೆದಿದ್ದ  ಅತ್ಯಾಚಾರ, ಕೊಲೆ ಪ್ರಕರಣದಲ್ಲಿ  ಅನಿಲ್ ಸುರೇಂದ್ರ ಯಾದವ್   ಎಂಬ  ತಪ್ಪಿತಸ್ಥನಿಗೆ    ವಿಚಾರಣಾ ನ್ಯಾಯಾಲಯ  ಮರಣದಂಡನೆ ವಿಧಿಸಿದೆ.    ಇದರೊಂದಿಗೆ  ಫೆಬ್ರವರಿ ೨೯ ರಂದು    ಅಪರಾಧಿಗೆ  ಮರಣದಂಡನೆ   ಶಿಕ್ಷೆ  ಜಾರಿಗೊಳಿಸುವಂತೆ   ಗುಜರಾತ್ ಸೆಷನ್ಸ್ ನ್ಯಾಯಾಲಯ ಡೆತ್ ವಾರಂಟ್ ಹೊರಡಿಸಿದೆ. 

ಈ ಡೆತ್ ವಾರಂಟ್  ವಿರುದ್ಧ    ತಪ್ಪಿತಸ್ಥ    ಸುಪ್ರೀಂ ಕೋರ್ಟ್ ಗೆ    ಮೊರೆ ಹೋಗಿದ್ದಾನೆ.   

 ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು  ಗಡುವು  ಮುಗಿಯುವ  ಮೊದಲೇ    ತನ್ನ   ವಿರುದ್ಧ ಡೆತ್ ವಾರಂಟ್ ಹೊರಡಿಸಲಾಗಿದೆ ಎಂದು ಅಪರಾಧಿ  ತನ್ನ  ಅರ್ಜಿಯಲ್ಲಿ ತಕರಾರು ಎತ್ತಿದ್ದ.    

ಆರ್ಜಿ   ವಿಚಾರಣೆ   ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ನ್ಯಾಯಪೀಠ, ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದೆ.

ಮರಣದಂಡನೆ ಶಿಕ್ಷೆಯ   ವಿರುದ್ದ      ತಪ್ಪಿತಸ್ಥ   ಸುಪ್ರೀಂ ಕೋರ್ಟ್‌ನಲ್ಲಿ   ಮೇಲ್ಮನವಿ ಸಲ್ಲಿಸಲು   ೬೦ ದಿನಗಳ ಗಡುವು ಮುಗಿಯುವ ಮೊದಲು  ಅಧೀನ   ನ್ಯಾಯಾಲಯಗಳು   ಡೆತ್  ವಾರೆಂಟ್  ಹೊರಡಿಸಬಾರದು  ಎಂದು ೨೦೧೫ ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ  ತೀರ್ಪನ್ನು  ನ್ಯಾಯಪೀಠ   ನೆನಪಿಸಿದೆ.  ಸುಪ್ರೀಂ ಕೋರ್ಟ್ ತೀರ್ಪಿನ ಹೊರತಾಗಿಯೂ,   ಅಧೀನ ನ್ಯಾಯಾಲಯಗಳು ಹೇಗೆ  ಡೆತ್  ವಾರೆಂಟ್  ಹೊರಡಿಸುತ್ತವೆ?    ಎಂದು ಪ್ರಶ್ನಿಸಿದೆ.  ಈ ಕುರಿತು ಯಾರೋ ಒಬ್ಬರು   ನಮಗೆ   ಉತ್ತರ  ನೀಡಬೇಕು ಎಂದು  ಆದೇಶಿಸಿರುವ  ನ್ಯಾಯಪೀಠ,     ನ್ಯಾಯ ವ್ಯವಸ್ಥೆ  ಈ ರೀತಿ  ಸಾಗುವುದನ್ನು   ಎಂದಿಗೂ   ಒಪ್ಪಲಾಗದು    ಎಂದು  ಬೇಸರ ವ್ಯಕ್ತಪಡಿಸಿದೆ.

ಅಧೀನ ನ್ಯಾಯಾಲಯಗಳು   ಈ ರೀತಿ   ಡೆತ್  ವಾರೆಂಟ್    ಜಾರಿಗೊಳಿಸಲು  ಕಾರಣಗಳೇನು...?   ಎಂಬುದನ್ನು   ತಿಳಿದುಕೊಳ್ಳುವಂತೆ   ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ  ಅವರಿಗೆ  ನ್ಯಾಯಪೀಠ  ಆದೇಶಿಸಿದೆ.   ತಪ್ಪಿತಸ್ಥ   ಅನಿಲ್ ಸುರೇಂದ್ರ ಯಾದವ್ ವಿರುದ್ಧ  ಗುಜರಾತ್ ಸೆಷನ್ಸ್ ನ್ಯಾಯಾಲಯ ಹೊರಡಿಸಿದ್ದ  ಡೆತ್ ವಾರಂಟ್ ಗೆ  ಸುಪ್ರೀಂ ಕೋರ್ಟ್  ತಡೆ ನೀಡಿದೆ.

ತೊಗರಿ ಖರೀದಿ ಗೊಂದಲ; ಉತ್ತರಕ್ಕೆ ಪ್ರತಿಪಕ್ಷಗಳ ಪಟ್ಟು

  ಬೆಂಗಳೂರು, ಫೆ 20- ರಾಜ್ಯದ ರೈತರು ಬೆಳೆಯುವ ತೊಗರಿ, ಜೋಳ, ಭತ್ತ ಮತ್ತು ರಾಗಿ ಬೆಳೆಗಳಿಗೆ ಸರ್ಕಾರ ನೀಡಲು ಮುಂದಾಗಿರುವ ಬೆಂಬಲ ಬೆಲೆ, ಅದರ ಖರೀದಿಯ ಪ್ರಮಾಣದ ಕುರಿತು ಗೊಂದಲಗಳು ಹಾಗೂ ಡಿಜಿಟೀಲಕರಣದಿಂದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕಾಂಗ್ರೆಸ್, ಜೆಡಿಎಸ್ ಶಾಸಕರು ಗುರುವಾರ ವಿಧಾನಸಭಾ ಕಲಾಪದ ವೇಳೆ ಪ್ರಸ್ತಾಪಿಸಿದರು. 

  ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಸಿದ್ದರಾಮಯ್ಯ ಅವರು, ರಾಜ್ಯಪಾಲರ ಭಾಷಣದಲ್ಲಿ ತೊಗರಿ ಸೇರಿದಂತೆ ಹಲವು ಬೆಳೆಗಳಿಗೆ ಬೆಂಬಲ ಬೆಲೆ ನೀಡುವುದಾಗಿ ಘೋಷಿಸಲಾಗಿದೆ. ಆದರೆ, 20 ಕ್ವಿಂಟಲ್ ತೊಗರಿಯನ್ನು ಖರೀದಿಸುವುದಾಗಿ ಘೋಷಿಸಿ, ಈಗ ಕೇವಲ 10 ಕ್ವಿಂಟಾಲ್ ತೊಗರಿಯನ್ನು ಮಾತ್ರ ಖರೀದಿಸಲಾಗುತ್ತಿದೆ ಎಂದು ಆರೋಪಿಸಿದರು. 

  ಬೀದರ್ ನಲ್ಲಿ ನಡೆದ ಪಶು ಸಮ್ಮೇಳನಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರೈತರಿಂದ 20 ಕ್ವಿಂಟಾಲ್ ತೊಗರಿ ಖರೀದಿಸುವುದಾಗಿ ಘೋಷಿಸಿದ್ದರು. ಇದನ್ನು ರೈತರು ನಂಬಿಕೊಂಡಿದ್ದಾರೆ. ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ 12ರಿಂದ 13 ಲಕ್ಷ ಮೆಟ್ರಿಕ್ ಟನ್ ತೊಗರಿ ಬೆಳೆ ಬಂದಿದೆ. ಹೆಚ್ಚುವರಿ ಬೆಳೆ ಬೆಳೆದ ರೈತರು ಏನು ಮಾಡಬೇಕು ಎಂದು ಆರೋಪಿಸಿದರು. 

  ಅದಕ್ಕೆ ಉತ್ತರಿಸಿದ ಯಡಿಯೂರಪ್ಪ 2018ರ ಫೆ. 18ರವರೆಗೆ ತೊಗರಿ ಖರೀದಿಗೆ 3,111 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಇಲ್ಲಿಯವರೆಗೆ 31.91 ಲಕ್ಷ ರೈತರಿಂದ 3.45 ಲಕ್ಷ  ಕ್ವಿಂಟಾಲ್ ತೊಗರಿ ಖರೀದಿಸಲಾಗಿದೆ. ಇಲ್ಲಿಯವರೆಗೆ ಪ್ರತಿ ರೈತರಿಂದ 10 ಕ್ವಿಂಟಲ್ ತೊಗರಿ ಖರೀದಿಸಲಾಗುತ್ತಿದೆ. 20 ಕ್ವಿಂಟಾಲ್ ಖರೀದಿಗೆ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಅನುಮತಿಗಾಗಿ ಕಾಯುತ್ತಿದ್ದೇವೆ ಎಂದರು. 

  ಇದರಿಂದ ಪ್ರತಿಪಕ್ಷ ಸದಸ್ಯರು ಸಮಾಧಾನಗೊಳ್ಳದಾಗ ಮಧ್ಯಪ್ರವೇಶಿಸಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್. ಕೇಂದ್ರ ಸರ್ಕಾರ ನೀಡುವ 5,800 ರೂ.ಗಳಿಗೆ 300 ರೂ. ಸೇರಿಸಿ ಬೆಂಬಲ ಬೆಲೆ ನೀಡಿ ಖರೀದಿಸಲಾಗುತ್ತಿದೆ. ಅದರ ಮಿತಿಯನ್ನು ಹೆಚ್ಚಿಸುವಂತೆ ಮುಖ್ಯಮಂತ್ರಿಗಳು ಹಾಗೂ ತಾವು ಕೂಡ ಪತ್ರ ಬರೆದಿದ್ದೇವೆ ಎಂದು ಸಮರ್ಥನೆ ನೀಡಿದರು. 

  ಅದನ್ನೊಪ್ಪದ ಪ್ರಿಯಾಂಕ್ ಖರ್ಗೆ, ಕೇಂದ್ರ ಸರ್ಕಾರ ಈಗಾಗಲೇ ಬಜೆಟ್ ನಲ್ಲಿ ಕೂಡ ಖರೀದಿ ಮಿತಿ ಹೆಚ್ಚಳ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಮುಖ್ಯಮಂತ್ರಿಗಳು ಮಾತ್ರ ತಪ್ಪು ಹೇಳಿಕೆ ನೀಡಿ ಜನರ ದಾರಿ ತಪ್ಪಿಸುತ್ತಿರುವುದೇಕೆ. ಈ ಕುರಿತು ಅವರು ಸ್ಪಷ್ಟನೆ ನೀಡಲೇಬೇಕು ಎಂದು ಒತ್ತಾಯಿಸಿದರು. 

  ಈ ನಡುವೆ, ಕಾಂಗ್ರೆಸ್  ಹಾಗೂ ಜೆಡಿಎಸ್ ಸದಸ್ಯರು, ಭತ್ತ, ರಾಗಿ ಹಾಗೂ ಜೋಳದ ಬೆಳೆ ಖರೀದಿಯಲ್ಲಿ ಕೂಡ ರೈತರು ಡಿಜಟಲೀಕರಣದ ಸಮಸ್ಯೆ ಎದುರಿಸುತ್ತಿದ್ದಾರೆ. ರೈತರು ತಮ್ಮ ಜಮೀನಿನ ಜಿಪಿಎಸ್ ವಿವರಗಳನ್ನು ನೀಡಬೇಕಾಗುತ್ತದೆ. ಇದರಿಂದ ರೈತರು ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು. 

  ಈ ಕುರಿತು ಮುಖ್ಯಮಂತ್ರಿಗಳು ತಮ್ಮ ಉತ್ತರದಲ್ಲಿ ಸಮರ್ಥನೆ ನೀಡುತ್ತಾರೆ ಎಂದು ಸ್ಪೀಕರ್ ಸಮಜಾಯಿಸಿ ನೀಡಿದರು. ಆಗ ಸಿದ್ದರಾಮಯ್ಯ, ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿದ್ದಲ್ಲಿ ರಾಮರಾಜ್ಯ ಮಾಡಬಹುದು ಎಂದು ಬಿಜೆಪಿಯವರು ಹೇಳಿಕೆ ನೀಡುತ್ತಿದ್ದರು. ಈಗ ಎರಡೂ ಕಡೆ ನಿಮ್ಮದೇ ಸರ್ಕಾರವಿದೆ. ರಾಮರಾಜ್ಯ ಮಾಡಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.