ಬೇಸಿಗೆ ಶಿಬಿರಗಳು ಮಕ್ಕಳ ಅಭಿವೃದ್ಧಿಗೆ ಪೂರಕ: ಚೇತನ ಕುಮಾರ ಎಂ. ಎನ್

ಬೇಸಿಗೆ ಶಿಬಿರಗಳು ಮಕ್ಕಳ ಅಭಿವೃದ್ಧಿಗೆ ಪೂರಕ: ಚೇತನ ಕುಮಾರ ಎಂ. ಎನ್  Summer camps are conducive to children's development: Chetana Kumar M. N

ಲೋಕದರ್ಶನ ವರದಿ 

ಬೆಳಗಾವಿ 04: ಬೇಸಿಗೆಯ ಶಿಬಿರವು ಮೋಜಿನ ಜೊತೆಗೆ ಕಲಿಕೆಯ ಮಹತ್ವವನ್ನು ಮಕ್ಕಳಿಗೆ ತಿಳಿಸುತ್ತದೆ. ಇಲ್ಲಿ ನೀಡುವ ನೀತಿ-ಮೌಲ್ಯಗಳನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಶಿಕ್ಷಣದಲ್ಲಿ ಉನ್ನತ ಮಟ್ಟಕ್ಕೆ ಏರಬೇಕು, ಜೊತೆಗೆ ಮಕ್ಕಳ ಸರ್ವಾಂಗೀಣ ಬೆಳವಣಿಗೆ ಬೇಸಿಗೆ ಶಿಬಿರಗಳಿಂದ ಮಾತ್ರ ಸಾಧ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬೆಳಗಾವಿ ಉಪನಿರ್ದೇಶಕರು ಹಾಗೂ ಜಿಲ್ಲಾ ಬಾಲಭವನದ ಸದಸ್ಯ ಕಾರ್ಯದರ್ಶಿಗಳಾದ ಚೇತನ ಕುಮಾರ ಎಂ. ಎನ್ ಹೇಳಿದರು.  

ನಗರದ ಮಹಾಂತೇಶ ನಗರದಲ್ಲಿರುವ ಮಹಿಳಾ ಕಲ್ಯಾಣ ಸಂಸ್ಥೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ ಹಾಗೂ ಜಿಲ್ಲಾ ಬಾಲಭವನ ಸೊಸೈಟಿ ವತಿಯಿಂದ 5ರಿಂದ 16 ವರ್ಷದ ಮಕ್ಕಳಿಗಾಗಿ ಹಮ್ಮಿಕೊಂಡಿರುವ 15 ದಿನಗಳ ಉಚಿತ ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಕಾರ್ಯಕ್ರಮದಲ್ಲಿ ಮಾತನಾಡಿದ ಮಹಾನಗರ ಪಾಲಿಕೆ ಬೆಳಗಾವಿಯ ಉಪ ಆಯುಕ್ತ ಆಡಳಿತ ಧಿಕಾರಿ ಮಹಾನಗರ ಪಾಲಿಕೆ ಬೆಳಗಾವಿಯ ಉದಯ ಕುಮಾರ ಅವರು, “ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಶಿಬಿರದಲ್ಲಿ ಚಿತ್ರಕಲೆ, ಕರಕುಶಲ ಕಲೆಗಳು, ಸಂಗೀತ, ನೃತ್ಯ, ಕರಾಟೆ, ಧ್ಯಾನ, ಯೋಗ, ಆಟಗಳು ಮತ್ತು ನಾಟಕ ಸೇರಿದಂತೆ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಬೇಸಿಗೆ ರಜೆ ಸಮಯದಲ್ಲಿ ಕಾಲ ಹರಣ ಮಾಡುವುದಕ್ಕಿಂತ, ಮಕ್ಕಳು ಇಂತಹ ಬೇಸಿಗೆ ಶಿಬಿರಗಳಲ್ಲಿ ಉತ್ಸಾಹದಿಂದ ಭಾಗವಹಿಸಿ, ಮಾಡಿದ ತಪ್ಪುಗಳಿಂದ ಪಾಠ ಕಲಿತು ಜೀವನದಲ್ಲಿ ಮುಂದುವರೆಯಬೇಕು,” ಎಂದು ತಿಳಿಸಿದರು.  

ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೆಳಗಾವಿಯ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಸಂದೀಪ ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿಗಳಾದ ಕಾಂಚನ ಅಮಟೆ, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ (ಬೆಳಗಾವಿ ನಗರ) ಕೆ.ವಿ. ರಾಮಮೂರ್ತಿ, ಮಹಿಳಾ ಕಲ್ಯಾಣ ಸಂಸ್ಥೆಯ ಸಂಸ್ಥಾಪಕರಾದ ಎಂ. ಎಸ್‌. ಚೌಗಲಾ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ಮತ್ತು ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಉಪಸ್ಥಿತರಿದ್ದರು.