ಟೆಹ್ರಾನ್, ಜ.14 (ಸ್ಪುಟ್ನಿಕ್) ತನ್ನ ಸೇನಾ ಕಮಾಂಡರ್ ಖಾಸಿಮ್ ಸುಲೈಮಾನಿ ಹತ್ಯೆಗೆ ಅಮೆರಿಕ ಸರ್ಕಾರ ಮತ್ತು ಸಶಸ್ತ್ರ ಪಡೆಗಳನ್ನು ಹೊಣೆಗಾರರನ್ನಾಗಿ ಮಾಡಲು ಇರಾನ್ ಉದ್ದೇಶಿಸಿದ್ದು, ಪ್ರಕರಣವನ್ನು ಹೇಗ್‌ನ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯಕ್ಕೆ ಕೊಂಡೊಯ್ಯುವುದಾಗಿ ಇರಾನ್‌ನ ನ್ಯಾಯಾಂಗ ವಕ್ತಾರ ಘೋಲಮ್ ಹುಸೇನ್ ಇಸ್ಮಾಯೀಲ್ ಮಂಗಳವಾರ ಹೇಳಿದ್ದಾರೆ.
ಸುಲೈಮಾನಿ ಹತ್ಯೆಯ ಜವಾಬ್ದಾರಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಹಿಸಿಕೊಳ್ಳಬೇಕು ಎಂದು ಇರಾನ್ ಮುಖ್ಯ ನ್ಯಾಯಮೂರ್ತಿ ಇಬ್ರಾಹಿಂ ರೈಸಿ ಈಗಾಗಲೇ ಹೇಳಿದ್ದಾರೆ.
"ಈ ಅಪರಾಧಕ್ಕಾಗಿ ಅಮೆರಿಕದ ಮಿಲಿಟರಿ, ಸರ್ಕಾರ ಮತ್ತು ಟ್ರಂಪ್‌ರನ್ನು ಹೇಗ್‌ನ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ನಾವು ಉದ್ದೇಶಿಸಿದ್ದೇವೆ" ಎಂದು ಇಸ್ಮಾಯಿಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇರಾಕಿ ನ್ಯಾಯಾಲಯಗಳಲ್ಲಿ ಮತ್ತು ಇರಾನ್ ಸುಪ್ರೀಂ ಕೋರ್ಟ್‌ನಲ್ಲಿ ಅಮೆರಿಕದ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಬಹುದು ಎಂದು ಅವರು ಹೇಳಿದರು.