ತಿರುಚಿನಾಪಳ್ಳಿ, ಅಕ್ಟೋಬರ್ 27: ತಮಿಳುನಾಡಿನ ತಿರುಚಿನಾಪಳ್ಳಿ ಜಿಲ್ಲೆಯ ನಾಡುಕಟ್ಟುಪಟ್ಟಿ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದು 40 ಗಂಟೆಗಳಿಂದ 100 ಅಡಿಗಳಷ್ಟು ಆಳದಲ್ಲಿ ಸಿಲುಕಿಕೊಂಡಿರುವ ಎರಡು ವರ್ಷದ ಬಾಲಕ ಸುಜತ್ನನ್ನು ರಕ್ಷಿಸುವ ಅಂತಿಮ ಕಾರ್ಯಾಚರಣೆ ನಡೆಯುತ್ತಿದೆ. ತಮಿಳುನಾಡಿನ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್ಜಿಸಿ), ನೆಯೆವೆಲಿ ಲಿಗ್ನೈಟ್ ಕಾರ್ಪೋರೇಷನ್ (ಎನ್ಎಲ್ಸಿ) ತಜ್ಞರ ಮೇಲ್ವಿಚಾರಣೆಯಲ್ಲಿ ರಕ್ಷಣಾ ತಂಡಗಳು ಬೋರ್ವೆಲ್ನಿಂದ ಮೂರು ಮೀಟರ್ ಅಂತರದಲ್ಲಿ ಹೊಸ ಬೃಹತ್ 'ರಂಧ್ರ' ಕೊರೆಯಲು ಪ್ರಾರಂಭಿಸಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡ ಕಾರ್ಯಾಚರಣೆಯಲ್ಲಿ ನಿರತವಾಗಿವೆ. ರಂಧ್ರವನ್ನು ಸುಮಾರು 110 ಅಡಿಗಳಷ್ಟು ಆಳಕ್ಕೆ ಕೊರೆದ ನಂತರ, ಬೋರ್ವೆಲ್ಗೆ ಸಂಪರ್ಕವನ್ನು ಕಲ್ಪಿಸಲು ಸಮನಾಂತರವಾದ ಸುರಂಗವನ್ನು ಕೊರೆಯಲಾಗುತ್ತದೆ. ಈ ಮೂಲಕ ಬಾಲಕ ಬಿ. ಸುಜಿತ್ ವಿಲ್ಸನ್ನನ್ನು ತಲುಪಲು ಮತ್ತು ರಕ್ಷಿಸುವ ಕೊನೆಯ ಪ್ರಯತ್ನ ನಡೆಸಲಾಗುತ್ತದೆ ಎಂಧು ಮೂಲಗಳು ತಿಳಿಸಿವೆ. ತಮಿಳುನಾಡು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ವಿಭಾಗದ ಮೂರು ವಿಶೇಷ ತರಬೇತಿ ಪಡೆದ ಸಿಬ್ಬಂದಿ ಆಮ್ಲಜನಕದ ಮುಖವಾಡಗಳೊಂದಿಗೆ ಗುಂಡಿಯೊಳಗೆ ಪ್ರವೇಶಿಸಲಿದ್ದಾರೆ. ಅಗ್ನಿಶಾಮಕ, ರಕ್ಷಣಾ ಕಾರ್ಯಕರ್ತರು ಮತ್ತು ತುರ್ತು ಸೇವೆಗಳ ವಿಭಾಗದ ನಿರ್ದೇಶಕ ಸಿ. ಕೆ. ಗಾಂಧಿರಾಜನ್ ಸುದ್ದಿಗಾರರೊಂದಿಗೆ ಮಾತನಾಡಿ, ಇಂದು ಮಧ್ಯಾಹ್ನದ ವೇಳೆಗೆ ಸುಜಿತ್ನನ್ನು ಹೊರಗೆ ತೆಗೆಯುವ ಭರವಸೆ ಇದೆ ಎಂದರು. ಬಾಲಕ ಸುರಕ್ಷಿತವಾಗಿ ಕೊಳವೆಬಾವಿಯಿಂದ ಹೊರಗೆ ಬರಲಿ ಎಂದು ರಾಜ್ಯಾದ್ಯಂತ ವಿವಿಧ ದೇವಾಲಯಗಳು, ಚರ್ಚೆಗಳು ಮತ್ತು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಗಿದೆ. ಶುಕ್ರವಾರ ಸಂಜೆ 5.30ರ ಸುಮಾರಿಗೆ ಆಟವಾಡುತ್ತಿದ್ದಾಗ ಸುಜಿತ್ ಆಕಸ್ಮಿಕವಾಗಿ ತನ್ನ ಮನೆಯ ಪಕ್ಕದ ಜೋಳದ ಹೊಲದಲ್ಲಿದ್ದ ಹಳೆಯ ಕೊಳವೆ ಬಾವಿಗೆ ಬಿದ್ದಿದ್ದಾನೆ. ಪೊಲೀಸ್ ಮತ್ತು ಸ್ಥಳೀಯ ಜನರ ನೆರವಿನೊಂದಿಗೆ ತಮಿಳುನಾಡು ಅಗ್ನಿಶಾಮಕ ಮತ್ತು ರಕ್ಷಣಾ ವಿಭಾಗದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಬಾಲಕ ಆರಂಭದಲ್ಲಿ ಸುಮಾರು 30 ಅಡಿ ಆಳದಲ್ಲಿ ಕಂಡುಬಂದಿದ್ದ. ನಂತರ, ಬಾಲಕ 70 ಅಡಿಗಳಿಗೆ ಜಾರಿದ್ದಾನೆ ಮತ್ತು ಈಗ 100 ಅಡಿಗಳಿಗಿಂತ ಹೆಚ್ಚು ಆಳಕ್ಕೆ ಜಾರಿದ್ದಾನೆ. ಆತ ಬದುಕುಳಿಯುವ ಸಾಧ್ಯತೆ ಕ್ಷೀಣವಾಗಿದೆ.