ಬೆಂಗಳೂರು,ಅ.16: ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಪತ್ರಕರ್ತ ಅನಿಲ್ ರಾಜ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಂಗಳವಾರ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮದುವೆ ಆಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದಡಿ ಜೈಲು ಸೇರಿದ್ದ ಯಲಹಂಕ ಗಾಂಧಿನಗರ ನಿವಾಸಿ ಅನಿಲ್ ರಾಜ್ ಅವರು 'ಯಲಹಂಕ ವಾಯ್ಸ್' ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡುತ್ತಿದ್ದರು. ಅವರು ಕಳೆದ ರಾತ್ರಿ ಸಿಬ್ಬಂದಿಯ ಕಣ್ತಪ್ಪಿಸಿ 4ನೇ ಬ್ಯಾರಕ್ ಪ್ರವೇಶಿಸಿ ಅಲ್ಲಿನ ಶಿವ ದೇವಾಲಯದ ಕಂಬಿಗೆ ಬೆಡ್ಶಿಟ್ನಲ್ಲಿ ನೇಣು ಬಿಗಿದುಕೊಂಡು ಅಸ್ವಸ್ಥನಾಗಿದ್ದಾರೆ.
ಅನಿಲ್ರಾಜ್ನನ್ನು ಗಮನಿಸಿದ ಜೈಲು ಸಿಬ್ಬಂದಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಕೂಡಲೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಯುವತಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದಲ್ಲಿ ಅನಿಲ್ ಅವರನ್ನು ಯಲಹಂಕ ಉಪನಗರ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದು ಹಲವು ದಿನಗಳಿಂದ ಜೈಲಿನಲ್ಲಿ ಇದ್ದ ಅವರಿಗೆ ಜಾಮೀನು ಸಿಕ್ಕಿರಲಿಲ್ಲ.
ಕುಟುಂಬಸ್ಥರು ಅನಿಲ್ ರಾಜ್ ಅವರನ್ನು ನಿನ್ನೆ ಮಧ್ಯಾಹ್ನ ಜೈಲಿನಲ್ಲಿ ಭೇಟಿಯಾಗಿ ಹೋಗಿದ್ದರು.
ಪರಪ್ಪನ ಅಗ್ರಹಾರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.