ಬೆಂಗಳೂರು, ಸೆ 18 ವೈಯಕ್ತಿಕ ಲಾಲಸೆ, ಕೆಟ್ಟ ನಿರ್ಧಾರಗಳಿಂದ ಕಾಂಗ್ರೆಸ್ ನಾಯಕರಿಗೆ ಒಂದು ಸಣ್ಣ ಪಕ್ಷದ ಎದುರು ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿತ್ತು ಎಂದು ಕಾಂಗ್ರೆಸ್ ಅನರ್ಹ ಶಾಸಕ ಡಾ.ಕೆ ಸುಧಾಕರ್ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗೆ ತಿರುಗೇಟು ನೀಡಿದ್ದಾರೆ.
ಮಂಗಳವಾರ ಅನರ್ಹ ಶಾಸಕರ ಅರ್ಜಿಯನ್ನು ಸುಪ್ರೀಂಕೋರ್ಟ್ ಮುಂದೂಡಿಕೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿ ದಿನೇಶ್ ಗುಂಡೂರಾವ್, ಕಾಂಗ್ರೆಸ್ ನಲ್ಲಿ ರಾಜರಂತಿದ್ದ ಅನರ್ಹರು ಬಿಜೆಪಿ ಮುಂದೆ ಭಿಕ್ಷೆ ಬೇಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸುಧಾಕರ್, ನಿಮ್ಮಗಳ ಕೆಟ್ಟ ನಿಧರ್ಾರ ಹಾಗೂ ಬಲಹೀನತೆ ಬಗ್ಗೆ ದಿನೇಶ್ ಗುಂಡೂರಾವ್ ಮೊದಲು ಪರಾಮರ್ಶಿ ಮಾಡಿಕೊಳ್ಳಬೇಕು. ನಾಯಕರ ನಡವಳಿಕೆ ವರ್ತನೆಯಿಂದ ಕಾಂಗ್ರೆಸ್ ಪಕ್ಷ ಜೆಡಿಎಸ್ ಎದುರು ಭಿಕ್ಷಾಪಾತ್ರೆ ಹಿಡಿದು ಹೋಗುವಂತಾಯಿತು ಎಂದು ಕಿಡಿಕಾರಿದರು.
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 80 ಸ್ಥಾನಗಳಲ್ಲಿ ಗೆದ್ದಿತ್ತು. ಆದರೆ, ಲೋಕಸಭೆಯಲ್ಲಿ ಕಾಂಗ್ರೆಸ್ ಕೇವಲ ಒಂದು ಸ್ಥಾನ ಗೆಲ್ಲುವಂತಾಯಿತು. ಇತಿಹಾಸದಲ್ಲಿಯೇ ಕಾಂಗ್ರೆಸ್ ಈ ಹಿಂದೆ ಎಂದಿಗೂ ಇಂತಹ ಮುಖಭಂಗ ಅನುಭವಿಸಿರಲಿಲ್ಲ. ದಿನೇಶ್ ಗುಂಡೂರಾವ್ ತಮ್ಮ ಮಾತಿನ ಮೇಲೆ ಹಿಡಿತವಿಟ್ಟು ಮಾತನಾಡಬೇಕು. ಅನರ್ಹ ಶಾಸಕರಾದ ನಾವು ಭಿಕ್ಷುಕರಲ್ಲ ಎಂದು ಸುದ್ದಿಗಾರರೊಂದಿಗೆ ಹೇಳಿದರು.