ಖರ್ಟೋಮ್ ಫೆ 12 : ನರಮೇಧ ಮತ್ತು ಯುದ್ಧ ಅಪರಾಧದ ಆರೋಪದ ಮೇಲೆ ಸುಡಾನ್ ಮಾಜಿ ಅಧ್ಯಕ್ಷ ಒಮರ್ ಅಲ್-ಬಶೀರ್ ಅವರನ್ನುಅಂತರಾಷ್ಟ್ರೀಯ ಅಪರಾಧ ನ್ಯಾಯಾಲಯದಲ್ಲಿ(ಐಸಿಸಿ) ವಿಚಾರಣೆ ನಡೆಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.
2003 ರಲ್ಲಿ ಡರ್ ಫರ್ ನಲ್ಲಿ ಘರ್ಷಣೆಗಳಲ್ಲಿ ಸಾವಿರಾರು ಜನರನ್ನು ವ್ಯವಸ್ಥಿತವಾಗಿ ಹತ್ಯೆ ಮಾಡಲು ಆದೇಶಿಸಿದ ಆರೋಪ ಬಶೀರ್ ಮೇಲಿದೆ. ಈ ಘರ್ಷಣೆಗಳಲ್ಲಿ ಸುಮಾರು 3 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಬಶೀರ್ ಮತ್ತು ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದಿಂದ ಆರೋಪಿಸಲ್ಪಟ್ಟ ಎಲ್ಲರನ್ನೂ ಹೇಗ್ ನಲ್ಲಿ ವಿಚಾರಣೆಗೆ ಹಾಜರುಪಡಿಸಲು ಸುಡಾನ್ ಸರ್ಕಾರ ನಿರ್ಧರಿಸಿದೆ.
ಡರ್ ಫುರ್ ಪ್ರದೇಶದ ಬಂಡುಕೋರ ಗುಂಪುಗಳೊಂದಿಗೆ ಶಾಂತಿ ಮಾತುಕತೆ ನಡೆಸಿದ ನಂತರ ಬಶೀರ್ ಮತ್ತು ಇತರರನ್ನು ಹಸ್ತಾಂತರಿಸಲು ಸುಡಾನ್ಸರ್ಕಾರ ಒಪ್ಪಿಕೊಂಡಿದೆ. ಬಶೀರ್ ಅವರನ್ನು ಹಸ್ತಾಂತರಿಸುವುದು ಬಂಡುಕೋರರೊಂದಿಗಿನ ಶಾಂತಿ ಒಪ್ಪಂದದ ಪೂರ್ವಭಾವಿ ಷರತ್ತುಗಳಲ್ಲಿ ಒಂದಾಗಿದೆ.
‘ಜನರ ನೋವು ಶಮನ ಮಾಡದಿದ್ದರೆ ನ್ಯಾಯ ಗೆದ್ದಂತಾಗುವುದಿಲ್ಲ ಎಂದು ಸುಡಾನ್ ಸರ್ಕಾರದ ವಕ್ತಾರ ಮೊಹಮ್ಮದ್ ಹಸನ್ ಅಲ್-ತೈಶಿ ಹೇಳಿದ್ದಾರೆ.
‘ಯಾರೊಬ್ಬರೂ ಕಾನೂನಿಗೆ ಮೀರಿಲ್ಲ. ಬಶೀರ್ ಅವರನ್ನು ಹಸ್ತಾಂತರಿಸುವುದು ಜನರ ಇಚ್ಛೆಯಾಗಿದೆ.’ ಎಂದು ಅವರು ಹೇಳಿದ್ದಾರೆ.
ಬಿಬಿಸಿ ವರದಿಯ ಪ್ರಕಾರ ಬಶೀರ್ ಮತ್ತು ಇತರ ಮೂವರನ್ನು ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗುವುದು.
ಆದರೆ, ಈ ಆರೋಪಗಳನ್ನು ಬಶೀರ್ ನಿರಾಕರಿಸಿದ್ದಾರೆ.