ಬೆಳಗಾವಿ 22: ಕಳೆದ ಅಕ್ಟೋಬರ್‌ನಲ್ಲಿ ಅಪಘಾತಕ್ಕೊಳಗಾದ ಮಹಾರಾಷ್ಟ್ರದ ಗಡಹಿಂಗ್ಲಜನ ಸುಮಾರು 26 ವರ್ಷದ ಬೆಡಸೋರ (ಒತ್ತಡದ ಹುಣ್ಣು) ನಿಂದ ಬಳ್ಲುತ್ತಿದ್ದ ವ್ಯಕ್ತಿಗೆ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಶಸ್ತ್ರಚಿಕಿತ್ಸೆಯ ವಿಭಾಗದ ಹೆಸರಾಂತ ವೈದ್ಯ ಡಾ. ಸುನೀಲ ರೇವಣಕರ ಅವರಿಂದ ಸಫಲವಾಗಿ ಶಸ್ತ್ರಚಿಕಿತ್ಸ್ಸೆ ನೆರವೇರಿಸಲಾಗಿದೆ.
ಅಪಘಾತದಿಂದ ಕಾಲಿನ ಸ್ವಾಧೀನ ಕಳೆದುಕೊಂಡ ಈ ರೋಗಿಯು ಸತತ ಮೂರಾ್ನಲ್ಕು ತಿಂಗಳುಗಳಿಂದ ಹಾಸಿಗೆಯ ಮೇಲೆಯೇ ತನ್ನ ದಿನಗಳನ್ನು ಕಳೆಯುತ್ತಿದ್ದನು. ಈ ಕಾರಣದಿಂದ ಆತನಿಗೆ ಬೆನ್ನಿನಲ್ಲಿ ಈ ಹುಣ್ಣು ಬೆಳೆದು ಉಲ್ಬಣಗೊಂಡಿತ್ತು. ಸುಮಾರು 35 ಸೆಮಿ ಸುತ್ತಳೆತೆಯ ಈ ಹುಣ್ನು ಕೀವು ತುಂಬಿ ಸೋರುತ್ತಿತ್ತು. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ರೋಗಿಯ ಪರಿಸ್ಥಿತಿಯನ್ನು ರೋಗಿಗೆ ಹಾಗೂ ಅವರ ಸಂಬಂಧಿಕರಿಗೆ ಮನನಗೊಳಿಸಿ ಶಸ್ತ್ರಚಿಕಿತ್ಸೆಗೆ ಸಿದ್ದಗೊಳಿಸಲಾಯಿತು. ಅಲ್ಲದೇ ರೋಗಿಗೆ ಆತನ ಶರೀರದ ಬೇರೆ ಜಾಗೆಯ ಚರ್ಮವನ್ನು ಶಸ್ತ್ರಚಿಕಿತ್ಸೆಯಾದ ಸ್ಥಳಕ್ಕೆ ಸೇರಿಸಲಾಗಿದೆ ಎಂದು ಶಸ್ತ್ರಚಿಕಿತ್ಸಜ್ಞ ಡಾ. ಸುನೀಲ ರೇವಣಕರ ತಿಳಿಸಿದರು.
ಬೆಡಸೋರ (ಒತ್ತಡದ ಹುಣ್ಣು)ನ ಬಗ್ಗೆ ಮಾತನಾಡಿದ ಡಾ. ಸುನೀಲ ರೇವಣಕರ ಬೆಡಸೋರ (ಒತ್ತಡದ ಹುಣ್ಣು) ಇದು ಒಂದೆರಡು ದಿನಗಳಲ್ಲಿ ಬರುವ ಖಾಯಿಲೆಯಲ್ಲ, ವೈದ್ಯಕೀಯ ಕಾರಣಗಳಿಂದ ಹಾಗೂ ಇನ್ನಿತರೆ ಕಾರಣಗಳಿಂದ ತಮ್ಮ ಹೆಚ್ಚಿನ ಸಮಯವನ್ನು ಹಾಸಿಗೆ ಅಥವಾ ಕುರ್ಚಿಯಲ್ಲಿ ಕಳೆಯುವವರಲ್ಲಿ ಕಾಣಸಿಗುತ್ತದೆ. ಚರ್ಮ ಹಾಗೂ ಚರ್ಮದ ಒಳಗಿರುವ ಅಂಗಾಂಶಗಳ ಮೇಲೆ ನಿರಂತರ ಒತ್ತಡ ಹೇರುವದರಿಂದ ಹಾಗೂ ಇತರೆ ಭಾಗಗಳಿಗಿಂತ ಅತೀಯಾದ ಒತ್ತಡ ಬೀಳುವದರಿಂದ ರಕ್ತ ಸಂಚಾರಕ್ಕೆ ತಡೆ ಉಂಟಾಗುತ್ತದೆ. ಇದರಿಂದ ರಕ್ತ ಸಂಚಾರವಾಗದೇ ಇರುವ ಭಾಗದಲ್ಲಿ ಈ ಹುಣ್ಣುಗಳು ಕಾಣಸಿಗುತ್ತವೆ. ಈ ರೋಗದ ಲಕ್ಷಣಗಳಾದ ಚರ್ಮದ ಬಣ್ಣದ ಬದಲಾವಣೆ ಹಾಗೂ ಚರ್ಮದ ರಚನೆಯಲ್ಲಿ ಬದಲಾವಣೆ, ಕೀವು ತುಂಬಿ ಸೋರುವದು, ಊತ, ದೇಹದ ಇತರೆ ಭಾಗಗಳಿಗಿಂತ ಸೋಂಕಿತ ಭಾಗವು ತಂಪಾಗುವದು ಅಥವಾ ಬೆಚ್ಚಗಿರುವುದು ಹೀಗೆ ಅನೇಕ ರೀತಿಯಿಂದ ಇದು ಕಾಣಿಸಿಕೊಳ್ಳಬಹುದಾಗಿದೆ.
ಈ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ರೋಗಿ ಮಲಗುವ ಅಥವಾ ಕುಳಿತುಕೊಳ್ಳುವ ಭಂಗಿಗಳನ್ನು ಸ್ವಲ್ಪ ದಿನಗಳ ಮಟ್ಟಿಗೆ ಬದಲಾಯಿಸಬೇಕು. ಅದಾಗಿಯೂ ನೋವು ಕಂಡು ಬಂದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು. ಇಂತಹ ಸಮಸ್ಯೆಗಳಿಗೆ ನಮ್ಮ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಯು ಲಭ್ಯವಿದ್ದು ಅವಶ್ಯವಿರುವ ರೋಗಿಗಳು ಅಥವಾ ಅವರ ಸಂಭಂಧಿಕರು ಸಂಪರ್ಕಿಸಬಹುದಾಗಿದೆ ಎಂದರು.
ಈ ಶಸ್ತ್ರಚಿಕಿತ್ಸೆಯನ್ನು ಶಸ್ತ್ರಚಿಕಿತ್ಸಕ ಡಾ. ಸುನೀಲ ರೇವಣಕರ, ಅರವಳಿಕೆ ತಜ್ಞ ಡಾ. ಅರುಣ ಮಳಗೇರ ಅವರ ತಂಡಕಾರ್ಯದಲ್ಲಿ ನೆರವೇರಿಸಲಾಯಿತು.
ಇಂತಹ ಸಮಸ್ಯೆಗೆ ಶಸ್ತ್ರಚಿಕಿತ್ಸೆಯ ಮೂಲಕ ರೋಗಿಯ ಹಸನ್ಮುಖ ಜೀವನಕ್ಕೆ ಕಾರಣರಾದ ಡಾ. ಸುನೀಲ ರೇವಣಕರ ಹಾಗೂ ಡಾ. ಅರುಣ ಮಳಗೇರ ಅವರನ್ನು ಆಸ್ಪತ್ರೆಯ ಶಸ್ತ್ರಚಿಕಿತ್ಸೆಯ ವಿಬಾಗದ ಮುಖ್ಯಸ್ಥರಾದ ಡಾ ಎ ಕೆ ರಡ್ಡೇರ ಅವರು, ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಅವರು, ಯು ಎಸ್ ಎಮ ಕೆ ಎಲ್ ಇ ಯ ನಿರ್ದೇಶಕರಾದ ಡಾ. ಹೆಚ್ ಬಿ ರಾಜಶೇಖರ ಅವರು ಹಾಗೂ ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಅಭಿನಂದಿಸಿದ್ದಾರೆ.