ಬಳ್ಳಾರಿಯಲ್ಲಿ ರಾಷ್ಟ್ರೀಯ ಸ್ವಚ್ಛತಾ ಪಾಕ್ಷಿಕ ಅಭಿಯಾನಕ್ಕೆ ಯಶಸ್ವಿ ಸಮಾರೋಪ

ಬಳ್ಳಾರಿಯಲ್ಲಿ ರಾಷ್ಟ್ರೀಯ ಸ್ವಚ್ಛತಾ ಪಾಕ್ಷಿಕ ಅಭಿಯಾನಕ್ಕೆ ಯಶಸ್ವಿ ಸಮಾರೋಪ  Successful conclusion of the National Swachhata Fortnight campaign in Ballari

ಲೋಕದರ್ಶನ ವರದಿ

ಬಳ್ಳಾರಿ 15: ಭಾರತ ಸರ್ಕಾರದ ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ನಿರ್ದೇಶನದಂತೆ, ಬಳ್ಳಾರಿ ಉಪ ವಲಯ ಕಚೇರಿ ವತಿಯಿಂದ ಜುಲೈ 1ರಿಂದ 15ರವರೆಗೆ ನಗರದಲ್ಲಿ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಸ್ವಚ್ಛತಾ ಪಾಕ್ಷಿಕ’ ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯಗೊಂಡಿತು.  ಅಭಿಯಾನದ ಅಂಗವಾಗಿ ನಗರದ ಹೈಸ್ಕೂಲ್ ಮೈದಾನ ಹಾಗೂ ಐತಿಹಾಸಿಕ ಬಳ್ಳಾರಿ ಕೋಟೆ ಆವರಣದಲ್ಲಿ ಸ್ವಚ್ಛತಾ ಶ್ರಮದಾನ ಮತ್ತು ಸಸಿ ನೆಡುವ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಸಾರ್ವಜನಿಕರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವುದು ಹಾಗೂ ಸಚಿವಾಲಯದ ವಿವಿಧ ಅಂಕಿ-ಅಂಶ ಇಲಾಖೆಗಳ ಕಾರ್ಯವೈಖರಿಯನ್ನು ಜನಸಾಮಾನ್ಯರಿಗೆ ಪರಿಚಯಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿತ್ತು.  

ಜಾಗೃತಿ ಜಾಥಾ ಆಯೋಜನೆ  

ರಾಷ್ಟ್ರೀಯ ಅಂಕಿ-ಅಂಶ ಕಚೇರಿ ವತಿಯಿಂದ ಬುಧವಾರ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಗಣ್ಯರು ಚಾಲನೆ ನೀಡಿದರು. ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ವಚ್ಛತಾ ಘೋಷಣೆಗಳಿರುವ ಫಲಕಗಳನ್ನು ಹಿಡಿದು ನಗರದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸಿದರು.  ಜಾಥಾವು ನಗರದ ಪವನ ಹೋಟೆಲ್ ವೃತ್ತ, ಇಂದಿರಾ ವೃತ್ತ, ಗಡಗಿ ಚೆನ್ನಪ್ಪ ವೃತ್ತ, ಎಚ್‌.ಆರ್‌. ಗವಿಯಪ್ಪ ವೃತ್ತ ಹಾಗೂ ಹೊಸ ಬಸ್ ನಿಲ್ದಾಣದ ಮೂಲಕ ಸಾಗಿತು. ಈ ವೇಳೆ ಸಾರ್ವಜನಿಕರಿಗೆ ಕರಪತ್ರಗಳನ್ನು ವಿತರಿಸಿ ಸ್ವಚ್ಛತೆಯ ಮಹತ್ವ ಹಾಗೂ ಅಂಕಿ-ಅಂಶ ಇಲಾಖೆಯ ವಿವಿಧ ಸಮೀಕ್ಷೆಗಳ ಕುರಿತು ಮಾಹಿತಿ ನೀಡಲಾಯಿತು.  

ವೈಯಕ್ತಿಕ ಹಾಗೂ ಪರಿಸರ ಸ್ವಚ್ಛತೆಯಿಂದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು ಮತ್ತು ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂಬ ಕುರಿತು ಸಾರ್ವಜನಿಕರಿಗೆ ತಿಳಿಸಲಾಯಿತು. ವಿಶೇಷವಾಗಿ ಪ್ಲಾಸ್ಟಿಕ್ ಮುಕ್ತ ಪರಿಸರ ಹಾಗೂ ತ್ಯಾಜ್ಯ ವಸ್ತುಗಳ ಸಮರ​‍್ಕ ವಿಲೇವಾರಿಗೆ ಹೆಚ್ಚಿನ ಒತ್ತು ನೀಡಲಾಯಿತು.  ದೇಶದ ಪ್ರಗತಿಯಲ್ಲಿ ಅಂಕಿ-ಅಂಶಗಳ ಮಹತ್ವ, ಸಚಿವಾಲಯದ ವಿವಿಧ ವಿಭಾಗಗಳು ನಡೆಸುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಗಳು ಹಾಗೂ ದೇಶದ ಅಭಿವೃದ್ಧಿಯಲ್ಲಿ ಸಚಿವಾಲಯದ ಪಾತ್ರದ ಕುರಿತು ಸಾರ್ವಜನಿಕರಿಗೆ ವಿವರಿಸಲಾಯಿತು.