ಹಾಜರಾತಿ ನಿಯಮ ಪಾಲಿಸದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ನೀಡಬಾರದು: ಉಮೇಶ್ ಎಸ್‌.

ಹಾಜರಾತಿ ನಿಯಮ ಪಾಲಿಸದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ನೀಡಬಾರದು: ಉಮೇಶ್ ಎಸ್‌. Students who do not follow attendance rules should not be allowed to attend exams: Umesh S.

ವಿಜಯಪುರ  01:  ರಂದು ಶಾಲಾ ಶಿಕ್ಷಣ ಇಲಾಖೆ (ಪ.ಪೂ.) ವಿಜಯಪುರ ಹಾಗೂ ವಿ. ಭ. ದರಬಾರ ಸಂಯುಕ್ತ ಪದವಿ ಪೂರ್ವ ಕಾಲೇಜು, ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ ವಿಷಯಗಳ ಒಂದು ದಿನದ ಕಾರ್ಯಾಗಾರ ನಡೆಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಮೇಶ ಎಸ್‌., ಸಹ ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ಇವರು ಸಮಾರಂಭವನ್ನು ಉದ್ಘಾಟಿಸಿ ಜಿಲ್ಲೆಯ ದ್ವಿತೀಯ ಪಿಯುಸಿ ಫಲಿತಾಂಶವನ್ನು ಹೆಚ್ಚಿಸಲು ಇಲಾಖೆಯ ನಿಯಮದಂತೆ ಹಾಜರಾತಿ ಕೊರತೆಯಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಬಾರದು. ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಎಲ್ಲ ವಿದ್ಯಾರ್ಥಿಗಳು ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಲು ಪಾಸಿಂಗ್ ಪ್ಯಾಕೇಜ್‌ನ ಪ್ರಶ್ನೋತ್ತರ ಕೋಶವನ್ನು ತಯಾರಿಸಿ ಪಾಠ ಮಾಡಬೇಕೆಂದು ಸಲಹೆ ಸೂಚನೆಗಳನ್ನು ನೀಡಿದರು.  

ಜಿಲ್ಲೆಯ ಉಪ ನಿರ್ದೇಶಕರಾದ ಡಾ. ಸಿ. ಕೆ. ಹೊಸಮನಿ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಿ, ಸರಣಿ ಪರೀಕ್ಷೆಗಳನ್ನು ನಡೆಸಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗುವಂತೆ ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಮುತುವರ್ಜಿ ವಹಿಸಬೇಕೆಂದು ಹೇಳಿದರು. ಅರವಿಂದಕುಮಾರ, ಹಿರಿಯ ಲೆಕ್ಕ ಪರಿಶೋಧನಾಧಿಕಾರಿಗಳು, ಬೆಂಗಳೂರು ಇವರು ಸಮಾರಂಭದಲ್ಲಿ ಭಾಗವಹಿಸಿ ತಮ್ಮ ಶೈಕ್ಷಣಿಕ ಅನುಭವವನ್ನು ಹಂಚಿಕೊಂಡರು. ಎಸ್‌. ಎಸ್‌. ಗೌರಿ, ಅಧ್ಯಕ್ಷರು, ರಸಾಯನಶಾಸ್ತ್ರ ಉಪನ್ಯಾಸಕರ ವೇದಿಕೆ, ವಿಜಯಪುರ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಟಿ. ಆರ್‌. ಕುಲಕರ್ಣಿ, ಪ್ರಾಚಾರ್ಯರು ಸಮಾರಂಭದ ಅಧ್ಯಕ್ಷತೆ ವಹಿಸಿ ಶತಮಾನದ ಸಂಭ್ರಮದಲ್ಲಿರುವ ದರಬಾರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯ ಬಗ್ಗೆ ತಿಳಿಸುತ್ತಾ ಇಲಾಖೆಯ ನಿಯಮಗಳನ್ವಯ ಜಿಲ್ಲೆಯ ಎಲ್ಲ ಉಪನ್ಯಾಸಕರು ಪರೀಕ್ಷಾ ಫಲಿತಾಂಶ ಉತ್ತಮ ಪಡಿಸುವ ಕುರಿತು ಸಲಹೆ ನೀಡಿದರು. 

ಇದೇ ಸಂದರ್ಭದಲ್ಲಿ ನಿವೃತ್ತ ಉಪನಿರ್ದೇಶಕರಾದ ಗುರುಸಿದ್ದಯ್ಯ ಹಾಗೂ ಡಾ. ಎಚ್‌. ಎಸ್‌. ಚಬನೂರ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಭೌತಶಾಸ್ತ್ರ ಉಪನ್ಯಾಸಕರ ವೇದಿಕೆಯ ಅಧ್ಯಕ್ಷರಾದ ಪಿ. ಜಿ. ಜೋಷಿ, ಎರಡೂ ವಿಷಯಗಳ ಕಾರ್ಯದರ್ಶಿಗಳಾದ ಸಿ. ಬಿ. ಪಾಟೀಲ ಹಾಗೂ ಎಲ್‌. ಆಯ್‌. ಹುಣಶಿಕಟ್ಟಿ, ಪೂಜಾಕುಮಾರಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ಸಂಜೀವ ಪಿ. ಕುಲಕರ್ಣಿ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕರಾದ ಸಿ. ಎಸ್‌. ಸಜ್ಜನರ, ಎಸ್‌. ಆಯ್‌. ಸುರಪುರ ಹಾಗೂ ವಿಜಯಪುರ ಜಿಲ್ಲೆಯ ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ ವಿಷಯಗಳ ಎರಡು ನೂರಕ್ಕೂ ಹೆಚ್ಚು ಉಪನ್ಯಾಸಕರು ಮತ್ತು ಪ್ರಾಚಾರ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.