ಸಮಾಜ ಕಲ್ಯಾಣ ಇಲಾಖೆಗೆ ಮುತ್ತಿಗೆ ಹಾಕಿದ ವಿದ್ಯಾರ್ಥಿಗಳು

ಧಾರವಾಡ :  ಧಾರವಾಡದ ತಾಲೂಕು ಸಮಾಜ ಕಲ್ಯಾಣ ಇಲಾಖೆಗೆ ನೂರಾರು ವಿದ್ಯಾರ್ಥಿಗಳು ಗುರುವಾರ ಬೆಳ್ಳಂ ಬೆಳಗ್ಗೆ ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 

ಪ್ರಸಕ್ತ ಸಾಲಿನ ಎಲ್ಲ ಅರ್ಹ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮೆರೀಟ್ ಆಧಾರದ ಮೇಲೆ ಪ್ರವೇಶಾತಿ ಪಟ್ಟಿ ಪ್ರಕಟಿಸಬೇಕಿತ್ತು. ಮೊದಲ ಪಟ್ಟಿ ಪ್ರಕಟಗೊಂಡಿದೆ. ಆದರೆ ಎರಡನೇ ಪಟ್ಟಿ ಸೆ. 26ರಂದು ಪ್ರಕಟಿಸಿದ್ದಾರೆ. 

ಇಷ್ಟೊಂದು ದಿನ ವಿಳಂಭ ಮಾಡಿ ಪಟ್ಟಿ ಪ್ರಕಟಿಸಿದಲ್ಲದೆ, ಅದರಲ್ಲಿ ಇಲಾಖೆಯ ಕೆಲ ಅಧಿಕಾರಿಗಳು ದುಡ್ಡು ಕೊಟ್ಟವರಿಗೆ ಮಣೆ ಹಾಕಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.

ಧಾರವಾಡ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಎಂ.ಬಿ. ಸಣ್ಣೇರಿ ವಿರುದ್ದ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳು ಈ ರೀತಿ ಹಣ ಕೊಟ್ಟವರಿಗೆ ಮಣೆ ಹಾಕಿದರೆ ತಾವೆಲ್ಲ ಎಲ್ಲಿ ಹೋಗಬೇಕು ಎಂದು ಪ್ರಶ್ನಿಸಿದರು. ಪ್ರತಿಭಟನಾಕಾರರ ನೇತೃತ್ವ ವಹಿಸಿದ್ದ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಮಾತನಾಡಿ, ರಾಜ್ಯ ಸರಕಾರ ಪ್ರತಿ ವರ್ಷ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಕೋಟ್ಯಾಂತರ ರೂಪಾಯಿ ಮೀಸಲಿಟ್ಟರೂ ವಿದ್ಯಾರ್ಥಿಗಳಿಗೆ ಅದು ಸಮಪರ್ಕವಾಗಿ ತಲುಪುತ್ತಿಲ್ಲ ಎಂದು ದೂರಿದರು.

ರಾಜ್ಯ ಸರಕಾರ 2019 ಜುಲೈ 17ರಂದು ಅರ್ಜಿ ಸಲ್ಲಿಸಿದ್ದ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಎಲ್ಲ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು. ಜೊತೆಗೆ ಅವರಿಗೆ ವಸತಿ ನಿಲಯದಲ್ಲಿ ಅಗತ್ಯ ಮೂಲ ಸೌಕರ್ಯ ಕಲ್ಪಿಸುವಂತೆ ಸೂಚಿಸಿದೆ. ಆದರೆ ಅಧಿಕಾರಿಗಳು ಮೂರು ತಿಂಗಳೂ ಗತಿಸಿದರೂ ಇನ್ನೂ ಇಂದು ಎರಡನೇ ಪಟ್ಟಿ ಪ್ರಕಟಿಸಿರುವುದು ನೋಡಿದರೆ ಅಧಿಕಾರಿಗಳ ಕಾರ್ಯವೈಖರಿಗೆ ಇದು ಕೈಗನ್ನಡಿಯಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕು. ಇನ್ನೂ ಮುಂದೆ ವಿದ್ಯಾರ್ಥಿಗಳ ಜೊತೆಗೆ ಚೆಲ್ಲಾಟವಾಡದಂತೆ ತಾಕೀತು ಮಾಡಬೇಕು ಎಂದು ಆಗ್ರಹಿಸಿದರು. ಇದು ನಮ್ಮ ಜಿಲ್ಲೆಯ ಹಿಂದುಳಿದ, ಅಲ್ಪಸಂಖ್ಯಾತರ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ನೂರಾರು ವಸತಿ ನಿಲಯಗಳ ಅವ್ಯವಸ್ಥೆಗೆ ಸಾಕ್ಷಿಯಾಗಿದೆ.

ಬಿಸಿಎಂ ಇಲಾಖೆ ಕೂಡ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಬೇಕು. ಈ ಬಗ್ಗೆ ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ನಿರ್ಲಕ್ಷ್ಯವಹಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಶೀಘ್ರದಲ್ಲಿಯೇ ಎಲ್ಲ ವಸತಿನಿಲಯಗಳ ಪ್ರವೇಶಾತಿ ಪಟ್ಟಿ ಪ್ರಕಟಿಸದಿದ್ದರೆ ಬರುವದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಮುಖಂಡರಾದ ಎಸ್.ಬಿ. ಪೂಜಾರ, ವಿಜಯಾನಂದ ಲಮಾಣಿ, ಸುರೇಶ ಕೆ., ಶಂಕರಲಿಂಗ, ಗಣೇಶಗೌಡ ನಾಯಕ ಸೇರಿದಂತೆ ನೂರಾರು ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.