ಬೆಳಗಾವಿ 27: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರತಿಷ್ಠಿತ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ನವೆಂಬರ್ 25, 2024ರಂದು ಮಧ್ಯಾಹ್ನ 2.30 ಘಂಟೆಗೆ 2024-25ನೇ ಸಾಲಿನ ಪಠ್ಯ ಮತ್ತು ಮಠ್ಯೇತರ ಚಟುವಟಿಗಳ ಉದ್ಘಾಟನೆ ಹಾಗೂ ವಿದ್ಯಾರ್ಥಿ ಪ್ರತಿಜ್ಞಾವಿಧಿ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಸಚಿವರು ಸಂತೋಷ ಕಾಮಗೌಡ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತುನಾಡುತ್ತಾ ಅಭ್ಯಾಸದ ಮೂಲಕ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು. ಭಾಗಶಃ ವಿದ್ಯಾರ್ಥಿಗಳು ಹಳ್ಳಿಗಳಿಂದ ಬಂದಿರುವುದರಿಂದ ಶ್ರಮಸಂಸ್ಕೃತಿಯ ಬಗ್ಗೆ ಗೊತ್ತಿರುತ್ತದೆ ಎಂದರು. ವಿದ್ಯಾರ್ಥಿಗಳು ಹೆಚ್ಚೆಚ್ಚು ಪುಸ್ತಕಗಳನ್ನು ಓದಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ದೃಷ್ಟಿಯಿಂದ ದಿನಪತ್ರಿಕೆಗಳನ್ನು ಯಾವ್ಯಾವ ಭಾಗಗಳನ್ನು ಓದಬೇಕೆಂದು ಎಳೆಎಳೆಯಾಗಿ ಬಿಚ್ಚಿಟ್ಟರು. ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳಿಗೆ ಒಂದೊಂದಾಗಿ ವಿವರಿಸುತ್ತಾ ಹೋದರು. ಬೆಳಗಿನ ಜಾವ ಎದ್ದು ಅಭ್ಯಾಸ ಮಾಡಿದರೆ ಅದು ಶ್ರೇಯಸ್ಕರ ಎಂದು ನುಡಿದರು. ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಸಂಗೊಳ್ಳಿ ರಾಯಣ್ಣ ಘಟಕ ಮಹಾವಿದ್ಯಾಲಯದಲ್ಲಿ ನೀಡುವ ವ್ಯವಸ್ಥೆ ಮಾಡಲಾಗುವುದೆಂದು ಭರವಸೆ ನೀಡಿದರು. ಎರಡು ಕೈಗಳು ಕಾಲುಗಳಿಲ್ಲದ ನಿಕ್ ಅವರ ಪ್ರೇರಣಾತ್ಮ ಮಾತುಗಳನ್ನು ಈ ಸಂದರ್ಭದಲ್ಲಿ ಮೆಲುಕು ಹಾಕಿದರು. ತಂದೆತಾಯಿಗಳು ಯಾವ ಉದ್ದೇಶದಿಂದ ನಿಮ್ಮನ್ನು ಓದಲು ಕಳಿದ್ದಾರೆ ಆ ಉದ್ದೇಶವನ್ನು ಸಕಾರಗೊಳಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಳಗಾವಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶೃತಿ ಎನ್.ಎಸ್. ಅವರು ವಿದ್ಯಾರ್ಥಿಗಳಲ್ಲಿ ಆತ್ಮವಿಸ್ವಾಸ ತುಂಬಿದರು. ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳಿಗೆ ಹಂಚಿಕೊಳ್ಳುತ್ತಾ ಸತತ ಪರಿಶ್ರಮ, ಆತ್ಮವಿಶ್ವಾಸ ಹಾಗೂ ಸಾಧಿಸುವ ಛಲ ಇವುಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಬಹುದೆಂದರು. ಇದೇ ಸಂದರ್ಭದಲ್ಲಿ ಅವರು ಕಾಲೇಜಿನ ಹೊಸದಾಗಿ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಎಂ.ಜಿ. ಹೆಗಡೆ ಅವರು ವಿದ್ಯಾರ್ಥಿಗಳು ತಮ್ಮ ಮೇಲಿರುವ ಸಾಮಾಜಿಕ ಋಣವನ್ನು ಮರೆಯಬಾರದು ಎಂದು ಎಚ್ಚರಿಸಿದರು. ಶಿವಾನಂದ ಲೋಕರೆ ಸ್ವಾಗತಿಸಿದರು. ಪ್ರಿಯಾಂಕಾ ತಿಲಗರ ಪ್ರಾರ್ಥಿಸಿದರು. ಶಿವಕುಮಾರ ಹಿರೇಮಠ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಮಹೇಕ ಝುಂಜವಾಡ ವಂದಿಸಿದರು. ಲಿಫ್ರೋಜಾ ದೇಸಾಯಿ, ಯೋಗಿತಾ ಪೂಜೇರಿ, ಸ್ವಾತಿ ಕಾನಟ್ಟಿ ಹಾಗೂ ಶಿವಕ್ಕ ಈರಗಾರ ಕಾರ್ಯವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.