ವಿದ್ಯಾರ್ಥಿಗಳು ಭವಿಷ್ಯದ ಆಯ್ಕೆಯಲ್ಲಿ ಜಾಗೃತರಾಗಿರಬೇಕು: ಸ್ನೇಹಲ್. ಆರ್
Students should be conscious in their future choices: Snehal. R
ಲೋಕದರ್ಶನ ವರದಿ
ಧಾರವಾಡ 26: ‘ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಆರಂಭಿಕ ಹಂತದಲ್ಲಿಯೇ ಭವಿಷ್ಯದ ಗುರಿಯನ್ನು ನಿಗದಿಪಡಿಸಿಕೊಂಡು, ಆ ಕ್ಷೇತ್ರದಲ್ಲಿ ವಿಶೇಷ ಪರಿಣಿತಿ ಗಳಿಸುವುದು ಅತ್ಯಂತ ಅಗತ್ಯ,’ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್ ಹೇಳಿದರು.
ನಗರದ ಶಿಕ್ಷಕಿಯರ ಸರ್ಕಾರಿ ತರಬೇತಿ ಸಂಸ್ಥೆಯಲ್ಲಿ ಗುರುವಾರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಆಯೋಜಿಸಿದ್ದ ‘ವೃತ್ತಿ ಶಿಕ್ಷಣ ಪ್ರದರ್ಶನ ಹಾಗೂ ಕೆರಿಯರ್ ಮೇಳ’ವನ್ನು ಮತ್ತು ‘ಜಿಲ್ಲಾ ವೃತ್ತಿಪರ ಮತ್ತು ವೃತ್ತಿ ಮಾರ್ಗದರ್ಶನ ಘಟಕ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಯಾವುದೇ ವೃತ್ತಿ ಆರಿಸಿಕೊಂಡರೂ ಅದರಲ್ಲಿ ನಿಷ್ಠೆ ಹಾಗೂ ಶ್ರೇಷ್ಠತೆಯನ್ನು ಸಾಧಿಸುವ ಸಂಕಲ್ಪ ಇರಬೇಕು. ವಿದ್ಯಾರ್ಥಿಗಳು ಪಡೆಯುವ ಶಿಕ್ಷಣವು ಅವರ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಒಂದು ಕಡೆ ನಿರುದ್ಯೋಗದ ಸಮಸ್ಯೆ ಹೆಚ್ಚುತ್ತಿರುವಾಗ, ಇನ್ನೊಂದು ಕಡೆ ಸಮಾಜ ಹಾಗೂ ಕೈಗಾರಿಕೆಗಳಿಗೆ ಅಗತ್ಯವಿರುವ ಕೌಶಲ್ಯಭರಿತ ಉದ್ಯೋಗಿಗಳ ಕೊರತೆ ಕಂಡು ಬರುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
‘ಜಿಟಿಟಿಸಿ, ಐಟಿಐ ಹಾಗೂ ಡಿಪ್ಲೊಮಾ ಸೇರಿದಂತೆ ವೃತ್ತಿ ಆಧಾರಿತ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡರೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮೇಳವನ್ನು ಸದುಪಯೋಗಪಡಿಸಿಕೊಳ್ಳಬೇಕು.’ ಎಂದರು.
‘ಪಾಲಕರ ಮತ್ತು ಪೋಷಕರ ಶ್ರಮವನ್ನು ಮನದಲ್ಲಿ ಇಟ್ಟುಕೊಂಡು ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಭ್ಯಾಸ ಮಾಡಬೇಕು. ಭವಿಷ್ಯವನ್ನು ಉತ್ತಮಪಡಿಸಿಕೊಳ್ಳಲು, ಉತ್ತಮ ಅವಕಾಶಗಳಿರುವ ಹಾದಿಯನ್ನು ಆಯ್ಕೆಮಾಡಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಜಾಗೃತಿಯಿಂದ ನಡೆದುಕೊಳ್ಳಬೇಕು,’ ಎಂದು ಉಪನಿರ್ದೇಶಕರಾದ ಎಸ್.ಎಸ್. ಕೆಳದಿಮಠ ಅವರು ಸಲಹೆ ನೀಡಿದರು.
ಜಿಟಿಟಿಸಿ ಸಂಸ್ಥೆಯಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉತ್ತಮ ಉದ್ಯೋಗ ಪಡೆಯುವ ಮೂಲಕ ಉತ್ತಮ ಸ್ಥಾನ ಮಾನ ಹೊಂದಿದ್ದಾರೆ. ಕೆಲವರು ಸ್ವಂತ ಉದ್ಯಮ ಆರಂಭಿಸಿ, ಇತರರಿಗೆ ಉದ್ಯೋಗ ನೀಡಿದ್ದಾರೆ. ಚೀನಾದಲ್ಲಿ ನಡೆಯುವ ‘ಸ್ಕಿಲ್ ಓಲಂಪಿಕ್ಸ್’ ಸ್ಪರ್ಧೆಯಲ್ಲಿ ಹುಬ್ಬಳ್ಳಿ ಜಿಟಿಟಿಸಿಯ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಿರುವವುದು ಹೆಮ್ಮೆಯ ವಿಷಯವಾಗಿದೆ, ಎಂದು ಜಿಟಿಟಿಸಿಯ ಬಸವರಾಜ ಹೂಗಾರ ಅವರು ವಿವರಿಸಿದರು.
ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ನಂತರ ಲಭ್ಯವಿರುವ ಕೋರ್ಸ್‌ಗಳು, ಅವುಗಳಿಗೆ ಅಗತ್ಯ ಅರ್ಹತೆ ಹಾಗೂ ಪೂರ್ಣಗೊಂಡ ಬಳಿಕ ಸಿಗುವ ಉದ್ಯೋಗಾವಕಾಶಗಳ ಕುರಿತು ವಿವಿಧ ಕಾಲೇಜುಗಳ ಪ್ರತಿನಿಧಿಗಳು ಮಾಹಿತಿ ನೀಡಿದರು. ಎಂ.ಬಿ.ಬಿ.ಎಸ್, ಪಶುವೈದ್ಯಕೀಯ, ಕೃಷಿ, ರೇಷ್ಮೆ, ತೋಟಗಾರಿಕೆ, ಮೀನುಗಾರಿಕೆ ವಿಜ್ಞಾನ, ಎಂಜಿನಿಯರಿಂಗ್, ಪಾಲಿಟೆಕ್ನಿಕ್, ಐಟಿಐ, ಪ್ಯಾರಾ ಮೆಡಿಕಲ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮುಂದುವರಿಯಬಹುದೆಂದು ವಿವರಿಸಿದರು.
ಉಪನಿರ್ದೇಶಕರಾದ (ಅಭಿವೃದ್ಧಿ) ಬಸವರಾಜ ನಾಲತವಾಡ ಅವರು ಸ್ವಾಗತಿಸಿ ನಂತರ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ‘ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ‘ಜಿಲ್ಲಾ ವೃತ್ತಿಪರ ಮತ್ತು ವೃತ್ತಿ ಮಾರ್ಗದರ್ಶನ ಘಟಕ’ ತೆರೆಯಲಾಗಿದ್ದು, ವಿದ್ಯಾರ್ಥಿಗಳು ಮತ್ತು ಯುವಕರು ಈ ಘಟಕಕ್ಕೆ ಭೇಟಿ ನೀಡುವ ಮೂಲಕ ಸದುಪಯೋಗಪಡಿಸಿಕೊಳ್ಳಬಹುದು. ಇದು ವಿದ್ಯಾರ್ಥಿಗಳು ತಮ್ಮ ವೃತ್ತಿ ಮತ್ತು ಉನ್ನತ ವ್ಯಾಸಂಗವನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಮಾರ್ಗದರ್ಶನ ಮಾಡಲಿದೆ,’ ಎಂದರು.
ಪ್ರಾಂಶುಪಾಲರಾದ ಡಾ. ರವಿಕುಮಾರ ಬಾರಾಟಕ್ಕೆ, ಡಿವೈಪಿಸಿ ಎಸ್.ಎಂ. ಹುಡೇದಮನಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಮಕೃಷ್ಣ ಸದಲಗಿ ಹಾಗೂ ದೀಪಕ್ ಕುಲಕರ್ಣಿ, ಸ್ಕೌಟ್ಸ್ ಮತ್ತು ಗೈಡ್ಸ್‌ನ ಶ್ರೀಶೈಲ ಕರಿಕಟ್ಟಿ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾರಾಯಣ ಭಜಂತ್ರಿ, ಪ್ರಧಾನ ಕಾರ್ಯದರ್ಶಿ ಬಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
25ಕ್ಕೂ ಹೆಚ್ಚು ಇಲಾಖೆಗಳ ಅಧಿಕಾರಿಗಳು ಹಾಗೂ ಕೋಚಿಂಗ್ ಕೇಂದ್ರಗಳ ಮುಖ್ಯಸ್ಥರು ಮೇಳದಲ್ಲಿ ಭಾಗವಹಿಸಿದ್ದರು. ಡಾ. ಗಾಯತ್ರಿ ದೇಶಪಾಂಡೆ ಪ್ರಾರ್ಥಿಸಿದರು. ಐ.ಜಿ. ವೆಂಕಟಾಪೂರಮಠ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕರಾದ ಕುಮಾರ ಹುಲಗೂರ ವಂದಿಸಿದರು.
ಇದೇ ಸಂದರ್ಭದಲ್ಲಿ ಇನ್ಸ್ಪೈಯರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಅಂತರರಾಷ್ಟ್ರಿಯ ಮಟ್ಟಕ್ಕೆ ಆಯ್ಕೆಯಾದ ಕುಮಾರ ಗಣೇಶ ಢವಳೇಶ್ವರ ಹಾಗೂ ಮಾರ್ಗದರ್ಶಿ ಶಿಕ್ಷಕ ಸಂತೋಷ ಸುತಾರ ಅವರನ್ನು ಸನ್ಮಾನಿಸಲಾಯಿತು.
ಪೋಟೋ ಕ್ಯಾಫ್ಶೆನ್: ನಗರದ ಶಿಕ್ಷಕಿಯರ ಸರ್ಕಾರಿ ತರಬೇತಿ ಸಂಸ್ಥೆಯಲ್ಲಿ ಗುರುವಾರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಆಯೋಜಿಸಿದ್ದ ‘ವೃತ್ತಿ ಶಿಕ್ಷಣ ಪ್ರದರ್ಶನ ಹಾಗೂ ಕೆರಿಯರ್ ಮೇಳ’ವನ್ನು ಜಿಲ್ಲಾಧಿಕಾರಿ ಸ್ನೇಹಲ್ ಆರ್ ಉದ್ಘಾಟಿಸಿದರು. ಉಪನಿರ್ದೇಶಕರಾದ (ಅಭಿವೃದ್ಧಿ) ಬಸವರಾಜ ನಾಲತವಾಡ, ಉಪನಿರ್ದೇಶಕರಾದ ಎಸ್.ಎಸ್. ಕೆಳದಿಮಠ, ಪ್ರಾಂಶುಪಾಲರಾದ ಡಾ. ರವಿಕುಮಾರ ಬಾರಾಟಕ್ಕೆ, ಡಿವೈಪಿಸಿ ಎಸ್.ಎಂ. ಹುಡೇದಮನಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಮಕೃಷ್ಣ ಸದಲಗಿ ಹಾಗೂ ದೀಪಕ್ ಕುಲಕರ್ಣಿ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾರಾಯಣ ಭಜಂತ್ರಿ ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 