ಲೈಂಗಿಕ ದೌರ್ಜನ್ಯ ತಡೆಗೆ ವಿದ್ಯಾರ್ಥಿಗಳು ಕಾನೂನು ಅರಿವು ಹೊಂದಬೇಕು

ಲೈಂಗಿಕ ದೌರ್ಜನ್ಯ ತಡೆಗೆ ವಿದ್ಯಾರ್ಥಿಗಳು ಕಾನೂನು ಅರಿವು ಹೊಂದಬೇಕು Students need to have legal awareness to prevent sexual harassment.

ಲೋಕದರ್ಶನ ವರದಿ 

ಮೂಡಲಗಿ, ಆ.೨೪: ವಿದ್ಯಾರ್ಥಿ ಜೀವನ ಅಧ್ಯಯನಶೀಲವಾಗಿರಬೇಕು. ಆದರೆ ಇಂದಿನ ದಿನಗಳಲ್ಲಿ ಅನೇಕ ಯುವಕರು ಲೈಂಗಿಕ ದೌರ್ಜನ್ಯ ಚಟುವಟಿಕೆಗಳಲ್ಲಿ ತೊಡಗುತ್ತಿರುವುದು ಕಳವಳಕಾರಿ. ಇಂತಹ ಕೃತ್ಯಗಳು ಕಾನೂನುಬಾಹಿರವಾಗಿದ್ದು, ಲೈಂಗಿಕ ದೌರ್ಜನ್ಯ ಕಾಯ್ದೆಯಡಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶವಿದೆ. ಆದ್ದರಿಂದ ವಿದ್ಯಾರ್ಥಿಗಳು ಲೈಂಗಿಕ ದೌರ್ಜನ್ಯದಿಂದ ದೂರವಿದ್ದು, ಕಾನೂನನ್ನು ಪಾಲಿಸಿ ಗೌರವಿಸಬೇಕು ಎಂದು ಮೂಡಲಗಿ ಪೊಲೀಸ್ ಠಾಣೆಯ ಮುಖ್ಯ ಪೊಲೀಸ್ ಪೇದೆ ಈರಣ್ಣ ರಣದೇವ ಹೇಳಿದರು. 

ಪಟ್ಟಣದ ರ‍್ಡಿ.ಎಸ್. ಕಲಾ, ವಾಣಿಜ್ಯ ವಿಜ್ಞಾನ ಹಾಗೂ ಸಮಾಜಕಾರ್ಯ ಪದವಿ ಮಹಾವಿದ್ಯಾಲಯ ಮತ್ತು ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಹಯೋಗದಲ್ಲಿ, ಎನ್‌ಎಸ್‌ಎಸ್ ಹಾಗೂ ಐಕ್ಯೂಎಸಿ ಘಟಕಗಳ ಆಶ್ರಯದಲ್ಲಿ ಆಯೋಜಿಸಿದ್ದ ಲೈಂಗಿಕ ದೌರ್ಜನ್ಯ ತಡೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಲೈಂಗಿಕ ಕಿರುಕುಳದ ವಿವಿಧ ರೂಪಗಳು, ಮಹಿಳೆಯರಿಗೆ ಕಾನೂನುಬದ್ಧ ರಕ್ಷಣೆ, ಮಹಿಳೆಯರ ಸುರಕ್ಷತೆ ಹಾಗೂ ವಿದ್ಯಾರ್ಥಿಗಳ ಹಕ್ಕುಗಳ ಕುರಿತು ಅರಿವು ಮೂಡಿಸುವ ಅಗತ್ಯವಿದೆ. ವಿದ್ಯಾರ್ಥಿಗಳು ತಮ್ಮ ನಡೆ-ನುಡಿಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು. ಮಹಿಳಾ ಸಿಬ್ಬಂದಿ ಹಾಗೂ ಮಹಿಳೆಯರನ್ನು ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು. 

ಉಪನ್ಯಾಸಕ ಹಾಗೂ ಘಟಕಾಧಿಕಾರಿ ಸಂಜೀವ ಮಂಟೂರ ಮಾತನಾಡಿ, ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳು ಸಮಾಜದ ಸ್ವಾಸ್ಥö್ಯವನ್ನು ಹಾಳುಮಾಡುತ್ತವೆ. ಮಹಿಳೆಯರ ಸಾಮಾಜಿಕ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು. 

ಉಪನ್ಯಾಸಕ ಪ್ರಕಾಶ ಮರೇನವರ ಮಾತನಾಡಿ, ಲೈಂಗಿಕ ದೌರ್ಜನ್ಯದಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಅದರಿಂದ ಮಹಿಳೆಯರು ಮತ್ತು ಅವರ ಕುಟುಂಬಗಳು ಸಾಮಾಜಿಕವಾಗಿ ಅನುಭವಿಸುವ ನೋವು-ಸಂಕಷ್ಟಗಳನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು. 

ಕಾಲೇಜು ಪ್ರಾಚಾರ್ಯ ಸತೀಶ ಗೊಟೂರೆ ಮಾತನಾಡಿ, ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯದಿಂದ ಮಹಿಳೆಯರಿಗೆ ಕಾನೂನು ಹೇಗೆ ರಕ್ಷಣೆ ನೀಡುತ್ತದೆ ಎಂಬುದರ ಕುರಿತು ಅರಿವು ಇರಬೇಕು. ಲೈಂಗಿಕ ದೌರ್ಜನ್ಯದಿಂದ ದೂರವಿರುವುದರ ಜೊತೆಗೆ ತಂದೆ-ತಾಯಿಯರ ಮಾತಿನಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದರು. 

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸಿದ್ಧಪ್ಪ ಪೂಜೇರಿ, ಗೀತಾ ಬೊಮ್ಮನ್ನವರ, ನಂದಾ ತಳವಾರ, ವಿದ್ಯಾರ್ಥಿನಿ ಸೌಭಾಗ್ಯ ಸಾಯನ್ನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಲಕ್ಷಿö್ಮÃ ಗೋರಗುದ್ದಿ ಸ್ವಾಗತಿಸಿದರು. ಪೂರ್ಣಿಮಾ ಮೈತ್ರಿ ವಂದಿಸಿದರು.