ನವೋದಯ ವಿದ್ಯಾಲಯದಲ್ಲಿ ಆಹಾರ ಸೇವನೆಯ ಬಳಿಕ ವಿದ್ಯಾರ್ಥಿಗಳ ಅಸ್ವಸ್ಥತೆ: ಆರೋಗ್ಯ ಇಲಾಖೆ ಪರೀಶೀಲನೆ!

ನವೋದಯ ವಿದ್ಯಾಲಯದಲ್ಲಿ ಆಹಾರ ಸೇವನೆಯ ಬಳಿಕ ವಿದ್ಯಾರ್ಥಿಗಳ ಅಸ್ವಸ್ಥತೆ: ಆರೋಗ್ಯ ಇಲಾಖೆ ಪರೀಶೀಲನೆ! Students feel unwell after consuming food at Navodaya Vidyalaya: Health Department investigating!

         ಮುಂಡಗೋಡ 07:  ತಾಲೂಕಿನ ಮಳಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನಗೇರಿ (ಪಂಚವಟಿ) ಗ್ರಾಮದಲ್ಲಿರುವ ಪಿಎಂ ಜವಾಹರ್ ನವೋದಯ ವಿದ್ಯಾಲಯದಲ್ಲಿ ದಿನಾಂಕ 04 ಫೆಬ್ರವರಿ 2026 ರಂದು ಮಧ್ಯಾಹ್ನದ ಊಟ ಸೇವಿಸಿದ ಬಳಿಕ ಕೆಲ ವಿದ್ಯಾರ್ಥಿಗಳಿಗೆ ಜ್ವರ, ವಾಂತಿ, ಭೇದಿ ಹಾಗೂ ಹೊಟ್ಟೆನೋವು ಕಾಣಿಸಿಕೊಂಡ ಘಟನೆ ವರದಿಯಾಗಿದೆ. ವಿದ್ಯಾಲಯದಲ್ಲಿ ಒಟ್ಟು 518 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಪ್ರಾಥಮಿಕವಾಗಿ 60 ವಿದ್ಯಾರ್ಥಿಗಳಿಗೆ ಜ್ವರ ಹಾಗೂ 2 ವಿದ್ಯಾರ್ಥಿಗಳಿಗೆ ಭೇದಿ ಲಕ್ಷಣಗಳು ಕಂಡುಬಂದಿದ್ದವು. ತಕ್ಷಣವೇ ಅಸ್ವಸ್ಥ ವಿದ್ಯಾರ್ಥಿಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದ್ದು, ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ.

        ಘಟನೆಯ ಮಾಹಿತಿ ದೊರಕಿದ ತಕ್ಷಣ ತಾಲೂಕು ಆರೋಗ್ಯಾಧಿಕಾರಿಗಳ ತಂಡ, ವೈದ್ಯಾಧಿಕಾರಿಗಳ ತಂಡ, ಪ್ರಾಥಮಿಕ ಆರೋಗ್ಯ ಕೇಂದ್ರ (ಮಳಗಿ) ಹಾಗೂ ಆರ್ಬಿಎಸ್ಕೆ ತಂಡ ದಿನಾಂಕ 05 ಫೆಬ್ರವರಿ 2026 ರಂದು ವಿದ್ಯಾಲಯಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿತು. ಈ ವೇಳೆ 70 ವಿದ್ಯಾರ್ಥಿಗಳಲ್ಲಿ ಜ್ವರ, ವಾಂತಿ, ಭೇದಿ ಹಾಗೂ ಹೊಟ್ಟೆನೋವು ಸಂಬಂಧಿತ ಲಕ್ಷಣಗಳು ಕಂಡುಬಂದಿದ್ದು, ಎಲ್ಲರಿಗೂ ಅಗತ್ಯ ಚಿಕಿತ್ಸೆ ಒದಗಿಸಲಾಗಿದೆ. ಮುಂದುವರಿದ ಪರೀಶೀಲನೆಯ ಸಂದರ್ಭದಲ್ಲಿ ದಿನಾಂಕ 06 ಫೆಬ್ರವರಿ 2026 ರಂದು ಇನ್ನೂ 8 ವಿದ್ಯಾರ್ಥಿಗಳಲ್ಲಿ ರೋಗ ಲಕ್ಷಣಗಳು ಕಂಡುಬಂದಿವೆ. ಈ ಮೂಲಕ ಒಟ್ಟಾರೆ 78 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಪ್ರಸ್ತುತ ಎಲ್ಲ ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿದ್ದು, ಯಾವುದೇ ವಿದ್ಯಾರ್ಥಿಗೂ ಪ್ರಾಣಾಪಾಯ ಇಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ನರೇಂದ್ರ ಪವಾರ ಅವರು ತಿಳಿಸಿದ್ದಾರೆ.