ರೂ187 ಕೋಟಿ ವಾಪಸ್ ಜಮೆಯಾಗುವವರೆಗೆ ಹೋರಾಟ: ನವೀನ್ ಗುಳಗಣ್ಣವರ್

ರೂ187 ಕೋಟಿ ವಾಪಸ್ ಜಮೆಯಾಗುವವರೆಗೆ ಹೋರಾಟ: ನವೀನ್ ಗುಳಗಣ್ಣವರ್  Struggle to continue until Rs 187 crore is credited back: Naveen Gulagannavar

ಕೊಪ್ಪಳ  02: ವಾಲ್ಮೀಕಿ ನಿಗಮದ ಖಾತೆಗೆ ಸಂಬಂಧಿಸಿದಂತೆ ದುರ್ಬಳಕೆಯಾಗಿರುವ ?187 ಕೋಟಿ ಹಣವನ್ನು ವಾಪಸ್ ನಿಗಮದ ಖಾತೆಗೆ ಜಮಾ ಮಾಡುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಬಿಜೆಪಿ ಕೊಪ್ಪಳ ಜಿಲ್ಲಾ ಅಧ್ಯಕ್ಷ ನವೀನ್ ಕುಮಾರ್ ಗುಳಗಣ್ಣವರ್ ಹೇಳಿದರು.  

ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ನೀಡಿದ್ದರೂ, ದುರ್ಬಳಕೆಯಾಗಿರುವ ?187 ಕೋಟಿ ಹಣ ನಿಗಮದ ಖಾತೆಗೆ ಮರಳುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದರು.  

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಬೃಹತ್ ಪಾದಯಾತ್ರೆಯ ಭಾಗವಾಗಿ ಸೆಪ್ಟೆಂಬರ್ 4ರಿಂದ 6ರವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಪ್ರತಿಭಟನಾ ಪಾದಯಾತ್ರೆ ನಡೆಯಲಿದೆ.

ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾರಟಗಿಯಿಂದ ಆರಂಭವಾಗುವ ಪಾದಯಾತ್ರೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಗಂಗಾವತಿ ನಗರ ಸೇರಿದಂತೆ ವಿವಿಧ ಭಾಗಗಳಲ್ಲಿ ಸಂಚರಿಸಿ ಕಂಪ್ಲಿ ಮಾರ್ಗವಾಗಿ ಬಳ್ಳಾರಿಗೆ ತೆರಳಲಿದೆ.  

ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ಜನರಿಗೆ ಮನವರಿಕೆ ಮಾಡುವುದು, ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಜನರ ಮುಂದಿಡುವುದು ಹಾಗೂ ದುರ್ಬಳಕೆಯಾದ ಹಣವನ್ನು ನಿಗಮದ ಖಾತೆಗೆ ಮರಳಿ ಜಮಾ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುವುದು ಪಾದಯಾತ್ರೆಯ ಉದ್ದೇಶವಾಗಿದೆ ಎಂದು ನವೀನ್ ಗುಳಗಣ್ಣವರ್ ತಿಳಿಸಿದರು.  

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬಸವನಗೌಡ ಪಾಟೀಲ್, ವಿಜಯ ತಾಳಕೇರಿ, ಸುನಿಲ್ ಹೆಸರೂರು, ಸೋಮಶೇಖರಗೌಡ ಪಾಟೀಲ್, ಶಿವಪ್ಪ ವಾದಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.