ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಮಧ್ಯಪ್ರವೇಶಿಸದಿದ್ದಲ್ಲಿ ಕಠಿಣ ಕ್ರಮ; ಹೈಕೋರ್ಟ್

ಬೆಂಗಳೂರು, ಜ 31, ನಗರದ ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಮಧ್ಯಪ್ರವೇಶಿಸದಿದ್ದಲ್ಲಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ನಿರ್ಬಂಧ  ವಿಧಿಸುವುದಾಗಿ ಹೈಕೋರ್ಟ್ ಎಚ್ಚರಿಕೆ ನೀಡಿದೆ. ನಗರದಲ್ಲಿ ಘನತ್ಯಾಜ್ಯ ನಿರ್ವಹಣೆ ಕುರಿತ ಸಾರ್ವಜನಿಕ ಹಿತಾಸಕ್ತಿ  ಅರ್ಜಿಗಳ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ  ಪೀಠ, ನಗರದಲ್ಲಿ ಪ್ರತಿದಿನ ಸಂಗ್ರಹವಾಗುವ ಸುಮಾರು ನಾಲ್ಕು ಸಾವಿರ ಟನ್  ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಲ್ಲಿ ವಿಫಲವಾಗಿರುವ ಬಿಬಿಎಂಪಿಯನ್ನು ಮತ್ತೆ ತರಾಟೆಗೆ ತೆಗೆದುಕೊಂಡಿತು. ಈ ಹಿಂದೆಯೇ ಎಚ್ಚರಿಕೆ ನೀಡಿದ್ದರೂ ಬಿಬಿಎಂಪಿ ಯಾವುದೇ ಕ್ರಮ ಕೈಗೊಂಡಿಲ್ಲ. ಘನ  ತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಜಾರಿಗೊಳಿಸುವಲ್ಲಿ ವಿಫಲವಾಗಿದೆ. ಪ್ರತಿದಿನ 4200 ಮೆಟ್ರಿಕ್ ಟನ್ ಕಸ ಸಂಗ್ರಹವಾಗುತ್ತಿದೆ. ಅದರಲ್ಲಿ ಕೇವಲ 1500 ಮೆಟ್ರಿಕ್ ಟನ್ ಮಾತ್ರ  ಸಂಸ್ಕರಣಾ ಕೇಂದ್ರ ತಲುಪುತ್ತಿದೆ. ಉಳಿದ ತ್ಯಾಜ್ಯವನ್ನು ಅಕ್ರಮ ಜಾಗಗಳಲ್ಲಿ ಸುರಿಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿತು.  ಆಗ, ಅಡ್ವೊಕೇಟ್ ಜನರಲ್  ಪ್ರಭುಲಿಂಗ ನಾವದಗಿ, ಈ ವಿಚಾರದಲ್ಲಿ ಸರ್ಕಾರ ಮಧ್ಯೆಪ್ರವೇಶ ಮಾಡಿ ಸಮಸ್ಯೆ ಪರಿಹರಿಸಲು  ಪ್ರಾಮಾಣಿಕ ಪ್ರಯತ್ನ ನಡೆಸಲಿದೆ. ಅದಕ್ಕಾಗಿ ಎರಡು ವಾರ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.  ಅದನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.