ಲೋಕದರ್ಶನವರದಿ
ಬಳ್ಳಾರಿ/ಹೊಸಪೇಟೆ,ಜು.01: ಅಸ್ಪೃಶ್ಯ ವರ್ಗದವರಿಗೆ ಶೇ.90 ರಷ್ಟು ಯಾವುದೇ ರೀತಿಯಾಗಿ ಕ್ಷೌರಕ್ಕೆ ನಿರ್ಬಂಧವನ್ನು ಕ್ಷೌರ ಸಮುದಾಯದವರು ನೀಡುವುದಿಲ್ಲವಾದರೂ ಒಂದು ವೇಳೆ ಅಂತಹ ಪ್ರಕರಣಗಳೇನಾದರೂ ತಾಲೂಕು ಆಡಳಿತದ ಗಮನಕ್ಕೆ ಬಂದರೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಸಹಾಯಕ ಆಯುಕ್ತರಾದ ಶೇಖ್ ತನ್ವೀರ್ ಆಸೀಫ್ ಅವರು ಎಚ್ಚರಿಕೆ ನೀಡಿದ್ದಾರೆ.
ಹೊಸಪೇಟೆ ನಗರದ ಸಹಾಯಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಉಪವಿಭಾಗ ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರದ ವಿವಿಧ ಭಾಗಗಳಲ್ಲಿನ ಕ್ಷೌರ ಕೇಂದ್ರಗಳಲ್ಲಿ ಅಸ್ಪೃಶ್ಯರೆಂದು ಕ್ಷೌರ ನಿರಾಕರಿಸಿದ ಕುರಿತು ಸಹಾಯಕ ಆಯುಕ್ತರ ಗಮನಕ್ಕೆ ತಂದ ಸದಸ್ಯರಿಗೆ ಉತ್ತರಿಸಿದ ಸಮಿತಿ ಸಭೆಯ ಅಧ್ಯಕ್ಷರು ಹಾಗೂ ಉಪವಿಭಾಗ ದಂಡಾಧಿಕಾರಿಗಳಾದ ಶೇಖ್ ತನ್ವೀರ್ ಆಸೀಫ್ ಅವರು ಕ್ಷೌರ ಸಮುದಾಯದ ಸಂಘಕ್ಕೆ ಕ್ಷೌರ ನಿರಾಕರಣೆಗೆ ಕಾನೂನು ಕ್ರಮದ ಕುರಿತು ಜಾಗೃತಿ ಮೂಡಿಸುವ ಪ್ರಕಟಣೆಗಳನ್ನು ಹೊರಡಿಸಲಾಗುತ್ತದೆ. ನಿರಾಕರಣೆಯ ವಿಷಯ ಗಮನಕ್ಕೆ ಬಂದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದೆಂದು ತಿಳಿಸಿದರು.
ಜಾಗೃತಿ ಸಭೆಯ ಸದಸ್ಯರಾದ ವೈ.ಯಮುನೇಶ್ ಅವರು ಮಾತನಾಡಿ ತಾಲೂಕು ಸೇರಿದಂತೆ ಸುತ್ತಮುತ್ತದ ಪ್ರದೇಶಗಳಲ್ಲಿ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ, ಅತಿ ಸೂಕ್ಷ್ಮ, ಹಂಡಿಜೋಗಿ ಸಮುದಾಯದ ಜನರು ಬಹಳಷ್ಟಿದ್ದು ಭೂಮಿ ನೀಡಿ ಅವರ ಮಕ್ಕಳಿಗೆ ಶಿಕ್ಷಣ ಸೌಲಭ್ಯ ಒದಗಿಸಬೇಕು ಎಂದು ಮನವಿ ಮಾಡಿದರು.
*ನಿವೇಶನ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ: ಈಗಾಗಲೇ ಅಲೆಮಾರಿ ಜನಾಂಗಗಳಿಗೆ ನಿವೇಶನ ನೀಡುವ ಕುರಿತಾಗಿ ಹೊಸಪೇಟೆ ಹಾಗೂ ಕಂಪ್ಲಿ ಭಾಗದಲ್ಲಿ ನೆಲೆಸಿರುವ ಸಮುದಾಯಗಳ ಕುರಿತಂತೆ ಮಾಹಿತಿ ಕಲೆಹಾಕಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುವ ನಿವೇಶನ ಹಂಚಿಕೆ ಸಮಯದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಬಸ್ ಡಿಪೋ ಹಿಂಭಾಗ ಪ್ರದೇಶದಲ್ಲಿರುವ ಬುಡ್ಗ ಜಂಗಮ ಕಾಲೋನಿಯ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲು ನಗರಸಭೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಸತಿ ನಿಲಯ ವಿದ್ಯಾಥರ್ಿಗಳ ಶೈಕ್ಷಣಿಕ ಗುಣಮಟ್ಟದ ಕುರಿತು ವರದಿ ಸಿದ್ಧಪಡಿಸಿ ವಿದ್ಯಾಥರ್ಿಗಳ ಶೈಕ್ಷಣಿಕ ಏಳಿಗೆಗೆ ಗಮನಹರಿಸಬೇಕೆಂದರು.