ಭ್ರೂಣ ಹತ್ಯೆ ತಡೆಯಿರಿ.. ಮದ್ಯ ಮಾದಕ ವಸ್ತು ನಿಷೇಧಿಸಿ

ಭ್ರೂಣ ಹತ್ಯೆ ತಡೆಯಿರಿ.. ಮದ್ಯ ಮಾದಕ ವಸ್ತು ನಿಷೇಧಿಸಿ Stop feticide.. Ban alcohol and drugs

              ಕಾರವಾರ 29: ರಾಜ್ಯದಲ್ಲಿ ಭ್ರೂಣ ಹತ್ಯೆ ತಡೆಗೆ ಏನು ಮಾಡಿದ್ದೀರಿ, ಶಾಲಾ ಕಾಲೇಜು ಆವರಣದಲ್ಲಿ ಮಾದಕ ವಸ್ತುಗಳ ಬಳಕೆ ನಿಷೇಧನೆ ಕಡ್ಡಾಯವಾಗಿ ಜಾರಿಗೊಳಿಸಿ, ದೌರ್ಜನ್ಯ ಸಂದರ್ಭದಲ್ಲಿ ಪೊಲೀಸ್ ಸಹಾಯವಾಣಿ 112, ಮಕ್ಕಳ ಸಹಾಯವಾಣಿ 1098, ಅಕ್ಕಪಡೆ ಇವುಗಳಲ್ಲಿ ಯಾವುದು ತುರ್ತಾಗಿ ಸ್ಪಂದಿಸಲಿದೆ.. ಬಾಲ ಕಾರ್ಮಿಕ ನಿಷೇಧ ಪದ್ದತಿ ಪರಿಣಾಮಕಾರಿಯಾಗಿ ಜಾರಿಗೊಳಿಸಿ. ಮುಂತಾದ ಹಲವು ಪ್ರಶ್ನೆ, ಸಲಹೆಗಳನ್ನು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಎದುರಿಸಿದರು.  

                   ಶನಿವಾರ ಅಂಕೋಲಾದ ಪಿ.ಎಂ. ಹೈಸ್ಕೂಲ್ನಲ್ಲಿ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಬೆಂಗಳೂರು, ಜಿಲ್ಲಾಡಳಿತ , ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉತ್ತರ ಕನ್ನಡ ಜಿಲ್ಲೆ ಅವರ ಸಂಯುಕ್ತಾಶ್ರಯದಲ್ಲಿ ನಡೆದ, ಆರಿ​‍್ಟ.ಇ ಕುರಿತು ಅಹವಾಲು ಸ್ವೀಕಾರ ಹಾಗೂ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅಂಕೋಲಾದ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ, ಹಲವು ಪ್ರಶ್ನೆ, ಸಲಹೆಗಳನ್ನು ನೀಡಿದರು.  

                         ವಿದ್ಯಾರ್ಥಿನಿ ಸುಶ್ಮಿತಾ ನಾಯಕ್ ಮಾತನಾಡಿ, ವಿದ್ಯಾರ್ಥಿನಿಯರ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಏನೇನು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು. ಪೊಲೀಸ್ ಇಲಾಖೆ ವತಿಯಿಂದ ತೆರೆದ ಮನೆ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದೆ ಹಾಗೂ ಶಾಲೆಗಳಲ್ಲಿ ಕೂಡಾ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಅಂಕೋಲಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ತಿಳಿಸಿದರು, ರಾಜ್ಯದಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿಗಳ ಮೇಲೆ ನಡೆಯುವ ದೌರ್ಜನ್ಯ ನಿಯಂತ್ರಿಸಲು ಅಕ್ಕ ಪಡೆಯನ್ನು ರಚಿಸಲಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ ತಿಳಿಸಿದರು.  

                    ಭ್ರೂಣ ಹತ್ಯೆ ತಡೆಯಲು ಕ್ರಮಗಳೇನು ಎಂದು ವಿದ್ಯಾರ್ಥಿನಿ ನಾಗೇಶ್ವರಿ ಪ್ರಶ್ನೆಗೆ ಉತ್ತರಿಸಿದ ತಾಲೂಕು ಆರೋಗ್ಯಾಧಿಕಾರಿ ಭ್ರೂಣ ಹತ್ಯೆಯ ಕುರಿತು ವಿಧಿಸಲಾಗುವ ಶಿಕ್ಷೆ ಮತ್ತು ದಂಡದ ಕುರಿತಂತೆ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದ್ದು, ಆಸ್ಪತ್ರೆ ಮುಂಭಾಗದಲ್ಲಿ ಈ ಬಗ್ಗೆ ಜಾಗೃತಿ ಫಲಕಗಳನ್ನು ಅಳವಡಿಸಲಾಗಿದೆ ಹಾಗೂ ಆರೋಗ್ಯ ಇಲಾಖೆಯಿಂದ ಅನೀರೀಕ್ಷಿತ ತಪಾಸಣೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದಢರಢದ. ಭ್ರೂಣ ಹತ್ಯೆ ಮಾಡುವ ಕೇಂದ್ರಗಳು ಮತ್ತು ವ್ಯಕ್ತಿಗಳ ಬಗ್ಗೆ ನಿಖರ ಮಾಹಿತಿ ನೀಡುವವರಿಗೆ ಸರ್ಕಾರದಿಂದ 1 ಲಕ್ಷ ರೂ ಗಳ ಬಹುಮಾನ ನೀಡುವುದಲ್ಲದೆ, ಮಾಹಿತಿ ನೀಡುವವರ ಹೆಸರನ್ನು ಗೋಪ್ಯವಾಗಿಡಲಾಗುವುದು ಎಂದು ಡಾ.ತಿಪ್ಪೇಸ್ವಾಮಿ ತಿಳಿಸಿದರು.  

                    ಪೋಕ್ಸೋ ಕಾಯ್ದೆಯ ಬಗ್ಗೆ ಮಾಹಿತಿ ಕೇಳಿದ ವಿದ್ಯಾರ್ಥಿನಿಗೆ, 18 ವರ್ಷದೊಳಗಿನ ಮಕ್ಕಳನ್ನು ಸೇಫ್ ಮತ್ತು ಅನ್ ಸೇಫ್ ಟಚ್ ಮಾಡುವ ಕುರಿತು ವಿವರಿಸಿದ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಅನ್ ಸೇಫ್ ಟಚ್ ಗಳು ಪೋಕ್ಸೋ ಕಾಯ್ದೆಯಡಿ ಬರಲಿದ್ದು, ಶಾಲೆಗಳಲ್ಲಿ ಇಂತಹ ಪ್ರಕರಣಗಳನ್ನು ಮುಚ್ಚಿಡುವ ಶಿಕ್ಷಕರು/ಅಧಿಕಾರಿಗಳ ಮೇಲೂ ಕೂಡಾ ಕ್ರಮ ಕೈಗೊಳ್ಳಲಾಗುವುದು ಎಂದರು.  

                      ಶಾಲಾ ಕಾಲೇಜು ಆವರಣದಲ್ಲಿ ಮಾದಕ ವಸ್ತುಗಳ ಬಳಕೆ ಮಾಡುವವರ ವಿರದ್ಧ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿ ಅಭಿನವ ಶೆಟ್ಟಿ ಕೋರಿದರು. ಶಾಲಾ ಕಾಲೇಜುಗಳ 100 ಮೀಟರ್ ಆವರಣದಲ್ಲಿ ತಂಬಾಕು ಮತ್ತು ಮಾದಕ ವಸ್ತುಗಳ ಬಳಕೆ, ಮಾರಾಟ ನಿಷೇಧವಿದ್ದು, ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಈಗಾಗಲೇ ಶಾಲಾ ಕಾಲೇಜುಗಳಲ್ಲಿ ಅಳವಡಿಸಿರುವ ಕ್ಯೂ.ಆರ್‌. ಕೋಡ್ ಮೂಲಕ ಮಾಹಿತಿ ನೀಡುವಂತೆ ಹಾಗೂ ಅಂಕೋಲಾ ತಾಲೂಕು ವ್ಯಾಪ್ತಿಯಲ್ಲಿ ಈ ಕುರಿತಂತೆ ವ್ಯಾಪಕ ತಪಾಸಣೆಗಳನ್ನು ಕೈಗೊಳ್ಳುತ್ತಿರುವುದಾಗಿ ಅಂಕೋಲಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ತಿಳಿಸಿದರು.  

           ಮದ್ಯ ಮುಕ್ತ ರಾಜ್ಯ ಏಕೆ ಮಾಡುವುದಿಲ್ಲ ಎಂದು ಅಮೂಲ್ಯ ನಾಯಕ ಅವರ ಪ್ರಶ್ನೆಗೆ ಉತ್ತರಿಸಿದ ಡಾ.ತಿಪ್ಪೇಸ್ವಾಮಿ ,ಮದ್ಯ ಮಾರಾಟಕ್ಕೆ ಅನೇಕ ನಿಬಂಧನೆ ಮತ್ತು ನಿಯಂತ್ರಣ ಕ್ರಮಗಳಿವೆ. ಅಕ್ರಮ ಮಾರಾಟಕ್ಕೂ ಕ್ರಮ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಇದನ್ನು ಬಿಡಬೇಕು. ಮಹಾತ್ಮ ಗಾಂಧೀಜಿ ಅವರು ತಿಳಿಸಿದಂತೆ ಸಂಯಮದ ಜೀವನ ನಡೆಸಬೇಕು, ಸಂಪೂರ್ಣ ಮದ್ಯ ನಿಷೇಧ ಮಾಡುವುದು ಸರ್ಕಾರದ ಮಟ್ಟದಲ್ಲಿ ನಡೆಯಬೇಕಿದೆ ಎಂದರು.  

                  ಅಪ್ರಾಪ್ರ ವಿದ್ಯಾರ್ಥಿಗಳ ವಾಹನ ಚಾಲನೆ ಬಗ್ಗೆ ನಯನ ಪ್ರಭು ಅವರ ಪಶ್ನೆ ಕುರಿತಂತೆ, ಅಪ್ರಾಪ್ತರಿಗೆ ವಾಹನ ನೀಡಿದಲ್ಲಿ ಅವರ ಪೋಷಕರು ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಾಲೇಜುಗಳಲ್ಲಿ ಪ್ರಾಂಶುಪಾಲರು ಮತ್ತು ಮನೆಗಳಲ್ಲಿ ಪೋಷಕರು ವಿದ್ಯಾರ್ಥಿಗಳಿಗೆ ಈ ಬಗ್ಗೆ ಎಚ್ಚರಿಕೆ ನೀಡಬೇಕು. ಮಕ್ಕಳ ಹಕ್ಕುಗಳ ಕುರಿತ ವಿವಿಧ ಯೋಜನೆಗಳಿಗಾಗಿ ತಿತಿತಿ.ಟಚಿಞಞಚಿಟಚಿಚಿಞಞಣ.ಛಿಠ ನಲ್ಲಿ ಸಂಪೂರ್ಣ ವಿವರಗಳನ್ನು ಪಡೆಯಬಹುದು ಎಂದು ಡಾ.ತಿಪ್ಪೇಸ್ವಾಮಿ ಹೇಳಿದರು.  

                   ಬಾಲ ಕಾರ್ಮಿಕ ಪದ್ದತಿ ತಡೆಯುವ ಬಗ್ಗೆ, ಅಂಕೋಲಾದಲ್ಲಿ ಮಕ್ಕಳು ಆಧಾರ್ ಕಾರ್ಡ್‌ ಮಾಡಿಸಲು ಎದುರಿಸುವ ತೊಂದರೆಗಳ ಬಗ್ಗೆ, ಕಾಲೇಜುಗಳಲ್ಲಿ ಕರಾಟೆ ತರಬೇತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನೀಡುವ ಬಗ್ಗೆ, ಕಾಲೇಜಿನಲ್ಲಿ ಮೂಲ ಸೌಕರ್ಯಗಳ ತೊಂದರೆಯಾದರೆ ಯಾರಿಗೆ ತಿಳಿಸಬೇಕು, ದೌರ್ಜನ್ಯಕ್ಕೆ ಒಳಗಾದವರಿಗೆ ಸಾಂತ್ವನ, ನೆರವು ನೀಡುವ ಬಗ್ಗೆ ವಿದ್ಯಾರ್ಥಿಗಳು ತಿಳಿಸಿದರು.  

                       ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ., ದೇಶದ ಜನ ಸಂಖ್ಯೆಯಲ್ಲಿ ಶೇ.40 ಕ್ಕೂ ಅಧಿಕ 18 ವರ್ಷದೊಳಗಿನ ಮಕ್ಕಳಿದ್ದಾರೆ, ಅವರ ಅಭಿಪ್ರಾಯ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಪರಿಹಾರ ಒದಗಿಸುವುದು ಉತ್ತಮ ಪ್ರಜಾಪ್ರಭುತ್ವದ ಲಕ್ಷಣ. ಇಂದಿನ ಮಕ್ಕಳೇ, ಇಂದಿನ ಪ್ರಜೆಗಳು, ಅವರ ಸರ್ವತೋಮುಖ ವಿಕಾಸಕ್ಕೆ ಎಲ್ಲಾ ಅವಕಾಶಗಳನ್ನು ನೀಡುವ ಜೊತೆಗೆ ಅವರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕು, ಮಕ್ಕಳು ತುರ್ತು ಸಹಾಯವಾಣಿ ಸಂಖ್ಯೆಗಳಾದ ಪೊಲೀಸ್ ಸಹಾಯವಾಣಿ 112 ಮತ್ತು ಮಕ್ಕಳ ಸಹಾಯವಾಣಿ 1098 ಗೆ ತಮ್ಮ ಎಲ್ಲಾ ರೀತಿಯ ದೂರುಗಳನ್ನು ಮತ್ತು ಸಮಸ್ಯೆಗಳನ್ನು ಸಲ್ಲಿಸಬಹುದು ಎಂದರು.  

              ಅಧ್ಯಕ್ಷತೆ ವಹಿಸಿದ್ದ ಅಂಕೋಲಾ ತಹಸೀಲ್ದಾರ್ ಡಾ.ಚಿಕ್ಕಪ್ಪ ನಾಯ್ಕ್‌ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಅನುಷ್ಠಾನಾಧಿಕಾರಿಗಳು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು, ಮಕ್ಕಳೊಂದಿಗೆ ಅವರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಬೇಕು, ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳನ್ನು ಅಧ್ಯಯನದ ಉದ್ದೇಶಕ್ಕೆ ಮಾತ್ರ ಬಳಕೆ ಮಾಡುವಂತೆ ಮತ್ತು ತುರ್ತು ಸಂದರ್ಭದಲ್ಲಿ ಮಕ್ಕಳ ಸಹಾಯವಾಣಿ ಮತ್ತು ಪೊಲೀಸ್ ಸಹಾಯವಾಣಿಗೆ ದೂರು ನೀಡುವಂತೆ ತಿಳಿಸಿದರು.  

                     ಕಾರ್ಯಕ್ರಮದಲ್ಲಿ ಅಂಕೋಲಾ ಪೊಲೀಸ್ ಠಾಣೆಯ ಇನ್ಸ್‌ ಪೆಕ್ಟರ್ ಚಂದ್ರಶೇಖರ್ ಮಠಪತಿ, ತಾಲೂಕು ಆರೋಗ್ಯಾಧಿಕಾರಿ ಡಾ.ಜಗದೀಶ್ ನಾಯಕ, ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆಯ ಕುಮಾರ್, ಪಿ.ಎಂ. ಹೈಸ್ಕೂಲ್ ನ ಮುಖ್ಯೋಪಧ್ಯಾಯ ಚಂದ್ರಶೇಖರ್ ಕಡೀಮನಿ, ಕ್ಷೇತ್ರ ಶಿಕ್ಷಣಾಧಿಕಾರಿ (ಪ್ರಭಾರ) ನಾಗರಾಜ್ ನಾಯಕ್, ಭಾಸ್ಕರ್ ಗಾಂವಕರ್ ಹಾಗೂ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು.