ಮಾದಕ ವ್ಯಸನದಿಂದ ದೂರವಿರುವುದೇ ಯುವಜನರ ಭವಿಷ್ಯಕ್ಕೆ ಸುರಕ್ಷಿತ ದಾರಿ: ಸಿದ್ದಾರೂಢ ಭಾವಿಕಟ್ಟಿ

ಮಾದಕ ವ್ಯಸನದಿಂದ ದೂರವಿರುವುದೇ ಯುವಜನರ ಭವಿಷ್ಯಕ್ಕೆ ಸುರಕ್ಷಿತ ದಾರಿ: ಸಿದ್ದಾರೂಢ ಭಾವಿಕಟ್ಟಿ  Staying away from drug addiction is the safe path for the future of the youth: Siddaroodha Bhavikatt

ಯಲಬುರ್ಗಾ, ಆ.11: ಮಾದಕ ವಸ್ತುಗಳಿಗೆ ಯುವಜನತೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಇದರಿಂದ ಆರೋಗ್ಯ ಮಾತ್ರವಲ್ಲದೆ ಕುಟುಂಬದ ನೆಮ್ಮದಿ, ಆರ್ಥಿಕ ಸ್ಥಿತಿ ಹಾಗೂ ಸಾಮಾಜಿಕ ಬದುಕಿನ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಧ್ಯ ವ್ಯಸನ ಸಂಚಾಲಕ ಸಿದ್ದಾರೂಢ ಭಾವಿಕಟ್ಟಿ ಹೇಳಿದರು.  

ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ  ಕಾಲೇಜಿನಲ್ಲಿ ಸೋಮವಾರ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ‘ಮಧ್ಯ ವ್ಯಸನ ಮುಕ್ತ ಭಾರತ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

ಆ.6ರಿಂದ 20ರವರೆಗೆ ನಡೆಯಲಿರುವ ಮಾದಕ ವ್ಯಸನ ವಿರೋಧಿ ಅಭಿಯಾನದ ಅಂಗವಾಗಿ, ಮಾದಕ ವ್ಯಸನದಿಂದ ದೂರವಿರುವುದೇ ಯುವಜನರ ಭವಿಷ್ಯಕ್ಕೆ ಸುರಕ್ಷಿತ ದಾರಿ ಎಂಬ ಸಂದೇಶವನ್ನು ಮನೆ-ಮನೆಗೆ ಹಾಗೂ ಶಾಲಾ-ಕಾಲೇಜುಗಳಿಗೆ ತಲುಪಿಸುವ ಅಗತ್ಯವಿದೆ ಎಂದು ಹೇಳಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ಸವಿತಾ ಮುರುಡಿಮಠ ಮಾತನಾಡಿ, ಇಂದಿನ ಯುವಕರು ಕುಡಿತ, ಗುಟ್ಕಾ, ತಂಬಾಕು ಸೇರಿದಂತೆ ಯಾವುದೇ ರೀತಿಯ ವ್ಯಸನಗಳಿಗೆ ಬಲಿಯಾಗದಂತೆ ತಮ್ಮ ಆರೋಗ್ಯ ಹಾಗೂ ಭವಿಷ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ತಂದೆ-ತಾಯಿಗೆ ಗೌರವ ನೀಡಿ, ಗುರುಗಳ ಮಾರ್ಗದರ್ಶನವನ್ನು ಪಾಲಿಸುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.  

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ವೀರಭದ್ರ​‍್ಪ ಕಾಳಗಿ ಮಾತನಾಡಿ, ಯುವಕರು ದಾರಿತಪ್ಪಿದರೆ ದೇಶದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಯುವಜನರನ್ನು ವ್ಯಸನಕ್ಕೆ ದೂಡಿ ದುರ್ಬಲಗೊಳಿಸಲು ಶತ್ರು ರಾಷ್ಟ್ರಗಳು ಕೂಡ ಪ್ರಯತ್ನಿಸುತ್ತಿವೆ. ಹೀಗಾಗಿ ದುಶ್ಚಟಗಳಿಂದ ದೂರವಿದ್ದು, ಸದೃಢ ಭಾರತ ನಿರ್ಮಾಣಕ್ಕೆ ಯುವಕರು ಕೈಜೋಡಿಸಬೇಕು ಎಂದು ಕರೆ ನೀಡಿದರು.  

ಈ ಸಂದರ್ಭದಲ್ಲಿ ಇನ್ನರ್ ವೀಲ್ ಸಂಸ್ಥೆಯ ಕಾರ್ಯದರ್ಶಿ ಸುನೀತಾ ಎಂ. ಪತಂಗರಾಯ, ನಾಗರತ್ನ ನೂಲ್ವಿ, ಉಮಾ ಎಸ್‌. ಹೊಸಮನಿ, ರೂಪ ಕಣಡಿ, ಭಾಗ್ಯಶ್ರೀ ಕಾತ್ರಾಳಿಮಠ, ಲತಾ ಕಲ್ಯಾಣಿ, ರೇಖಾ ಹೊಸಳ್ಳಿ, ಮಂಜುನಾಥ ಮುರುಡಿ, ವಿಜಯ ಮಾಂತೇಶ, ರಾಜಶೇಖರ ಹಲಗೇರಿ, ಮೊಹಮ್ಮದ್ ರಫಿ ಗಡಾದ, ವಿರೂಪಾಕ್ಷ ಸಜ್ಜನ, ಚನ್ನಬಸಮ್ಮ ಹಿರೇಮಠ, ನಾಗರಾಜ ರೋಡ್ಡಾ ಸೇರಿದಂತೆ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.