ಇಸ್ಲಾಮಾಬಾದ್, ಆಗಸ್ಟ್ 11 ಜಮ್ಮು -ಕಾಶ್ಮೀರದಲ್ಲಿ 370 ನೇ ವಿಧಿ ರದ್ದತಿಯಿಂದ ಆಕ್ರೋಶಗೊಂಡಿರುವ ಪಾಕಿಸ್ತಾನದಲ್ಲಿ ಮತ್ತೊಂದು ಕಿಡಿಗೇಡಿ ಕೃತ್ಯ ನಡೆದಿದೆ. ಸಿಖ್ ದೊರೆ ಮಹಾರಾಜ ರಣಜಿತ್ ಸಿಂಗ್ ಅವರ ಪ್ರತಿಮೆಯನ್ನು ಅಪರಿಚಿತರು ಧ್ವಂಸ ಮಾಡಿದ್ದಾರೆ. ಲಾಹೋರ್ ಬಳಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಲಾಹೋರ್ ನಗರ ಆಡಳಿತ ಪ್ರಾಧಿಕಾರದ ವಕ್ತಾರ ತಾನಿಯಾ ಖುರೇಷಿ, ಪ್ರತಿಮೆ ನಾಶವನ್ನು ತೀವ್ರವಾಗಿ ಖಂಡಿಸುತ್ತೇವೆ. ಕೃತ್ಯದಲ್ಲಿ ಭಾಗಿಯಾದ ಇಬ್ಬರು ವ್ಯಕ್ತಿಗಳನ್ನು ಗುರುತಿಸಿದ್ದೇವೆ ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ. ಪ್ರತಿಮೆಯನ್ನು ದುರಸ್ತಿಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರ ವಿಶೇಷಾಧಿಕಾರ ಕಲ್ಪಿಸುವ 370ನೇ ವಿಧಿ ರದ್ದು ಪಡಿಸುವ ಭಾರತ ಸರ್ಕಾರದ ನಿರ್ಧಾರದ ನಂತರ, ಪಾಕಿಸ್ತಾನದಲ್ಲಿ ಕೆಲ ಗುಂಪುಗಳು ಪ್ರತಿಭಟನೆ ನಡೆಸುತ್ತಿವೆ. ಕೆಲವರು ಭಾರತ ವಿರುದ್ಧ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿದ್ದಾರೆ. ಈ ಭಾಗವಾಗಿ ಭಾಗವಾಗಿ ಕಾಶ್ಮೀರದ ಸಿಖ್ ದೊರೆ ರಣಜಿತ್ ಅವರ ಪ್ರತಿಮೆ ನಾಶಗೊಳಿಸಿದ್ದಾರೆ. ಪಾಕಿಸ್ತಾನ ಸರ್ಕಾರ ಈಗಾಗಲೇ ಭಾರತದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.