ಏಪ್ರಿಲ್ 10 ರಂದು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ರಾಜ್ಯಮಟ್ಟದ ಜನಸಮಾವೇಶ! ಪೋಸ್ಟರ್ ಬಿಡುಗಡೆ

ಏಪ್ರಿಲ್ 10 ರಂದು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ರಾಜ್ಯಮಟ್ಟದ ಜನಸಮಾವೇಶ! ಪೋಸ್ಟರ್ ಬಿಡುಗಡೆ State-level public meeting against KPS Magnet project on April 10! Poster released

ಲೋಕದರ್ಶನ ವರದಿ 

ಬೆಳಗಾವಿ 29 : ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ಕಳೆದ ನಾಲ್ಕು ತಿಂಗಳುಗಳಿಂದ ನಡೆಯುತ್ತಿರುವ ಹೋರಾಟವನ್ನು ತೀವ್ರಗೊಳಿಸಿ ಸರ್ಕಾರಕ್ಕೆ ಬಿಸಿಮುಟ್ಟಿಸುವ ಉದ್ದೇಶದಿಂದ ಏ:10 ರಂದು ರಾಜಧಾನಿ ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ರಾಜ್ಯ ಮಟ್ಟದ ಜನಸಮಾವೇಶವನ್ನು ಸಂಘಟಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ನಗರದ ಅಂಬೇಡ್ಕರ್ ಗಾರ್ಡನ್ ನಲ್ಲಿ ಎಐಡಿಎ ಹಾಗೂ ಬೆಳಗಾವಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯಿಂದ ಸಮಾವೇಶದ ಪೋಸ್ಟರ್ ಬಿಡುಗಡೆ ಗೊಳಿಸಲಾಯಿತು.  

ಸಮಿತಿಯ ಸಭೆ ನಡೆಸಿ, ಜಿಲ್ಲೆಯಾದ್ಯಂತ ಸಮಾವೇಶದ ತಯಾರಿ ಕುರಿತು ಯೋಜನೆ ರೂಪಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ರಾಮು ಹನಗಂಡಿ ಮಾತನಾಡಿ, " ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಹೆಸರಲ್ಲಿ ನಮ್ಮೂರ ಶಾಲೆಗಳನ್ನು ಮುಚ್ಚುವುದರ ವಿರುದ್ಧ ಕಳೆದ ನಾಲ್ಕು ತಿಂಗಳಿನಿಂದ ಹಳ್ಳಿ-ಹಳ್ಳಿಗಳಲ್ಲಿ ಹೋರಾಟ ನಡೆಸಲಾಗಿದೆ. ಜನವರಿಯಲ್ಲಿ ಜಿಲ್ಲಾ ಸಮಾವೇಶ ಕೂಡ ಸಂಘಟಿಸಲಾಯಿತು.

ರಾಜ್ಯಾದ್ಯಂತ ತೀವ್ರ ಜನವಿರೋಧದ ನಡುವೆಯೂ ಸರ್ಕಾರ ಶಾಲೆಗಳನ್ನು ಮುಚ್ಚುವ ಈ ಹುನ್ನಾರವನ್ನು ರಾಜ್ಯ ಸರ್ಕಾರವು ಮುಂದುವರೆಸಿದೆ. ಸರ್ಕಾರದ ಈ ಹಠಮಾರಿ ಧೋರಣೆಯನ್ನು ನಾವು ಖಂಡಿಸುತ್ತೇವೆ. ಸರ್ಕಾರದ ಈ ಯೋಜನೆಯನ್ನು ಹಿಮ್ಮೆಟ್ಟಿಸಲು, ಊರಿನ ಸರ್ಕಾರಿ ಶಾಲೆಗಳನ್ನು ಉಳಿಸಬೇಕೆಂಬ ರಾಜ್ಯದ ಜನತೆಯ ಕೂಗನ್ನು ಸರ್ಕಾರಕ್ಕೆ ಮುಟ್ಟಿಸಲು ಏಪ್ರಿಲ್ 10 ರಂದು ರಾಜ್ಯಮಟ್ಟದ ಜನಸಮಾವೇಶವನ್ನು ಸಂಘಟಿಸಲಾಗುತ್ತಿದೆ. ಜಿಲ್ಲೆಯಾದ್ಯಂತ ಹಳ್ಳಿ ಹಳ್ಳಿಗಳಿಂದ ರೈತ-ಕಾರ್ಮಿಕರು ಸೇರಿದಂತೆ ಎಲ್ಲ ಜನ ಸಾಮಾನ್ಯರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯಮಟ್ಟದ ಚಳುವಳಿಯಲ್ಲಿ ಭಾಗವಹಿಸಬೇಕು" ಎಂದು ಕರೆ ನೀಡಿದರು.  

ಎಐಡಿಎ  ಜಿಲ್ಲಾ ಸಂಚಾಲಕರು ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಕಾರ್ಯದರ್ಶಿಗಳಾದ ಮಹಾಂತೇಶ ಬಿಳೂರ್ ಮಾತನಾಡಿ, " ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಎಂಬ ಮೋಸದ ಪರದೆ ಹೊದಿಸಿ ಸರ್ಕಾರವು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಜಾರಿಗೊಳಿಸಿದೆ. ನಾವು ಕನ್ನಡಪರ ಎಂದು ಕೊಚ್ಚಿಕೊಳ್ಳುತ್ತ 40 ಸಾವಿರಕ್ಕೂ ಅಧಿಕ ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿದೆ. ಕನ್ನಡದ ಏಳಿಗೆಗೆ ಅನ್ಯಾಯವೆಸಗಿರುವ ಕರ್ನಾಟಕ ಸರ್ಕಾರದ ಜನವಿರೋಧಿ ನಡೆಯನ್ನು ಖಂಡಿಸಿ ನಾಡಿನ ಸಾಹಿತಿಗಳು, ಶಿಕ್ಷಣತಜ್ಜ್ಞರು ಸೇರಿದಂತೆ ಅನೇಕ ಗಣ್ಯರು ಈ ಹೋರಾಟದ ಬೆಂಬಲಕ್ಕೆ ನಿಂತಿದ್ದಾರೆ" ಎಂದು ಹೇಳಿದರು.