27 ವರ್ಷಗಳ ಪ್ರಾಮಾಣಿಕ ಪತ್ರಿಕಾ ಸೇವೆಗೆ ರಂಗನಾಥ ಕಮತರಗೆ ರಾಜ್ಯಮಟ್ಟದ ಗೌರವ

27 ವರ್ಷಗಳ ಪ್ರಾಮಾಣಿಕ ಪತ್ರಿಕಾ ಸೇವೆಗೆ ರಂಗನಾಥ ಕಮತರಗೆ ರಾಜ್ಯಮಟ್ಟದ ಗೌರವ State-level honor for Ranganatha Kamatara for 27 years of honest journalistic service

ಲೋಕದರ್ಶನ ವರದಿ 

ಮಹಾಲಿಂಗಪುರ 18 : ಪತ್ರಿಕೆಯ ಪುಟಗಳಲ್ಲಿ ಕಾಣಿಸಿಕೊಳ್ಳುವ ಪ್ರತಿಯೊಂದು ಸುದ್ದಿಯ ಹಿಂದೆ, ಅಕ್ಷರಗಳನ್ನು ತಿದ್ದಿ, ಸುದ್ದಿಗೆ ರೂಪ ನೀಡಿ, ಸತ್ಯವನ್ನು ಓದುಗರ ಮುಂದಿಡುವ ತೆರೆಮರೆಯ ಅಕ್ಷರ ಸೈನಿಕರ ಶ್ರಮ ಅಡಗಿರುತ್ತದೆ. ಇಂತಹ ನಿಸ್ವಾರ್ಥ ಪತ್ರಿಕಾ ಸೇವೆಯನ್ನು ಗುರುತಿಸಿ, ಸುಮಾರು 27 ವರ್ಷಗಳ ಸುದೀರ್ಘ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿರುವ ಪತ್ರಿಕೆಯೊಂದರ ಮುಖ್ಯ ಉಪ ಸಂಪಾದಕ ರಂಗನಾಥ ಕಮತರ ಅವರಿಗೆ ದಿ. ಶಾಂತವೀರಯ್ಯ ಮ. ಮನ್ನಯ್ಯನವರಮಠ ಸ್ಮರಣಾರ್ಥ ನೀಡಲಾಗುವ ‘ಸುದ್ದಿ ಮನೆ ಚೇತನ’ ರಾಜ್ಯಮಟ್ಟದ ನಗದು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪಟ್ಟಣದ ಕೆಎಲ್‌ಇ ಸಂಸ್ಥೆಯ ಪಾಲಿಟೆಕ್ನಿಕ್ ಕಾಲೇಜಿನ ಸಭಾಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಮಂಗಳವಾರ ನಡೆದ ಮಧುರಾ ಪ್ರಕಾಶನ ಸಂಸ್ಥೆಯ 2026-27ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೆಂಗಳೂರಿನ ಪತ್ರಿಕೆಯೊಂದರ ಹಿರಿಯ ಉಪ ಸಂಪಾದಕರಾದ ಉಮೇಶ ಭಟ್ಟ ಪಿ.ಎಚ್‌. ಅವರು ರಂಗನಾಥ ಕಮತರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಚಿಮ್ಮಡದ ಪ್ರಭು ಸ್ವಾಮೀಜಿ ಆಶೀರ್ವಚನ ನೀಡಿ, ರಂಗನಾಥ ಕಮತರ ಅವರು 27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಲೆಮರೆ ಕಾಯಿಯಂತೆ ಇದ್ದುಕೊಂಡೇ ಸುದ್ದಿಗಳಿಗೆ ವಿಶೇಷ ಚೇತನ ನೀಡುವ ಅವರ ಕೌಶಲ್ಯ ಶ್ಲಾಘನೀಯ. ಮಹನೀಯರ ಸ್ಮರಣಾರ್ಥ ಇಂತಹ ಸೇವೆಯನ್ನು ಗುರುತಿಸಿ ನೀಡುತ್ತಿರುವ ಪ್ರಶಸ್ತಿ ಅತ್ಯಂತ ಅರ್ಥಪೂರ್ಣವಾಗಿದೆ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಂಗನಾಥ ಕಮತರ, ಪತ್ರಕರ್ತರು ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾರೆ. ಆದರೆ ಸುದ್ದಿಗಳಿಗೆ ರೂಪ ನೀಡುವ ಉಪ ಸಂಪಾದಕರು ಬಹುತೇಕ ತೆರೆಮರೆಯಲ್ಲೇ ಉಳಿಯುತ್ತಾರೆ. ಯಾವುದೋ ಒಂದು ಕೋಣೆಯಲ್ಲಿ ಕುಳಿತು ಸುದ್ದಿಗಳಿಗೆ ರೂಪ ನೀಡುವ ನಮ್ಮ ಸೇವೆಯನ್ನು ಗುರುತಿಸಿ ಮಧುರಾ ಪ್ರಕಾಶನ ನೀಡಿರುವ ಈ ಪ್ರಶಸ್ತಿ ಅಪಾರ ಸಂತಸ ತಂದಿದೆ.

ಈ ಗೌರವಕ್ಕೆ ಸಂಸ್ಥೆಗೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಮಧುರಾ ಪ್ರಕಾಶನದ ಮಹೇಶ ಮನ್ನಯ್ಯನವರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಚಂದ್ರಶೇಖರ ಮೋರೆ ಹಾಗೂ ಹಿರಿಯ ಪತ್ರಕರ್ತರಾದ ಮೀರಾ ಎಚ್‌. ನದಾಫ್ ಪರಿಚಯ ಭಾಷಣ ಮಾಡಿದರು. ಕೆಎಲ್‌ಇ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಎಸ್‌.ಐ. ಕುಂದಗೋಳ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ದಿ. ಶಾಂತವೀರಯ್ಯ ಮ. ಮನ್ನಯ್ಯನವರಮಠ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿದರು. ವೇದಿಕೆಯಲ್ಲಿ ಅನಸೂಯಾ ಮನ್ನಯ್ಯನವರಮಠ, ಶ್ರೀನಿವಾಸ ಕುಲಕರ್ಣಿ ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿದ್ಯಾರ್ಥಿಗಳು, ಪತ್ರಕರ್ತರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಿರಿಯ ಸಾಮಾಜಿಕ ಕಾರ್ಯಕರ್ತ ಗುರುಲಿಂಗಪ್ಪ ಗೊಂಬಿ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಬಸವರಾಜ ಮೇಟಿ ನಿರೂಪಿಸಿ ವಂದಿಸಿದರು. ತೆರೆಮರೆಯಲ್ಲಿ ಕುಳಿತು ಅಕ್ಷರಗಳಿಗೆ ಜೀವ ತುಂಬುವ ಪತ್ರಿಕಾ ಸೇವೆಗೆ ದೊರೆತ ಈ ಗೌರವ, ರಂಗನಾಥ ಕಮತರ ಅವರ ಸಾಧನೆಯಷ್ಟೇ ಅಲ್ಲದೆ, ಪತ್ರಿಕೆಯ ಹಿಂದೆ ಮೌನವಾಗಿ ದುಡಿಯುವ ಪ್ರತಿಯೊಬ್ಬ ಅಕ್ಷರ ಸೈನಿಕನ ಸೇವೆಗೆ ಸಂದ ಗೌರವವಾಗಿದೆ.