ಬೆಂಗಳೂರು, ಫೆ.24, ಮಾರ್ಚ್ 5ರಿಂದ 7ರವರೆಗೆ ಮೂರು ದಿನಗಳ ಕಾಲ ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ರಾಜ್ಯ ಮಟ್ಟದ ಕೃಷಿ ಮೇಳ ಆಯೋಜಿಸಲಾಗಿದೆ.ಇಲ್ಲಿನ ಚನ್ನಪ್ಪಸ್ವಾಮಿ ವಿದ್ಯಾಪೀಠ ಹಿರೇಕಲ್ಮಠ ಹೊನ್ನಾಳಿಯಲ್ಲಿ ಮೂರು ದಿನಗಳ ಕಾಲ ಹಿರೇಕಲ್ಮಠದ ಶಿವಾಚಾರ್ಯ ಸ್ವಾಮಿಗಳ ಚಂದ್ರಸ್ಮರಣೆ ಅಂಗವಾಗಿ ತೋಟಗಾರಿಕಾ ಮತ್ತು ಕೃಷಿ ಇಲಾಖೆ ವತಿಯಿಂದ ರಾಜ್ಯಮಟ್ಟದ ಮೇಳ ಆಯೋಜಿಸಲಾಗಿದೆ. ಮೊದಲ ದಿನ ಪಂಚಪೀಠಾದೀಶರು ಹಾಗೂ ಚಿತ್ರನಟ ಶಿವರಾಜ ಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಎರಡನೆಯ ದಿನ ಮೈಸೂರಿನ ಡಾ. ಯದುವೀರ ಒಡೆಯರ್, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಮೂರನೆ ದಿನ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಎಲ್ಲ ಪ್ರಮುಖ ಸಚಿವರು ಪಾಲ್ಗೊಳ್ಳುತ್ತಿದ್ದಾರೆ. ಈ ಮೂರು ದಿನಗಳ ಮೇಳದಲ್ಲಿ ಸಾವಯವ ಕೃಷಿ, ಸುಧಾರಿತ ತಳಿಗಳು, ಸುಧಾರಿತ ತಂತ್ರಜ್ಞಾನ, ಇಸ್ರೇಲ್ ಮಾದರಿ ತಾಂತ್ರಿಕತೆ ಸೇರಿದಂತೆ ನೂತನ ಯಂತ್ರೋಪಕರಣಗಳ ಪ್ರದರ್ಶನ ನಡೆಯಲಿದೆ.
ಕೃಷಿ ಮೇಳ ಆಯೋಜಿಸಿರುವ ಬಗ್ಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳೂ ಆಗಿರುವ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಿಕಾಸಸೌಧದಲ್ಲಿನ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಇದೇ ಸಂದರ್ಭದಲ್ಲಿ 32 ಬಿಜೆಪಿ ಶಾಸಕರು ರಾಜೀನಾಮೆ ಕೊಡುತ್ತಾರೆ ಎಂಬ ಮೇಲ್ಮನೆ ಕಾಂಗ್ರೆಸ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಇಬ್ರಾಹಿಂ ಒಬ್ಬ ಜೋಕರ್. ತಮ್ಮ ಬಾಯಿ ಚಪಲಕ್ಕೆ ಏನೇನೂ ಮಾತನಾಡುತ್ತಿರುತ್ತಾರೆ ಎಂದು ತಿರುಗೇಟು ನೀಡಿದರು.
ನಾವೆಲ್ಲ 120 ಶಾಸಕರು ಒಟ್ಟಾಗಿದ್ದೇವೆ, ಯಾವ ಶಾಸಸಕರಿಗೂ ಸರ್ಕಾರದಲ್ಲಿ ಅಸಮಾಧಾನ ಇಲ್ಲ. ಸರ್ಕಾರ ಅಸ್ಥಿರವಾಗಲ್ಲ, ಸ್ಥಿರವಾಗಿರುತ್ತದೆ. ಬಿ.ಎಸ್.ಯಡಿಯೂರಪ್ಪ ಇನ್ನೂ ಮೂರೂವರೆ ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ. ಯಡಿಯೂರಪ್ಪ ವಿರುದ್ಧ ಅನಾಮಧೇಯ ಪತ್ರ ಬರೆದವರು ಯಾರು ಎನ್ನುವುದು ತಮಗೆ ಗೊತ್ತಿದೆ. ತಮ್ಮ ಪಕ್ಷದ ಶಾಸಕರು ಯಾರೂ ಪತ್ರ ಬರೆದಿಲ್ಲ. ಅಧಿಕಾರದ ಹುಚ್ಚಿನಿಂದ ಪತ್ರವನ್ನು ಮಾನಸಿಕ ಅಸ್ವಸ್ಥರು ಪತ್ರ ಬರೆದಿದ್ದಾರೆ. ಯಾರು ಬರೆದಿದ್ದಾರೆ ಅವರಿಗೆ ನೇರವಾಗಿ ಪತ್ರ ಬರೆಯಿರಿ ಎಂದು ಹೇಳಿದ್ದೇನೆ, ಮತ್ತೊಂದು ಸುದ್ದಿಗೋಷ್ಠಿಯಲ್ಲಿ ಯಾರು ಪತ್ರ ಬರೆದವರು ಎಂಬುದನ್ನು ಬಹಿರಂಗಗೊಳಿಸುವುದಾಗಿ ಹೇಳಿದರು.ಸಂಸದ ಡಿ.ಕೆ.ಸುರೇಶ್ ಒಮ್ಮೆ ಯಡಿಯೂರಪ್ಪ ಪರ ಮತ್ತೊಮ್ಮೆ ವಿರುದ್ಧ ಮಾತನಾಡುತ್ತಾರೆ. ಡಿ.ಕೆ.ಶಿವಕುಮಾರ್ ನಮ್ಮಆಪ್ತರು, ಮನೆಗೆ ಹೋಗಿ ತಾವು ರಾಜಕೀಯ ಮಾತನಾಡಿಲ್ಲ. ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡುವುದಾಗಿ ಹೇಳಿಲ್ಲ. ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ, ಮೂಲ ವಲಸಿಗ ಎನ್ನುವುದೂ ಇಲ್ಲ ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದರು.