ಕಾಮಧೇನು ಸಂಜೀವಿನಿ ಸಂಘಕ್ಕೆ ರಾಜ್ಯಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ
State-level Kittur Rani Chennamma Award presented to Kamadhenu Sanjeevini Sangha
ಲೋಕದರ್ಶನ ವರದಿ
ಧಾರವಾಡ ಮಾ.25: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಪಾತ್ರ ದಿನದಿಂದ ದಿನಕ್ಕೆ ವಿಸ್ತರಿಸುತ್ತಿದ್ದು, ಅವರ ಶ್ರಮ, ಸಾಧನೆ ಹಾಗೂ ಸೇವೆಯನ್ನು ಗುರುತಿಸಿ ಗೌರವಿಸುವುದು ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 2026 ರ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನೀಡಲಾಗುವ ಪ್ರತಿಷ್ಠಿತ 2025ಹಿ26ನೇ ಸಾಲಿನ ರಾಜ್ಯಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ಧಾರವಾಡ ಜಿಲ್ಲೆಯ ಕಬ್ಬೆನೂರು ಗ್ರಾಮದ ಕಾಮಧೇನು ಸಂಜೀವಿನಿ ಮಹಿಳಾ ಸ್ವ-ಸಹಾಯ ಸಂಘಕ್ಕೆ ಪ್ರದಾನ ಮಾಡಲಾಗಿದೆ.
ಈ ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 24, 2026 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭವ್ಯವಾಗಿ ಜರುಗಿತು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಂಘದ ಪ್ರತಿನಿಧಿಯನ್ನು ಸನ್ಮಾನಿಸಿ, ಪ್ರಶಸ್ತಿ ಪ್ರದಾನ ಮಾಡಿದರು. ಧಾರವಾಡ ಜಿಲ್ಲೆಯ ಕಬ್ಬೆನೂರು ಗ್ರಾಮದ ಕಾಮಧೇನು ಸಂಜೀವಿನಿ ಮಹಿಳಾ ಸ್ವ-ಸಹಾಯ ಸಂಘದ ಪ್ರತಿನಿಧಿ ಆಗಿರುವ ರಾಜೇಶ್ವರಿ ಮಂಜುನಾಥ ಪವಾಡೆ ಅವರು ಈ ಗೌರವವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಮಹಿಳಾ ಸ್ವ-ಸಹಾಯ ಸಂಘಗಳ ಪ್ರತಿನಿಧಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ: ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯು ರಾಜ್ಯದ ಮಹಿಳೆಯರ ಸಾಧನೆಗಳನ್ನು ಗುರುತಿಸಿ, ಅವರಿಗೆ ಪ್ರೋತ್ಸಾಹ ನೀಡುವ ಪ್ರಮುಖ ಪ್ರಶಸ್ತಿಯಾಗಿದೆ. ಸಮಾಜದ ಮುಖ್ಯವಾಹಿನಿಯಲ್ಲಿ ಮಹಿಳೆಯರ ಪಾತ್ರವನ್ನು ಬಲಪಡಿಸಲು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಅವರು ಮಾಡಿದ ಸಾಧನೆಗಳನ್ನು ಗುರುತಿಸಿ, ಗೌರವಿಸಲು ಈ ಪ್ರಶಸ್ತಿಯನ್ನು ಪ್ರತಿವರ್ಷ ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ನೀಡಲಾಗುತ್ತದೆ. ವಿಶೇಷವಾಗಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸಂಸ್ಥೆಗಳು ಹಾಗೂ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವುದು ಈ ಪ್ರಶಸ್ತಿಯ ಮುಖ್ಯ ಉದ್ದೇಶವಾಗಿದೆ.
2025ಹಿ26ನೇ ಸಾಲಿನ ಪ್ರಶಸ್ತಿಗಾಗಿ ಕ್ರೀಡೆ, ಕಲೆ, ಸಾಹಿತ್ಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರು ಹಾಗೂ ಕಠಿಣ ಪರಿಸ್ಥಿತಿಗಳಲ್ಲಿ ಆತ್ಮಸ್ಥೈರ್ಯದಿಂದ ಹೋರಾಡಿ ಬದುಕು ಕಟ್ಟಿಕೊಂಡ ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ಕಾಮಧೇನು ಸಂಜೀವಿನಿ ಮಹಿಳಾ ಸ್ವ-ಸಹಾಯ ಸಂಘವು ತನ್ನ ಸೇವಾ ಮನೋಭಾವದಿಂದ ವಿಶೇಷ ಗಮನ ಸೆಳೆದಿದೆ.
ಈ ಸಂಘವು ಮುಖ್ಯವಾಗಿ ದೀನ, ದುರ್ಬಲರಿಗೆ ಉಚಿತ ಅನ್ನದಾನ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಅನ್ನದಾಸೋಹದ ಮೂಲಕ ಅನೇಕ ಜನರ ಹೊಟ್ಟೆ ತುಂಬಿಸುವ ಸೇವೆಯನ್ನು ನಿರಂತರವಾಗಿ ಸಲ್ಲಿಸುತ್ತಿದ್ದು, ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮಹಿಳೆಯರು ಒಗ್ಗಟ್ಟಿನಿಂದ ಸಂಘಟಿತವಾಗಿ ಕೆಲಸ ಮಾಡಿದರೆ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಈ ಸಂಘವೇ ಒಂದು ಉತ್ತಮ ಉದಾಹರಣೆ.
ಇದೇ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಪಂಚಾಯತಿಯಿಂದ ಪ್ರೋತ್ಸಾಹಿಸುತ್ತಿರುವ ಅಕ್ಕ ಕಫೆಯ ನಿರ್ವಹಣೆಯನ್ನೂ ಈ ಸಂಘ ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಇದರಿಂದ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ದೊರಕುವುದರ ಜೊತೆಗೆ, ಸಮಾಜದಲ್ಲಿ ಅವರ ಸ್ಥಾನಮಾನವೂ ಹೆಚ್ಚುತ್ತಿದೆ. ಸಂಘದ ಸಮರ್ಿತ ಸೇವೆ, ಸಂಘಟಿತ ಕಾರ್ಯಪದ್ಧತಿ ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕಾಮಧೇನು ಸಂಜೀವಿನಿ ಮಹಿಳಾ ಸ್ವ-ಸಹಾಯ ಸಂಘಕ್ಕೆ ಲಭಿಸಿರುವ ಈ ಗೌರವವು ಕೇವಲ ಒಂದು ಪ್ರಶಸ್ತಿಯಲ್ಲ, ಮಹಿಳಾ ಶಕ್ತಿಗೆ ದೊರೆತ ಮಾನ್ಯತೆ. ಇಂತಹ ಸಂಘಗಳ ಸಾಧನೆಗಳು ಇತರ ಮಹಿಳೆಯರಿಗೆ ಪ್ರೇರಣೆಯಾಗಿದ್ದು, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಸಹಕಾರಿಯಾಗಿವೆ.
ಕಾಮಧೇನು ಸಂಜೀವಿನಿ ಮಹಿಳಾ ಸ್ವ ಸಹಾಯ ಸಂಘದ ರಾಜೇಶ್ವರಿ ಪವಾಡೆ: ಧಾರವಾಡ ಜಿಲ್ಲೆಯ ಕಬ್ಬೆನೂರು ಗ್ರಾಮದಲ್ಲಿ 20 ಜನೆವರಿ 2020 ರಲ್ಲಿ ಕಾಮಧೇನು ಸಂಜೀವಿನಿ ಮಹಿಳಾ ಸ್ವ ಸಹಾಯ ಸಂಘವು ರಾಜೇಶ್ವರಿ ಮಂಜುನಾಥ ಪವಾಡೆ ಅವರ ನೇತೃತ್ವದಲ್ಲಿ ಸ್ಥಾಪನೆಗೊಂಡಿದೆ. ಈ ಸಂಘವು ಹಿಂದೆ 79 ನೇ ಸ್ವಾತಂತ್ರೋತ್ಸವ ದಿನಾಚರಣೆ 2025 ಜಿಲ್ಲಾಡಳಿತ ಕಾರ್ಯಕ್ರಮದಲ್ಲಿ ಸಮಾಜಸೇವಾ ಸಾಧನೆ ಮಾಡಿದ ಪ್ರಯುಕ್ತ ಅಭಿನಂದನ ಪತ್ರ ಪಡೆದುಕೊಂಡಿರುತ್ತದೆ.
ಅದರಂತೆ 2025 ರಲ್ಲಿ ಜೀ ಕನ್ನಡ ನ್ಯೂಸ್ ಚಾನೆಲ್ ರಿಯಲ್ ಸ್ಟಾರ್ಸ ಅವಾರ್ಡ್, ರೋಹನ್ ಕೇರ್ ಫೌಂಡೇಶನ್ ಬೆಂಗಳೂರು ಇವರಿಂದ ಶ್ರಮಿಕ ರತ್ನ ಸಮಾಜಸೇವೆ ಪ್ರಶಸ್ತಿ, ಅಪ್ನಾ ದೇಶ ಚೇತನ ಫೌಂಡೇಶನ್‌ದಿಂದ ಕರ್ನಾಟಕ ಸಮಾಜ ಸೇವೆ ಪ್ರಶಸ್ತಿ, ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರ ಇವರಿಂದ ಅನ್ನದಾನ ದಾಸೋಹ ರತ್ನ ಪ್ರಶಸ್ತಿ ಪಡೆದುಕೊಂಡಿರುತ್ತದೆ.
ಸಂಘದ ಪ್ರತಿನಿಧಿ ರಾಜೇಶ್ವರಿ ಮಂಜುನಾಥ ಪವಾಡೆ ಅವರು ಪಬ್ಲಿಕ ಟಿವಿಯ ಮುಖ್ಯಸ್ಥ ಹೆಚ್.ಆರ್. ರಂಗನಾಥ ಅವರೊಂದಿಗೆ ಸಂವಾದ ನಡೆಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಸಾಧಕ ಮಹಿಳೆ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 