ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ : ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ ಚಂದ್ರಶೇಖರ ನುಗ್ಗಲಿ
State Primary School Teachers Association elections: Chandrashekar Nuggali elected as president for
ಆಲಮಟ್ಟಿ 21: ರಾಜ್ಯದ 42,000 ಸರ್ಕಾರಿ ಶಾಲೆಗಳ ಸುಮಾರು 1,58,000 ಶಿಕ್ಷಕರನ್ನು ಪ್ರತಿನಿಧಿಸುವ, 55 ವರ್ಷಗಳ ಸುಧೀರ್ಘ ಇತಿಹಾಸ ಹೊಂದಿರುವ ‘ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ’ಕ್ಕೆ ಐದು ವರ್ಷಕ್ಕೊಮ್ಮೆ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಕೃಷ್ಣಾ ತೀರದ ಹೋರಾಟಗಾರ, ಶಿಕ್ಷಕ ಸಮೂಹದ ನವ ಚೇತಕ ಚಂದ್ರಶೇಖರ ನುಗ್ಗಲಿ ಅವರು ಸತತ ಎರಡನೇ ಬಾರಿಗೆ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಳೆದ ಎರಡು ತಿಂಗಳುಗಳಿಂದ ಎರಡು ಹಂತಗಳಲ್ಲಿ ಈ ಚುನಾವಣಾ ಪ್ರಕ್ರಿಯೆ ಯಶಸ್ವಿಯಾಗಿ ಜರುಗಿದೆ. ಪ್ರತಿ 50 ಶಿಕ್ಷಕರಿಗೆ ಒಬ್ಬರಂತೆ (50:1) ತಾಲ್ಲೂಕು ಹಂತದಲ್ಲಿ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗಿತ್ತು. ಅದರಂತೆ ರಾಜ್ಯಾದ್ಯಂತ 34 ಶೈಕ್ಷಣಿಕ ಜಿಲ್ಲೆಗಳು ಹಾಗೂ 239 ತಾಲ್ಲೂಕುಗಳಿಂದ ಒಟ್ಟು 2,394 ಜನ ಪ್ರತಿನಿಧಿಗಳು ಆಯ್ಕೆಯಾಗಿದ್ದರು. ಈ ಪ್ರತಿನಿಧಿಗಳ ಮೂಲಕ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದ ಪದಾಧಿಕಾರಿಗಳ ಚುನಾವಣೆ ಪ್ರಕ್ರಿಯೆ ನೆರವೇರಿದ್ದು, ಒಟ್ಟು 8 ಜನ ಪದಾಧಿಕಾರಿಗಳು ನೂತನ ತಂಡವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿ ಚಂದ್ರಶೇಖರ ನುಗ್ಗಲಿ (ಸಾಮಾನ್ಯ), ಪ್ರಧಾನ ಕಾರ್ಯದರ್ಶಿಯಾಗಿ ಚೇತನ್ ಹೆಚ್.ಎಸ್ (ಸಾಮಾನ್ಯ), ಉಪಾಧ್ಯಕ್ಷರುಗಳಾಗಿ ಪದ್ಮಲತಾ ಜಿ. (ಮಹಿಳಾ ಮೀಸಲಾತಿ) ಹಾಗೂ ಮಾರುತೇಶ ಆರ್. (ಸಾಮಾನ್ಯ) ಅವರು ಆಯ್ಕೆಯಾಗಿದ್ದಾರೆ. ಉಳಿದಂತೆ ಖಜಾಂಚಿಯಾಗಿ ರಾಜಶೇಖರ ಎಂ. ಹೊನ್ನಪ್ಪನವರ (ಸಾಮಾನ್ಯ), ಸಹ ಕಾರ್ಯದರ್ಶಿಗಳಾಗಿ ಪ್ರಮೀಳಾ ತಿಪ್ಪಣ್ಣ ಕಾಮನಹಳ್ಳಿ (ಮಹಿಳಾ ಮೀಸಲಾತಿ) ಹಾಗೂ ಜಯಕುಮಾರ ರಾ. ಹೆಬಳಿ (ಸಾಮಾನ್ಯ), ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಸುಂದರೇಶ ಬಿ.ಎನ್. (ಸಾಮಾನ್ಯ) ಅವರು ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಐತಿಹಾಸಿಕ ಸಾಧನೆಗಳ ಹಿನ್ನೆಲೆ: ಕಳೆದ ಒಂದು ವರ್ಷದ ಅವಧಿಯಲ್ಲಿ ಇದೇ ನಾಯಕತ್ವದ ತಂಡವು ಶಿಕ್ಷಕರಿಗಾಗಿ 35ಕ್ಕೂ ಹೆಚ್ಚು "ಶಿಕ್ಷಕ ಸ್ನೇಹಿ" ಸರ್ಕಾರಿ ಆದೇಶಗಳನ್ನು ಹೊರಡಿಸುವಲ್ಲಿ ಯಶಸ್ವಿಯಾಗಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮುಖ್ಯಗುರುಗಳ ಹುದ್ದೆಯಿಂದ ಹಿರಿಯ ಮುಖ್ಯಗುರುಗಳ ಹುದ್ದೆಗೆ 4,000ಕ್ಕೂ ಹೆಚ್ಚು ಶಿಕ್ಷಕರಿಗೆ ಬಡ್ತಿ ಕೊಡಿಸಲಾಗಿದೆ. ಇತ್ತೀಚೆಗಷ್ಟೇ 10,000 ಸಹ ಶಿಕ್ಷಕರ ಹುದ್ದೆಯಿಂದ ಮುಖ್ಯಗುರುಗಳ ಹುದ್ದೆಗೆ ಬಡ್ತಿ ಕೊಡಿಸಿರುವುದು ಇಲಾಖೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಶೈಕ್ಷಣಿಕ ದಾಖಲೆಯಾಗಿದೆ.
ಅಲ್ಲದೆ, ಫೆಬ್ರವರಿ 28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಲಕ್ಷಾಂತರ ಶಿಕ್ಷಕರನ್ನು ಒಗ್ಗೂಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರ್ಪ ಅವರ ಸಮ್ಮುಖದಲ್ಲಿ ಶಿಕ್ಷಕರ ಪ್ರಮುಖ ಬೇಡಿಕೆಗಳತ್ತ ಯಶಸ್ವಿಯಾಗಿ ಗಮನ ಸೆಳೆಯಲಾಗಿತ್ತು. ಇದು ಇಡೀ ಸಾಂಘಿಕ ವಲಯದಲ್ಲಿ ಹೊಸ ಶಕ್ತಿಯನ್ನು ತುಂಬಿದೆ.
ನೂತನ ತಂಡದ ಮುಂದಿರುವ ಪ್ರಮುಖ ಸಂಕಲ್ಪಗಳು: ಮರು ಆಯ್ಕೆಯಾದ ಬಳಿಕ ಒಕ್ಕೂಟದ ನಾಯಕರು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ರಾಜ್ಯದ ಎಲ್ಲಾ ಶಿಕ್ಷಕ ಬಂಧುಗಳಿಗೆ ಕೃತಜ್ಞತೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷರಾದ ಚಂದ್ರಶೇಖರ ನುಗ್ಗಲಿ ಅವರು, "55 ವರ್ಷಗಳ ಇತಿಹಾಸವಿರುವ ಸಂಘಟನೆಯ ನಾಯಕತ್ವ ಸುಲಭದ ಕೆಲಸವಲ್ಲ, ನಮ್ಮ ಮುಂದೆ ಸವಾಲುಗಳ ರಾಶಿಯೇ ಇದೆ.
ಪದವಿ ಪೂರೈಸಿದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 1 ಹೆಚ್ಚುವರಿ ವೇತನ ಬಡ್ತಿ ಕೊಡಿಸುವುದು, ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢಶಾಲೆಗಳಿಗೆ ಬಡ್ತಿ ಕೊಡಿಸುವುದು, ಶಿಕ್ಷಕರ ಸಂಘಕ್ಕೆ ಸ್ವಂತ ನಿವೇಶನ ಪಡೆದು ಸುಸಜ್ಜಿತ ಕಟ್ಟಡ ಹಾಗೂ ರಾಜ್ಯಾದ್ಯಂತ ಬರುವ ಶಿಕ್ಷಕರಿಗೆ ವಸತಿ ಕೊಠಡಿಗಳನ್ನು ನಿರ್ಮಾಣ ಮಾಡುವುದು ನಮ್ಮ ಪ್ರಮುಖ ಗುರಿಯಾಗಿದೆ. ಇದರೊಂದಿಗೆ ರಾಜ್ಯದ ಎಲ್ಲಾ ತಾಲ್ಲೂಕು ಮತ್ತು ಜಿಲ್ಲೆಗಳಲ್ಲಿ ಸಂಘಟನೆಯನ್ನು ಮತ್ತಷ್ಟು ಕ್ರಿಯಾಶೀಲಗೊಳಿಸಿ, ಶಿಕ್ಷಕರ ನಿರಂತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ನಮ್ಮ ತಂಡ ಬದ್ಧವಾಗಿದೆ ಎಂದು ತಿಳಿಸಿದರು.
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್ 