ಇಂಡೋನೇಷ್ಯಾದಲ್ಲಿ ವಿಶ್ವ ರೋಬೋಟಿಕ್ಸ್‌ ಚಾಂಪಿಯನ್ಶಿಪ್ ಗೆದ್ದು ಇತಿಹಾಸ ನಿರ್ಮಿಸಿದ ಬೆಳಗಾವಿ ವಿದ್ಯಾರ್ಥಿಗಳು

ಇಂಡೋನೇಷ್ಯಾದಲ್ಲಿ ವಿಶ್ವ ರೋಬೋಟಿಕ್ಸ್‌ ಚಾಂಪಿಯನ್ಶಿಪ್ ಗೆದ್ದು ಇತಿಹಾಸ ನಿರ್ಮಿಸಿದ ಬೆಳಗಾವಿ ವಿದ್ಯಾರ್ಥಿಗಳು Belgaum students create history by winning the World Robotics Championship in Indonesia

 ಬೆಳಗಾವಿ 21: ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಹೆಮ್ಮೆಯನ್ನು ಹೆಚ್ಚಿಸುವಂತಹ ಅಪೂರ್ವ ಸಾಧನೆಯನ್ನು ಬೆಳಗಾವಿಯ ಸ್ಟೀಮ್ ಎಚ್ ತರಬೇತಿ ಮತ್ತು ಸಂಶೋಧನಾ ಪ್ರತಿಷ್ಠಾನದ ಇಬ್ಬರು ವಿದ್ಯಾರ್ಥಿಗಳು ಮಾಡಿದ್ದಾರೆ. ಇತ್ತೀಚಿಗೆ ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆದ ಪ್ರತಿಷ್ಠಿತ “ಕೋಡೇವರ್ 7.0 ಅಂತರರಾಷ್ಟ್ರೀಯ ರೋಬೋಟಿಕ್ಸ್‌ ಸ್ಪರ್ಧೆ”ಯಲ್ಲಿ ಬೆಳಗಾವಿಯ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಿ ವಿಶ್ವದ ನಂ.1 ಸ್ಥಾನವನ್ನು ಪಡೆದುಕೊಂಡಿದ್ದಾರೆ.ಆಟೋ ರಿಕ್ಷಾ ಚಾಲಕರಾದ ಲಕ್ಷ್ಮಪ್ಪ ಬಂಡಿವಡ್ಡರ ಅವರ ಪುತ್ರ ಸುಶಾಂತ ಲಕ್ಷ್ಮಪ್ಪ ಬಂಡಿವಡ್ಡರ ಹಾಗೂ ಸಣ್ಣ ರೈತನಾದ ಮಲ್ಲಿಕಾರ್ಜುನ ಗದಗ ಅವರ ಪುತ್ರ ವಿಠ್ಠಲ ಮಲ್ಲಿಕಾರ್ಜುನ ಗದಗ ಅವರು ಪ್ರಸ್ತುತ ನಾಗನೂರು ರುದ್ರಾಕ್ಷಿ ಮಠದ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇವರು “ಟ್ರ್ಯಕ್ 3 ರೋಬೋ ಸಾಕರ್ ಲೀಗ್‌” ವಿಭಾಗದಲ್ಲಿ 22ಕ್ಕೂ ಹೆಚ್ಚು ದೇಶಗಳ ಪ್ರತಿಭಾವಂತ ತಂಡಗಳನ್ನು ಮೀರಿಸಿ ವಿಶ್ವ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಾಗಿ ಜಕಾರ್ತಾಕ್ಕೆ ತೆರಳುವ ಮೊದಲು ಇದೇ ಸ್ಪರ್ಧೆಯಲ್ಲಿ ಇವರು ಭಾರತದಲ್ಲಿ ನಂ.1 ಸ್ಥಾನವನ್ನೂ ಪಡೆದಿದ್ದರು.

ಕೋಡೇವರ್ನ “ಟ್ರ್ಯಕ್ 3 ರೋಬೋ ಸಾಕರ್ ಲೀಗ್‌” ವಿಭಾಗದಲ್ಲಿ ವಿಶ್ವ ನಂ.1 ಸ್ಥಾನ ಪಡೆಯುವುದು ಅತ್ಯಂತ ಪ್ರತಿಷ್ಠಿತ ಸಾಧನೆಯಾಗಿದೆ. ಈ ವಿಭಾಗದಲ್ಲಿ ರೋಬೋಟಿಕ್ಸ್ನ ಯಾಂತ್ರಿಕ ಮತ್ತು ಎಲೆಕ್ಟ್ರಾನಿಕ್ ಕಾರ್ಯವಿಧಾನಗಳ ಆಳವಾದ ತಿಳುವಳಿಕೆ, ಪ್ರೋಗ್ರಾಮಿಂಗ್ ಪರಿಣಿತಿ ಹಾಗೂ ನೈಜ ಸಮಯದಲ್ಲಿ ತಂತ್ರಾತ್ಮಕವಾಗಿ ರೋಬೋಟ್ಗಳನ್ನು ನಿಯಂತ್ರಿಸುವ ಸಾಮರ್ಥ್ಯ ಅಗತ್ಯವಾಗಿರುತ್ತದೆ. ಅತ್ಯಾಧುನಿಕ ಸೌಲಭ್ಯಗಳು ಮತ್ತು ಹೆಚ್ಚಿನ ಆರ್ಥಿಕ ಸಂಪನ್ಮೂಲಗಳನ್ನು ಹೊಂದಿರುವ ಅಂತರರಾಷ್ಟ್ರೀಯ ಶಾಲೆಗಳೊಂದಿಗೆ ಸ್ಪರ್ಧಿಸಿ, ಕಾಯಕ, ದಾಸೋಹ ಹಾಗೂ ಪ್ರಸಾದ ವೆಂಬ ಶಿಕ್ಷಣ ವ್ಯವಸ್ಥೆಯ ಬೆಂಬಲದಿಂದ ಬೆಳೆದ ಈ ವಿದ್ಯಾರ್ಥಿಗಳ ಜಯವು ಬುದ್ಧಿವಂತಿಕೆ, ಪರಿಶ್ರಮ ಮತ್ತು ಆಳವಾದ ಅಧ್ಯಯನಕ್ಕೆ ಸಿಕ್ಕ ವಿಜಯವಾಗಿದೆ.ಇವರ ಈ ಸಾಧನೆ ಭಾರತವೂ ಸಹಿತ ಆಧುನಿಕ ರೋಬೋಟಿಕ್ಸ್‌, ವಿಜ್ಞಾನ, ತಂತ್ರಜ್ಞಾನ ಹಾಗೂ ಇಂಜನಿಯರಿಂಗ್ ಕ್ಷೇತ್ರದಲ್ಲಿ ದಾಪುಗಾಲು ಇಡುತ್ತಿದೆ ಎಂಬುದರ ಪ್ರತೀಕವಾಗಿದೆ.

ಸ್ಟೀಮ್ ಎಚ್ ತರಬೇತಿ ಮತ್ತು ಸಂಶೋಧನಾ ಪ್ರತಿಷ್ಠಾನವು ಆಯೋಜಿಸಿದ್ದ “ಜೂನಿಯರ್ ಸೈಂಟಿಸ್ಟ್‌ ಪ್ರೋಗ್ರಾಂ”ನಲ್ಲಿ ಆಯ್ಕೆಯಾಗುವುದರ ಮೂಲಕ  ತಮ್ಮ ಸಂಶೋಧನಾ ಪಯಣ ಪ್ರಾರಂಭಿಸಿರುವ ವಿದ್ಯಾರ್ಥಿಗಳಿಗೆ  ಟ್ರಾನ್ಸ್‌ ಡಿಸಿಪ್ಲೇನರಿ ಲರ್ನಿಂಗ್ ಸೊಲುಷನ್ಸ ಸಂಸ್ಥೆ ಮಾರ್ಗದರ್ಶನ ಮಾಡಿದೆ. ವಿದ್ಯಾರ್ಥಿಗಳ ಈ ವಿಶೇಷ ಸಾಧನೆಗೆ ಬೆನ್ನೆಲುಬಾಗಿ ನಿಂತು ಆರ್ಥಿಕ ಸಹಾಯ ಸಹಕಾರ ನೀಡಿದ ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಸಂಸ್ಥೆಯ ಕಾರ್ಯದರ್ಶಿ ಎಸ್‌.ಪಿ.ಹಿರೇಮಠ, ಟಿ.ಎಲ್‌.ಎಸ್‌. ಸಂಸ್ಥೆಯ ಸಂಸ್ಥಾಪಕರಾದ ಬಾಳಪ್ಪ ಬಿ. ಪಾಟೀಲ, ಸರೋಜಿನಿ ಬಿ. ಪಾಟೀಲ, ಮಾರ್ಗದರ್ಶಕ ದಯಾನಂದ ಮಗದುಮ ಸೇರಿದಂತೆ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು ಹಾಗೂ ಸಂಯೋಜಕರು ಅಪಾರ ಸಂತಸ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.