ಇಂದು ವಿಧಾನಸೌಧದಲ್ಲಿ ರಾಜ್ಯ ಸಚಿವ ಸಂಪುಟ ಸಬೆ

ಬೆಂಗಳೂರು, ಸೆ 6:  ಇಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಭೆಯಲ್ಲಿ ಹಲವು ಮಹತ್ವ ವಿಷಯಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ.  ಬರ, ಪ್ರವಾಹ ಪರಿಸ್ಥಿತಿ ಮತ್ತು ನೈಸರ್ಗಿಕ ವಿಪತ್ತುಗಳಿಂದ ಉದ್ಭವಿಸುವ ಪರಿಸ್ಥಿತಿ ಪರಾಮರ್ಶಿಸಲು ಉಪ ಸಚಿವ ಸಂಪುಟ ಸಮಿತಿ ರಚನೆ, ಕೃಷಿ, ತೋಟಗಾರಿಕಾ ಉತ್ಪನ್ನಗಳ ಬೆಲೆ ಕುಸಿದಾಗ ಸ್ಥಿರೀಕರಣಕ್ಕಾಗಿ ಬೆಂಬಲ ಬೆಲೆ ನಿಗಧಿಪಡಿಸುವುದಕ್ಕೆ ಪರಿಶೀಲಿಸಲು ಉಪ ಸಚಿವ ಸಂಪುಟ ರಚನೆ, ಸೌರ ನೀತಿ 2014-21 ತಿದ್ದುಪಡಿ ಮಾಡುವ ಕುರಿತು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗುತ್ತದೆ.  ಆರನೇ ವೇತನ ಆಯೋಗ ಶಿಫಾರಸ್ಸಿನಂತೆ ಕೆಲವೊಂದು ವೃಂದದ ವೇತನ ಶ್ರೇಣಿಗಳನ್ನು ಪರಿಷ್ಕರಿಸುವ ಕುರಿತು ಆದೇಶ ಹೊರಡಿಸುವ ಬಗ್ಗೆ, ಕೊಂಕಣ ರೈಲ್ವೆ ನಿಗಮ ನಿಯಮಕ್ಕೆ ಎರಡನೇ ಹಕ್ಕುಗಳ ವಿತರಣೆಯ ವಂತಿಕೆಯಾಗಿ 29 ಕೋಟಿ ರೂ. ಗಳನ್ನು ಸರ್ಕಾರದಿಂದ ನೀಡುವ ಕುರಿತು,  ಕೊಪ್ಪಳ-ಗಿಣಿಗೇರಾ ರೈಲು ನಿಲ್ದಾಣ ಬರುವ ಎಲ್ಸಿ ಸಂಖ್ಯೆ 66 ರಲ್ಲಿ ಬರುವ 117/600-700ರಲ್ಲಿ ಮೇಲು ಸೇತುವೆ ನಿರ್ಮಾಣ ಕಾಮಗಾರಿಯನ್ನು 23.65 ಕೋಟಿ ಮೊತ್ತದಲ್ಲಿ ಕೈಗೆತ್ತಿಕೊಳ್ಳುವ ಬಗ್ಗೆ ಕೂಡ ಚರ್ಚಿಸಲಾಗುವುದು.  ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರುಗಳು ಪೈಕಿ ಒಬ್ಬ ಸದಸ್ಯರ ಕಚೇರಿಯನ್ನು ಧಾರವಾಡಕ್ಕೆ ಸ್ಥಳಾಂತರಗೊಳಿಸುವ ಕುರಿತು, ಸಿಎಂಎ ನ್ಯಾಯಾಲಯದ ಬಹುಮಹಡಿ ವಾಹನ ನಿಲುಗಡೆಯ ಕಟ್ಟಡದ ಮೇಲ್ಬಾಗದಲ್ಲಿ 4 ರಿಂದ 6 ನೇ ಅಂತಸ್ತುಗಳಲ್ಲಿ  ನ್ಯಾಯಾಲಯದ ಕೊಠಡಿಗಳನ್ನು ನಿರ್ಮಾಣ ಹಾಗು ಇತರ ಪೂರಕ ಕಾಮಗಾರಿಗಳಿಗೆ  35 ಕೋಟಿ ರೂ. ಅನುಮೋದನೆ ಪಡೆಯುವ ಬಗ್ಗೆ ಕೂಡ ನಿರ್ಣಯ ತೆಗೆದುಕೊಳ್ಳಲಾಗುತ್ತದೆ.  ಬಿಬಿಎಂಪಿ ಹೊರತುಪಡಿಸಿ ಮಾದರಿ ಘನತಾಜ್ಯ  ನಿರ್ವಹಣಾ ಉಪ ವಿಧಿಗಳು -2019ಕ್ಕೆ ಅನುಮೋದನೆ ಪಡೆಯುವ ಬಗ್ಗೆ, 2019-20ನೇ ಸಾಲಿನ ಐಈಬಿಆರ್ ಅಡಿಯಲ್ಲಿ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಅವಧಿಗಳ ಸಾಲಗಳ ಮೂಲಕ 735 ಕೋಟಿ ರೂ. ಸಂಗ್ರಹಿಸಲು ಅನುಮೋದನೆ ನೀಡುವ ಕುರಿತು, 2019-20ನೇ ಸಾಲಿಗೆ ಐಈಬಿಆರ್ ಅಡಿಯಲ್ಲಿ ಕಾವೇರಿ ನೀರಾವರಿ ನಿಗಮಕ್ಕೆ ಅವಧಿಗಳ ಸಾಲಗಳ ಮೂಲಕ ಮೊದಲ ಕಂತಿನಲ್ಲಿ 250 ಕೋಟಿ ರೂ. ಹಣವನ್ನು ಸಂಗ್ರಹಿಸಲು ಅನುಮೋದನೆ ನೀಡುವ ಕುರಿತು ಚರ್ಚಿಸಲಾಗುವುದು ಎಂದು ಮೂಲಗಳಿಂದ ತಿಳಿದುಬಂದಿದೆ.