ಬೆಂಗಳೂರು, ಜ. 24, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವರಾಗಿದ್ದ ಶ್ರೀರಾಮುಲು ಅವರ ಕನಸಿನ ಕೂಸು 108 ಆರೋಗ್ಯ ಕವಚ ವಾಹನ ಸೌಲಭ್ಯ ಜಾರಿಗೆ ತಂದಿದ್ದು ಈಗ ಇತಿಹಾಸ. 108 ವಾಹನ ಶ್ರೀರಾಮುಲುಗೆ ಜನಪ್ರಿಯತೆಯ ಜೊತೆಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತ್ತು.ಈಗ ಅಂತಹದ್ದೇ ಜನಪ್ರಿಯತೆಯನ್ನು ನೀಡಬಲ್ಲ ಮತ್ತೊಂದು ವಾಹನವನ್ನು ಶ್ರೀರಾಮುಲು ಈ ಸರ್ಕಾರದಲ್ಲಿ ಸಚಿವರಾಗಿ ಬಿಡಲು ಹೊರಟಿದ್ದಾರೆ.'ಪಿಂಕ್ ಬಸ್' ಹೆಸರಿನ ಮೊಬೈಲ್ ವಾಹನವನ್ನು ಗ್ರಾಮೀಣ ಭಾಗದ ಜನರಿಗಾಗಿ ಆರೋಗ್ಯ ಇಲಾಖೆಯಡಿ ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಲಾಗುತ್ತಿದೆ.
2008 ರ ನವಂಬರ್ 01 ರಂದು ಜಾರಿಯಾದ "108 ಆರೋಗ್ಯ ಕವಚ" ಸೇವೆಯು ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶದ ಜನರಿಗೆ ಸಮಗ್ರ ತುರ್ತು ಚಿಕಿತ್ಸೆ ಸೇವೆಯನ್ನು ನೀಡುವ ಸಲುವಾಗಿ ಕಾರ್ಯನಿರ್ವಹಿಸುತ್ತಿದೆ.
ಆದರೆ ಪಿಂಕ್ ಬಸ್ ವಿಶೇಷವಾಗಿ ಗ್ರಾಮೀಣ ಭಾಗದ ಕ್ಯಾನ್ಸರ್ ರೋಗಿಗಳಿಗಾಗಿ ಜಾರಿಗೊಳಿಸಲಾಗುತ್ತಿದೆ. ಈ ಪಿಂಕ್ ಸಂಚಾರಿ ಬಸ್ ಕ್ಯಾನ್ಸರ್ ತಪಾಸಣೆಯ ಪ್ರಯೋಗಾಲಯ ಹೊಂದಿರುತ್ತದೆ. ಸುಮಾರು 4-5 ಸಿಬ್ಬಂದಿ ಕೆಲಸ ನಿರ್ವಹಿಸಲಿದ್ದಾರೆ. ಮಹಿಳೆಯರಲ್ಲಿ ಇತ್ತೀಚೆಗೆ ಸಾಮಾನ್ಯವಾಗಿ ಕಾಣಸಿಗುತ್ತಿರುವ ಸ್ತನ ಗರ್ಭಕೋಶ ಕ್ಯಾನ್ಸರ್ ಸೇರಿದಂತೆ ಎಲ್ಲಾ ರೀತಿಯ ಕ್ಯಾನ್ಸರ್ ಪರೀಕ್ಷೆ ಪಿಂಕ್ ಪ್ರಯೋಗಾಲಯದಲ್ಲಿ ನಡೆಯಲಿದೆ. ಮೆಮೋಗ್ರಫಿ ಪರೀಕ್ಷೆಗಳನ್ನು ಮಾಡಿಸಲು ದೂರದ ಗ್ರಾಮೀಣ ರೋಗಿಗಳು ಜಿಲ್ಲಾ ಕೇಂದ್ರ ಆಸ್ಪತ್ರೆಗಳಿಗೆ ಹೋಗುವುದು ಪಿಂಕ್ ವಾಹನದಿಂದ ತಪ್ಪಲಿದೆ. ಪಿಂಕ್ ವಾಹನದ ರೂಪುರೇಷೆ ಹೇಗಿರಲಿದೆ ?ಯೋಜನೆಗೆ ತಗಲುವ ವೆಚ್ಚ ಸೇರಿದಂತೆ ಇನ್ನಷ್ಟು ವಿವರಗಳು ಬಜೆಟ್‌ನಲ್ಲಿ ಹೊರಬೀಳಲಿದೆ.