ಬಕ್ರೀದ್ ವೇಳೆ ಗೋಹತ್ಯೆ ತಡೆಗೆ ತುರ್ತು ಕ್ರಮ ಕೈಗೊಳ್ಳಲು ಆಗ್ರಹಿಸಿ ಶ್ರೀರಾಮಸೇನೆ ಮನವಿ

ಬಕ್ರೀದ್ ವೇಳೆ ಗೋಹತ್ಯೆ ತಡೆಗೆ ತುರ್ತು ಕ್ರಮ ಕೈಗೊಳ್ಳಲು ಆಗ್ರಹಿಸಿ ಶ್ರೀರಾಮಸೇನೆ ಮನವಿ  Sri Rama Sena appeals for urgent action to prevent cow slaughter during Bakrid

ಬೆಳಗಾವಿ 21: ಬಕ್ರೀದ್ ಹಬ್ಬ ಮೇ 28ರಂದು ಜರುಗಲಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಅಕ್ರಮ ಗೋವುಗಳ ಸಾಗಾಟ, ಕಾನೂನುಬಾಹಿರ ಗೋಹತ್ಯೆ ಹಾಗೂ ಅನಧಿಕೃತ ಕಸಾಯಿಖಾನೆಗಳಿಗೆ ತಡೆಗೆ ಆಗ್ರಹಿಸಿ ಶ್ರೀರಾಮಸೇನೆ ಶ್ರೀರಾಮಸೇನೆ ಉತ್ತರ ಕರ್ನಾಟಕ ರಾಜ್ಯಾಧ್ಯಕ್ಷ ರವಿಕುಮಾರ್ ಕೊಕೀತಕರ್ ನೇತೃತ್ವದ ನಿಯೋಗವು ಗುರುವಾರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.  

ಮನವಿಯಲ್ಲಿ ಬೆಳಗಾವಿ ಹಬ್ಬದ ನೆಪದಲ್ಲಿ ಜಿಲ್ಲೆಯ ವಿವಿಧೆಡೆ ಜಾನುವಾರುಗಳ ಕಳ್ಳ ಸಾಗಾಣಿಕೆ ಮತ್ತು ಗೋಹತ್ಯೆ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದ್ದು, ಇದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಭಾರತ ಸಂವಿಧಾನದ ಕಲಂ 48ರ ಅಡಿಯಲ್ಲಿ ಗೋವುಗಳು ಹಾಗೂ ಕೃಷಿ ಉಪಯುಕ್ತ ಜಾನುವಾರುಗಳ ಸಂರಕ್ಷಣೆ ಸರ್ಕಾರದ ಹೊಣೆಯಾಗಿದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 2020ರನ್ವಯ ಗೋವುಗಳ ಅಕ್ರಮ ಸಾಗಾಟ, ಅನಧಿಕೃತ ಮತ್ತು ಕಾನೂನು ಬಾಹಿರ ವಧೆಯಾಗದಂತೆ ಕ್ರಮಕ್ಯಗೊಳ್ಳಬೇಕು. ಜಿಲ್ಲೆಯ ಎಲ್ಲ ಚೆಕ್ ಪೋಸ್ಟ್‌ಗಳು, ಗಡಿಭಾಗ ಮತ್ತು ಪ್ರಮುಖ ರಸ್ತೆಗಳಲಲಿ 24ಷಥ7 ವಿಶೇಷ ತಪಾಸಣೆ, ಗೋವುಗಳ ಸಾಗಾಟ ವಾಹನಗಳ ದಾಖಲೆ, ಪರವಾನಗಿ ಮೊದಲಾದ ಪತ್ರಗಳನ್ನು ಪರೀಶೀಲಿಸಿಬೇಕು.

ಅನಧಿಕೃತ ಕಸಾಯಿಖಾನೆ, ಅನುಮಾನಾಸ್ಪದ ಗೋದಾಮು ಖಾಸಗಿ ಸ್ಥಳಗಳ ಮೇಲೆ ನಿಗಾ ವಹಿಸಬೇಕು. ಪೊಲೀಸ್  ಇಲಾಖೆ, ಪಶುಪಾಲನಾ ಇಲಾಖೆ, ಸ್ಥಳೀಯ ಆಡಳಿತ ಜಂಟಿ ಕಾರ್ಯಪಡೆ ರಚಿಸಿ ನಿರಂತರ ನಿಗಾವಹಿಸಬೇಕು. ಕಾನೂನು ಉಲ್ಲಂಘಿಸುವವರ ಮೇಲೆ ಎಫ್‌ಆಯ್‌ಆರ್ ದಾಖಲಿಸಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ತಕ್ಷಣವೇ ತುರ್ತು ಕ್ರಮ ಕೈಗೊಳ್ಳಬೇಕು. ಶಾಂತಿ ಭಂಗ ಉಂಟುಮಾಡುವ ಸಮಾಜಘಾತುಕ ವ್ಯಕ್ತಿಗಳ ವಿರುದ್ಧ ಜಿಲ್ಲಾಡಳಿತವು ನಿರ್ಬಂಧಕಾಸ್ತ್ರ ಪ್ರಯೋಗಿಸಬೇಕು ಎಂದು ರವಿಕುಮಾರ್ ಕೊಕೀತಕರ್ ಒತ್ತಾಯಿಸಿದರು.  

 ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹಾಗೂ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹರಡುವವರ ಮೇಲೆ ಪೊಲೀಸ್ ಇಲಾಖೆ ವಿಶೇಷ ನಿಗಾ ಇಡಬೇಕು. ಸಾರ್ವಜನಿಕರಿಂದ ದೂರು ಸ್ವೀಕರಿಸಲು ತಾಲೂಕು ಮಟ್ಟದಲ್ಲಿ ಸಹಾಯವಾಣಿ ಹಾಗೂ ವಿಶೇಷ ನಿಯಂತ್ರಣ ಕೊಠಡಿ ಸ್ಥಾಪಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗೆ ಹೈ ಅಲರ್ಟ್‌ ಘೋಷಿಸಬೇಕು, ಒಂದು ವೇಳೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾನೂನು ಸುವ್ಯವಸ್ಥೆಗೆ ಭಂಗ ಬಂದರೆ ಅದಕ್ಕೆ ಪಾಲನೆ ಮಾಡದ ಅಧಿಕಾರಿಗಳೇ ನೇರ ಹೊಣೆ ಎಂದು ಎಚ್ಚರಿಸಲಾಗಿದೆ.  ಶ್ರೀರಾಮಸೇನೆ ಉತ್ತರ ಕರ್ನಾಟಕ ಉಪಾಧ್ಯಕ್ಷ ವಿನಯ್ ಕುಮಾರ್ ಅಂಗ್ರೋಳ್ಳಿ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.