ಐಪಿಎಲ್‌ 13ನೇ ಆವೃತ್ತಿ ಆತಿಥ್ಯಕ್ಕೆ ಶ್ರೀಲಂಕಾ ಪ್ರಸ್ತಾಪ

ಕೊಲಂಬೊ, ಏ 17,ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅನಿರ್ದಿಷ್ಟಾವಧಿಗೆ ಇಂಡಿಯನ್ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಅನ್ನು ಅಮಾನತುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಐಪಿಎಲ್ ನ 13 ನೇ ಆವೃತ್ತಿಗೆ ಆತಿಥ್ಯ ವಹಿಸುವ ಬಗ್ಗೆ ಶ್ರೀಲಂಕಾ ಪ್ರಸ್ತಾಪ ಸಲ್ಲಿಸಿದೆ. 2020ರ ಐಪಿಎಲ್ ಆವೃತ್ತಿಯು ಮಾರ್ಚ್ 29 ರಿಂದ ಪ್ರಾರಂಭವಾಗಬೇಕಿತ್ತು. ಆದರೆ, ಕೊರೊನಾ ವೈರಸ್ ಏಕಾಏಕಿ ಸಂಭವಿಸಿದ್ದರಿಂದ ಐಪಿಎಲ್‌ ಅನ್ನು ಏಪ್ರಿಲ್ 15ಕ್ಕೆ ಮುಂದೂಡಲಾಗಿತ್ತು. ಈಗ ಭಾರತದಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಅನ್ನು ಮೇ 3 ರವರೆಗೆ ವಿಸ್ತರಿಸುವುದರೊಂದಿಗೆ ಶ್ರೀಮಂತ ಫ್ರಾಂಚೈಸಿ ಲೀಗ್‌ ಅನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸಲಾಗಿದೆ.
ಐಪಿಎಲ್ ಅನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿರುವುದರಿಂದ  ಬಿಸಿಸಿಐ ಮತ್ತು ಅದರ ಪಾಲುದಾರರಿಗೆ 500 ದಶಲಕ್ಷ ಡಾಲರ್‌ ಮೊತ್ತ ನಷ್ಟ ಉಂಟಾಗಲಿದೆ," ಎಂದು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಶಮ್ಮಿ ಸಿಲ್ವಾ ದೈನಂದಿನ ಲಂಕದೀಪಾಗೆ ಹೇಳಿರುವುದನ್ನು ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ವರದಿ ಮಾಡಿದೆ. "ಆದ್ದರಿಂದ ಮತ್ತೊಂದು ದೇಶದಲ್ಲಿ ಐಪಿಎಲ್‌ ಟೂರ್ನಿಯನ್ನು  ಆಯೋಜಿಸುವ ಮೂಲಕ ಆ ನಷ್ಟಗಳನ್ನು ಕಡಿಮೆ ಮಾಡಬಹುದು," ಎಂದು ಅಭಿಪ್ರಾಯಪಟ್ಟಿದ್ದಾರೆ." ಶ್ರೀಲಂಕಾದಲ್ಲಿ ಐಪಿಎಲ್‌ ನಡೆದರೆ ಭಾರತೀಯ ಪ್ರೇಕ್ಷಕರು ಟಿವಿಯಲ್ಲಿ ಆಟಗಳನ್ನು ನೋಡುವುದು ಸುಲಭ. ಇದಕ್ಕೆ ಪೂರ್ವ ನಿದರ್ಶನವಿದೆ. ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ ಆಯೋಜಿಸಲಾಗಿತ್ತು. ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಸ್ಪಂದನೆಗೆ ನಾವು ಕಾಯುತ್ತಿದ್ದೇವೆ," ಎಂದು ಅವರು ಹೇಳಿದ್ದಾರೆ.