ಮಾನಸಿಕ, ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ: ಜಡಿಮಠದ ಶ್ರೀ

ಮಾನಸಿಕ, ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ: ಜಡಿಮಠದ ಶ್ರೀ  Sports aid mental and physical fitness: Sri of Jadimatha


ದೇವರಹಿಪ್ಪರಗಿ 03: ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಸದೃಢತೆ ದೊರೆಯಲಿದ್ದು, ಯುವಜನರು ಕ್ರೀಡಾಕೂಟಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಜಡಿಮಠದ ಜಡಿ ಸಿದ್ದೇಶ್ವರ ಶಿವಾಚಾರ್ಯರು ಕರೆ ನೀಡಿದರು. ಪಟ್ಟಣದ ವೆಂಕಟೇಶ್ವರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 2026-27ನೇ ಸಾಲಿನ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಯುವಜನರು ದುಶ್ಚಟಗಳಿಂದ ದೂರವಿದ್ದು, ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು.

ಕ್ರೀಡೆಯಿಂದ ಶಿಸ್ತು, ಆತ್ಮವಿಶ್ವಾಸ ಹಾಗೂ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಲು ಸಾಧ್ಯ ಎಂದು ಹೇಳಿದರು. ಪಪಂ ಉಪಾಧ್ಯಕ್ಷ ರಮೇಶ ಮಸಿಬಿನಾಳ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ. ಕ್ರೀಡೆ ಒತ್ತಡ ನಿವಾರಣೆಗೆ ಸಹಕಾರಿಯಾಗಿದ್ದು, ಪ್ರತಿಯೊಬ್ಬರೂ ಕ್ರೀಡೆಗೆ ಆದ್ಯತೆ ನೀಡಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಪಂ ಅಧ್ಯಕ್ಷ ಎಲ್‌.ಆರ್‌. ಅಂಗಡಿ ವಹಿಸಿದ್ದರು. ಪ್ರಾಚಾರ್ಯ ಎಸ್‌.ಡಿ. ರಜಪೂತ, ಮುಖ್ಯಗುರು ನಾಗರಾಜ ಅಂಗಡಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್‌.ಎ. ಬಸರಕೋಡ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.