ಶ್ರಾವಣ ಮಾಸದಲ್ಲಿ ಅಧ್ಯಾತ್ಮಿಕ ಚಿಂತನೆಗಳು ಅವಶ್ಯಕ: ಚಿದಾನಂದ ಶಾಸ್ತ್ರೀಗಳು

ಶ್ರಾವಣ ಮಾಸದಲ್ಲಿ ಅಧ್ಯಾತ್ಮಿಕ ಚಿಂತನೆಗಳು ಅವಶ್ಯಕ: ಚಿದಾನಂದ ಶಾಸ್ತ್ರೀಗಳು Spiritual thoughts are necessary during the month of Shravan: Chidananda Shastri

ವಿಜಯಪುರ 28: ಶ್ರಾವಣ ಮಾಸವು ಭಾರತದಲ್ಲಿ ಆಚರಿಸಲ್ಪಡುವ ಹಬ್ಬಗಳಲ್ಲಿ ವಿಶಿಷ್ಟವಾಗಿದೆ ನಾವು ಪ್ರತಿದಿನವು ಶಿವ ಧ್ಯಾನ, ತಪಸ್ಸು, ಪ್ರಾರ್ಥನೆ ಮತ್ತು ಭಕ್ತಿ-ಭಾವದಿಂದ ಪೂಜಿಸುವ ಕಾರ್ಯ ನಡೆಯಬೇಕು. ಮನದ ಕಾಮನೆಗಳನ್ನು ಈಡೇರಿಸಿಕೊಳ್ಳಲು ಮತ್ತು ಜೀವನದಲ್ಲಿ ಸಂತೃಪ್ತಿ ಭಾವ ಹೊಂದಲು ಪರಮ ಶಿವನನ್ನು ನೆನೆಯುವಂತಾಗಬೇಕು. ನಮ್ಮ ಭಾವ, ಭಕುತಿ, ಇರುವಿಕೆ ಮತ್ತು ಸಮಾಜದಲ್ಲಿ ಇತರ ಒಳಿತಿಗಾಗಿ ಬದುಕುವ ನಡೆಯಾಗಿದೆ. ಅದಕ್ಕಾಗಿ ಜೀವನದಲ್ಲಿ ಸಹಾಯ ಮಾಡುವ ಮನಸ್ಸು ಇದ್ದರೆ ಒಳ್ಳೆಯದನ್ನು ಮಾಡುತ್ತಾ ಸಾರ್ಥಕತೆಯನ್ನು ಪಡೆಯಬೇಕೆಂದು ವೇದಮೂರ್ತಿ ಚಿದಾನಂದ ಶಾಸ್ತ್ರೀಗಳು ತೊರವಿ ಇವರು ಅಭಿಪ್ರಾಯಪಟ್ಟರು.  

ಅವರು ಸೇನಾ ನಗರದಲ್ಲಿರುವ ಶಿವಾಲಯ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡ ಶಿರಹಟ್ಟಿಯ ಜಗದ್ಗುರು ಫಕೀರೇಶ್ವರ ಮಹಾಶಿವಯೋಗಿಗಳ ಚರಿತಾಮೃತ ಕುರಿತು ಪುರಾಣದಲ್ಲಿ ಪ್ರವಚನ ನೀಡಿ ಅವರು ಮಾತನಾಡುತ್ತಿದ್ದರು.  

ಶ್ರಾವಣ ಮಾಸವೆಂದರೆ ಶ್ರವಣ ಮಾಸ. ಈ ತಿಂಗಳಲ್ಲಿ ಶಿವನನ್ನು ಆರಾಧಿಸಿದರೆ ಶುಭ ಫಲವು ಪ್ರಾಪ್ತವಾಗುತ್ತದೆ. ಜನರು ಅಧ್ಯಾತ್ಮಿಕ, ವೈಚಾರಿಕ, ಜೀವನ-ಮೌಲ್ಯಗಳು ಮತ್ತು ಸಾರ್ಥಕ ಬದುಕಿಗೆ ಅಗತ್ಯವಾದ ಸಂದೇಶಗಳನ್ನು ಅರಿತು ತಮ್ಮ ಜೀವನವನ್ನು ಪಾವನಗೊಳಿಸಲು ಈ ಮಾಸದಲ್ಲಿ ಪುರಾಣ, ಪ್ರವಚನ, ಕೀರ್ತನೆ, ಭಜನೆ ಮತ್ತು ಸತ್ಸಂಗದಂತಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಉತ್ತಮ ಕಾರ್ಯವಾಗಿದೆ. ಶಿವ ಪುರಾಣದಲ್ಲಿ ಉಲ್ಲೇಖಿಸಿದಂತೆ, ಶ್ರಾವಣ ಮಾಸದಲ್ಲಿ ಉಪವಾಸ ಮಾಡುವುದರಿಂದ ನಮ್ಮ ಕಾಮನೆಗಳು ಈಡೇರುತ್ತವೆ.  

ನಾವೆಲ್ಲರೂ ಪರಶಿವನ ಚಿಂತನೆ ಮಾಡುವುದೇ ಶ್ರಾವಣ ಮಾಸದ ಉದ್ಧೇಶವಾಗಿದೆ. ಶಿರಹಟ್ಟಿಯ ಜಗದ್ಗುರು ಫಕೀರೇಶ್ವರ ಮಹಾಶಿವಯೋಗಿಗಳು ತಮ್ಮ ಲೀಲೆಗಳ ಮೂಲಕ ಸಮಾಜದಲ್ಲಿ ಭಾವೈಕ್ಯತೆಯ ಮಂತ್ರವನ್ನು ಸಾರುತ್ತಾ, ಜಾತಿ, ಮತ-ಪಂಥ, ಪಂಗಡಗಳು ನಡುವಿರುವ ಕಂದಕವನ್ನು ಹೋಗಲಾಡಿಸುವಲ್ಲಿ ಶ್ರಮಿಸಿದವರು ಎಂದರು.  ಶಿವಪಥವ ಅರಿವೆಡೆ ಗುರುಪಥವೇ ಮೊದಲು. ಅದಕ್ಕಾಗಿ ಮನಸ್ಸೆಂಬ ಮರ್ಕಟವನ್ನು ಹತೋಟಿಯಲ್ಲಿಕೊಂಡು ಪರಮಾತ್ಮನ ನಾಮಸ್ಮರಣೆಯಲ್ಲಿ ತೊಡಗಬೇಕು. ಜೀವನದಲ್ಲಿ ಹಪಹಪಿ ಮತ್ತು ಚಂಚಲತೆಯಿಂದ ಹೊರಬಂದು ಬದುಕಿನಲ್ಲಿ ಸುಖ-ಶಾಂತಿ ಪಡೆಯಬೇಕು. ಸರ್ವೋ ಜನಾಃ ಸುಖೀನೋ ಭವಂತು ಎಂಬಂತೆ ಎಲ್ಲರೂ ಶಾಂತಿ-ಸೌಹಾರ್ಧತೆ, ಭಾತೃತ್ವ, ಸಹಕಾರ, ಪ್ರೀತಿ-ವಿಶ್ವಾಸ, ಭಾವೈಕ್ಯತೆ, ಸಾಮರಸ್ಯತೆ, ಧರ್ಮ ಸಹಿಂಷ್ಣುತೆಯೊಂದಿಗೆ ನಾವೆಲ್ಲರೂ ಒಂದೇ ಎಂಬ ಐಕ್ಯತೆಯ ಮಂತ್ರ ಜಪಿಸುತ್ತಾ, ಜೀವನದಲ್ಲಿ ಸುಖ-ಶಾಂತಿ, ನೆಮ್ಮದಿಯನ್ನು ದಯಪಾಲಿಸಲೆಂದು ಶಿವನಲ್ಲಿ ಪ್ರಾರ್ಥಿಸೋಣ ಎಂದರು.    

ದೇವಸ್ಥಾನದ ಅಧ್ಯಕ್ಷ ಗುರುಬಸಯ್ಯ ಹಿರೇಮಠ, ಹಿರಿಯರಾದ ವಿಠ್ಠಲ ಜಗತಾಪ, ಭರಮಣ್ಣ ಕಡಕೋಳ, ಬಸಯ್ಯ ಮಠಪತಿ, ಪ್ರೊ. ಬಿ.ವ್ಹಿ.ಕುಂಬಾರ, ರಾಜಶೇಖರ ಉಮರಾಣಿ, ಪ್ರೊ. ಎಂ.ಎಸ್‌.ಖೊದ್ನಾಪೂರ, ಪ್ರೊ. ಬಿ.ಎಸ್‌.ಬೆಳಗಲಿ, ಆರ್‌.ಜಿ.ಉತ್ತರಕರ, ಡಾ. ರಾಜಕುಮಾರ ಜೊಲ್ಲೆ, ಸಾಬು ಅಗ್ರಾಣಿ, ಶ್ರೀಶೈಲ ಬೀಳೂರ, ಅಲ್ಲಮಪ್ರಭು ಶಿರಹಟ್ಟಿ, ಶೋಭಾ ಚವ್ಹಾಣ, ಶಾಂತಾ ಕಪಾಳಿ, ಸಾವಿತ್ರಿ ಹಿರೇಮಠ ಇನ್ನಿತರರು ಸಹ ಉಪಸ್ಥಿತರಿದ್ದರು.  

ಗಾನ ತರಂಗದ ಸಂಗೀತ ಶಾಲೆಯ ಶ್ರೀಶೈಲ ಬೀಳೂರ, ಬಸಯ್ಯ ಮಠಪತಿ ಮತ್ತು ಬಿ.ಎಸ್‌.ಬೆಳಗಲಿ ಇವರಿಂದ ಭಜನೆ ಮತ್ತು ವಚನ ಗಾಯನ ಕಾರ್ಯಕ್ರಮ ಸುಶ್ರಾವ್ಯವಾಗಿ ಮೂಡಿಬಂದಿತು. ಈ ನವರಸಪುರ ಸುತ್ತಮುತ್ತಲಿನ ಬಡಾವಣೆಯ ಯುವಕರು, ಮಕ್ಕಳು, ಮಹಿಳೆಯರು, ಹಿರಿಯರು ಭಾಗವಹಿಸಿದ್ದರು.