ಗದಗ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ: ಮನೆ-ಮನೆ ಸಮೀಕ್ಷೆ ಆರಂಭ

ಗದಗ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ: ಮನೆ-ಮನೆ ಸಮೀಕ್ಷೆ ಆರಂಭ   Special revision of electoral rolls in Gadag district: Door-to-door survey begins

ಲೋಕದರ್ಶನ ವರದಿ 

ಗದಗ 30: ಸಮಸ್ತ ಕರ್ನಾಟಕ ರಾಜ್ಯಾದ್ಯೇಂತ ಕಳೆದ ಒಂದು ತಿಂಗಳಿನಿಂದ ಭಾರತೀಯ ಚುನಾವಣಾ ಆಯೋಗದ ವತಿಯಿಂದ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ  ಪ್ರಕ್ರಿಯೆಯು ಪ್ರತಿಯೊಂದು ವಾರ್ಡ ಹಾಗೂ ಬಡಾವಣೆಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಪ್ರತಿಯೊಂದು ಮನೆ-ಮನೆಗೆ ಭೇಟಿ ನೀಡಿ ಪರೀಶೀಲಿಸುವ ಹಾಗೂ ಅಂತಿಮ ಮತದಾರರ ಪಟ್ಟಿ ಸಿದ್ಧಪಡಿಸುವ ವಿವರವಾದ ಅಭಿಯಾನದಲ್ಲಿ ಸಕ್ರಿಯರಾಗಿರುವರು.

ಅವರ ಸಹಾಯಾರ್ಥಕವಾಗಿ ಸ್ಥಳೀಯ ರಾಜಕೀಯ ಪಕ್ಷದ ಮುಖಂಡರ ನೆರವಿನೊಂದಿಗೆ ಕಾರ್ಯಪ್ರವೃತರಾಗಿರುವರು. ಈಗಾಗಲೇ ಬಿ ಎಲ್ ಓ ಗಳಿಂದ ಮನೆ-ಮನೆ ಸಮೀಕ್ಷೆ ಹಾಗೂ ಎಸ್ ಐ ಆರ್ ನಮೂನೆಗಳ ಹಂಚಿಕೆಯ ಕಾರ್ಯಕ್ರಮದ ಅಡಿಯಲ್ಲಿ ಮತದಾರರನ್ನು 2002 ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ ಮಾಡಿ ಅವರ ಮಾಹಿತಿಯನ್ನು ಡಿಜಿಟಲೀಕರಣ ಮಾಡುವ ಕಾರ್ಯದಲ್ಲಿ ತೊಡಗಿರುವರು.  

ಇದರಿಂದ ಸಮಸ್ತ ರಾಜ್ಯದ ನಾಗರಿಕರಿಗೆ ತಮ್ಮ ಅಮೂಲ್ಯವಾದ ಮತದಾನದ ಹಕ್ಕನ್ನು ಪಡೆಯುವದರೊಂದಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ದೊರಕುವ ಪ್ರತಿಯೊಂದು ಸಾಮಾಜಿಕ ಭದ್ರತಾ ಯೋಜನೆಗಳಾದ ಪಂಚ ಗ್ಯಾರಂಟಿ ಯೋಜನೆ, ವೃದ್ಯಾಪ್ಯ ವೇತನ, ವಿಕಲಚೇತನರ ವೇತನ ವಿಧವಾ ವೇತನ ಹಾಗೂ ಇನ್ನಿತರೇ ಸರಕಾರದಿಂದ ನಾಡಿನ ನಾಗರಿಕರ ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲೀಕರಣದ ಮೂಲೋದ್ದೇಶದೊಂದಿಗೆ ಅನುಷ್ಠಾನಗೊಳಿಸಲಾದ ಸೌಲಭ್ಯಗಳನ್ನು ಸುರಳಿತವಾಗಿ, ನಿರಾತಂಕವಾಗಿ ಪಡೆಯಲು ನೆರವುದಾಯಕವಾಗುತ್ತದೆ. 

ಈ ಒಂದು ವಿಶೇಷ ಅಭಿಯಾನವು ಇದೇ ದಿನಾಂಕ ಆಗಸ್ಟ್‌ 8 ರವರೆಗೂ ಮನೆ ಮನೆ ಸಮೀಕ್ಷೆ ಹಾಗೂ ಅರ್ಜಿ ಸ್ವೀಕೃತಿ ಪ್ರಕ್ರಿಯೆಯು ನಡೆಯಲಿದ್ದು,ಮತದಾರರು ತಮ್ಮ ಮಾಹಿತಿಗಳನ್ನು ಸರಿಯಾಗಿ ಪರೀಶೀಲಿಸಿ, ಮತದಾರರ ಪಟ್ಟಿಯನ್ನು ಪರಿಶುದ್ಧಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಬೂತ್ ಮಟ್ಟದ ಅಧಿಕಾರಿಗಳು ಮನೆಗಳಿಗೆ ಬಂದು ವಯಸ್ಸು, ವಿಳಾಸ ಮತ್ತು ಕುಟುಂಬದ ವಿವರಗಳನ್ನು ಪರೀಶೀಲಿಸುತ್ತಿದ್ದಾರೆ.

ಈಗಾಗಲೇ ವೋಟರ್ ಐಡಿ ಹೊಂದಿರುವವರು ಕೂಡ ತಮ್ಮ ಮಾಹಿತಿ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಅತ್ಯಾವಶ್ಯಕವಾಗಿದೆ. ಆದುದರಿಂದ ಮತದಾರ ಭಾಂಧವರು ಎಸ್ ಐ ಆರ್ ಪರಿಷ್ಕರಣೆಯಲ್ಲಿ ಕೊನೆಯ ಅವಧಿಯವರೆಗೂ ಕಾಯದೇ ಅಂತಿಮ ಗಡುವಿನೊಳಗೆ ತಮ್ಮ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಭಾಗವಹಿಸಬೇಕೆಂದು ಗದಗ ಬೆಟಗೇರಿ ಶಹರ ಕಾಂಗ್ರೇಸ್ ಸಮಿತಿಯ ಮಾಧ್ಯಮ ವಕ್ತಾರರಾದ ರಾಘವೇಂದ್ರ ಪಾಲನಕರ ಜನಸ್ಪಂಧನೆಯನ್ನು ವ್ಯಕ್ತಪಡಿಸಿರುತ್ತಾರೆ.