ಬೆಂಗಳೂರು, ಅ 5: ಬೆಂಗಳೂರಿನಲ್ಲಿ ಬಂಧಿತರಾಗಿದ್ದ ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ" ಸಂಘಟನೆಯ ಮೂವರು ಉಗ್ರರ ಡಿಎನ್ಎ ಪರೀಕ್ಷೆಗೆ ಎನ್ ಐ ಎ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ.
ಈ ಸಂಬಂಧ ಎನ್ ಐ ಎ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ಮೇಲಿನ ಕಾಯ್ದಿರಿಸಿದ್ದ ಆದೇಶವನ್ನು ಪ್ರಕಟಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ತ್ಯಾಗರಾಜ ಎನ್. ಇನವಳ್ಳಿ, ಕಾನೂನು ಪ್ರಕಾರ ವೈದ್ಯಕೀಯ ತಪಾಸಣೆ ಹಾಗೂ ಡಿಎನ್ಎ ಪರೀಕ್ಷೆ ನಡೆಸಲು ಎನ್ಐಎ ಅಧಿಕಾರಿಗಳಿಗೆ ಅನುಮತಿ ನೀಡಿದ್ದಾರೆ.
ಎನ್ಐಎ ಪರ ವಕೀಲರು ಪಿ.ಪ್ರಸನ್ನಕುಮಾರ್, ಆರೋಪಿಗಳು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಅರಣ್ಯ ಪ್ರದೇಶದ ಗುಹೆಗಳಲ್ಲಿ ಪರೀಕ್ಷಾರ್ಥ ರಾಕೆಟ್ ಗಳನ್ನು ಉಡಾವಣೆ ಮಾಡಿದ್ದಾರೆ. ಆರೋಪಿಗಳಿಂದ ಅತ್ಯಾಧುನಿಕ ಗ್ರೆನೇಡ್ ಮತ್ತು ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು.
ತನಿಖೆ ವೇಳೆ ಅರಣ್ಯ ಪ್ರದೇಶ ಮತ್ತು ಗುಹೆಗಳಲ್ಲಿ ಹಾಗೂ ಸ್ಫೋಟಕ ವಸ್ತಯಗಳ ಮೇಲೆ ಹೆಪ್ಪುಗಟ್ಟಿದ ರಕ್ತದ ಕಲೆಗಳು, ಬೆರಳಚ್ಚುಗಳು ಪತ್ತೆಯಾಗಿವೆ. ಇವು ಆರೋಪಿಗಳದ್ದೇ ಹೌದೋ ಅಲ್ಲವೊ ಎಂಬುದನ್ನು ಜೊತೆ ಪರೀಕ್ಷಿಸಬೇಕು. ಆದ್ದರಿಂದ, ಡಿಎನ್ಎ ಪರೀಕ್ಷೆ ಅಗತ್ಯವಿದ್ದು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.
ಕೃಷ್ಣಗಿರಿ ಅರಣ್ಯ ಪ್ರದೇಶದಲ್ಲಿ ನಡೆಸಲಾಗಿದ್ದ ರಾಕೆಟ್ ಉಡಾವಣೆ ಪ್ರಕರಣ ಭೇದಿಸುತ್ತಿದ್ದ ಎನ್ಐಎ ಪೊಲೀಸರು ನಗರದಲ್ಲಿ ಉಗ್ರರ ಇರುವಿಕೆಯ ಸುಳಿವಿನ ಮೇರೆಗೆ ಜಾಲಾಡಿದ್ದರು. ಚಿಕ್ಕಬಾಣಾವರದಲ್ಲಿ ನೆಲೆಸಿದ್ದ ಉಗ್ರ ನಜೀರ್ ಶೇಖ್, ಜಹೀದುಲ್ಲಾ ಇಸ್ಲಾಂ ಮತ್ತು ಆರೀಫ್ ಹುಸೇನ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.