ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ: ನಿಗದಿತ ಅವಧಿಯಲ್ಲಿ ಗಣತಿ ನಮೂನೆ ಸಲ್ಲಿಸಲು ಜಿಲ್ಲಾಧಿಕಾರಿ ಮನವಿ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ: ನಿಗದಿತ ಅವಧಿಯಲ್ಲಿ ಗಣತಿ ನಮೂನೆ ಸಲ್ಲಿಸಲು ಜಿಲ್ಲಾಧಿಕಾರಿ ಮನವಿ  Special Revision of Electoral Rolls: Deputy Commissioner appeals for submission of enumeration forms

ಲೋಕದರ್ಶನ ವರದಿ 

ಧಾರವಾಡ 13: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026ರ ಅಂಗವಾಗಿ ಧಾರವಾಡ ಜಿಲ್ಲೆಯಲ್ಲಿ ಮನೆಮನೆಗೆ ಗಣತಿ ನಮೂನೆಗಳ ವಿತರಣೆ ಕಾರ್ಯ ನಡೆಯುತ್ತಿದ್ದು, ಮತದಾರರು ನಿಗದಿತ ಅವಧಿಯೊಳಗೆ ಭರ್ತಿ ಮಾಡಿದ ನಮೂನೆಗಳನ್ನು ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಅವರಿಗೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್‌. ಮನವಿ ಮಾಡಿದ್ದಾರೆ.  

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಪರಿಷ್ಕರಣೆ ಕಾರ್ಯ ಕೈಗೊಳ್ಳಲಾಗಿದೆ. ಮತದಾರರ ಪಟ್ಟಿಯ ಅರ್ಹತಾ ದಿನಾಂಕವನ್ನು 2026ರ ಅಕ್ಟೋಬರ್ 1 ಎಂದು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.  

ಜೂನ್ 30ರಿಂದ ಜುಲೈ 29ರವರೆಗೆ ಬಿಎಲ್‌ಒಗಳು ಮನೆಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸುತ್ತಿದ್ದಾರೆ. ಕರಡು ಮತದಾರರ ಪಟ್ಟಿಯನ್ನು ಆಗಸ್ಟ್‌ 5ರಂದು ಪ್ರಕಟಿಸಲಾಗುವುದು. ಆಗಸ್ಟ್‌ 5ರಿಂದ ಸೆಪ್ಟೆಂಬರ್ 4ರವರೆಗೆ ಆಕ್ಷೇಪಣೆ ಹಾಗೂ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಅವುಗಳ ಪರೀಶೀಲನೆ ಅಕ್ಟೋಬರ್ 3ರೊಳಗೆ ಪೂರ್ಣಗೊಳ್ಳಲಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 7ರಂದು ಪ್ರಕಟಿಸಲಾಗುವುದು ಎಂದರು.  

ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,665 ಮತಗಟ್ಟೆಗಳು ಇದ್ದು, ಅಷ್ಟೇ ಸಂಖ್ಯೆಯ ಬಿಎಲ್‌ಒಗಳು ಹಾಗೂ 230 ಬಿಎಲ್‌ಒ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 16,21,961 ಮತದಾರರು ಇದ್ದಾರೆ. ಅವರಲ್ಲಿ 15,19,544 ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, ಇದು ಶೇ. 93.69ರಷ್ಟು ಪ್ರಗತಿಯಾಗಿದೆ. ಇದುವರೆಗೆ 3,33,765 ನಮೂನೆಗಳು ಡಿಜಿಟಲೀಕರಣಗೊಂಡಿದ್ದು, ಶೇ. 20.58ರಷ್ಟು ಪ್ರಕ್ರಿಯೆ ಪೂರ್ಣಗೊಂಡಿದೆ.  

ಉಳಿದ ಶೇ. 6.31ರಷ್ಟು ನಮೂನೆಗಳ ವಿತರಣೆ ಹಾಗೂ ಈಗಾಗಲೇ ವಿತರಿಸಲಾದ ನಮೂನೆಗಳ ಡಿಜಿಟಲೀಕರಣ ಕಾರ್ಯ ಮುಂದುವರಿದಿದೆ. ಮತದಾರರು ಭರ್ತಿ ಮಾಡಿದ ನಮೂನೆಗಳನ್ನು ಬಿಎಲ್‌ಒಗಳಿಗೆ ಹಿಂತಿರುಗಿಸದಿದ್ದರೆ, ಸಂಬಂಧಿತ ವಿವರಗಳು ಕರಡು ಮತದಾರರ ಪಟ್ಟಿಯಲ್ಲಿ ಸೇರದೇ ಇರುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.